ಹೊರಟ್ಟಿಯವರು ಭಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ: ಮಾಳಗಿ
ಶಿಗ್ಗಾವಿ : ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಬಸವರಾಜ ಹೊರಟ್ಟಿ ಅವರಿಗೆ ಅವಿಭಾಜ್ಯ ಧಾರವಾಡ ಜಿಲ್ಲೆಯ ಪರಿಶಿಷ್ಟ ಮತ್ತು ಪಂಗಡಗಳ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಬೆಂಬಲ ನೀಡಲು ನಿರ್ಧರಿಸಿದೆ ಎಂದು ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ತಿಳಿಸಿದ್ದಾರೆ.
ಈ ಕುರಿತು ಶಿಗ್ಗಾವಿಯಲ್ಲಿ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಎಂಟನೇ ಬಾರಿಗೆ ಶಿಕ್ಷಕರ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಹೊರಟ್ಟಿ ಯವರು ಭಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ, ಏಳು ಬಾರಿ ಗೆದ್ದು 42 ವರ್ಷಗಳ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಕಾನೂನು, ಪಂಚಾಯತ್ ರಾಜ್, ಶಿಕ್ಷಣ ಸಚಿವರಾಗಿ, ಸಭಾಪತಿಗಳಾಗಿ ಸೇವೆ ಮಾಡಿ ಅಭಿವೃದ್ಧಿ ಮಾಡಿದ್ದು ಜನತೆಗೆ ತಿಳಿದ ವಿಷಯ, ಶಿಕ್ಷಣ ಸಚಿವರಾದ ಸಂದರ್ಭದಲ್ಲಿ ಎಸ್ಸಿಎಸ್ಟಿ ಆಡಳಿತ ಮಂಡಳಿಯವರು ನಡೆಸುತ್ತಿರುವ ಶಾಲಾ ಕಾಲೇಜುಗಳಲ್ಲಿನ ಹತ್ತರಿಂದ ಹದಿನೈದು ವರ್ಷಗಳ ವೇತನವಿಲ್ಲದೆ ಸೇವೆಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ವೇತನ ಅನುದಾನಕ್ಕೆ ಒಳಪಡಿಸಿದವರೇ ಹೊರಟ್ಟಿಯವರು, ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಶಿಕ್ಷಕರ ಬಾಳಿಗೆ ಬೆಳಕಾಗಿ ಹೊರಟ್ಟಿಯವರು ಈಗ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ ಅವರು ಬಹುಮತದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದನದಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದ ವಿಷಯದ ಮೇಲೆ ಒಂಟಿ ಸಲಗದಂತೆ ಘರ್ಜಿಸಿದ ಹೊರಟ್ಟಿಯವರು ಬಿಜೆಪಿ ಪಕ್ಷ ಗೌರವದಿಂದ ಆಹ್ವಾನಿಸಿ ಗೌರವದಿಂದ ಪಕ್ಷದ ಟಿಕೆಟ್ ನೀಡಿದೆ, ಅವರಿಗೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ಎಂಟನೇ ಬಾರಿಗೆ ಬಸವರಾಜ ಹೊರಟ್ಟಿ ಅವರು ಭಾರಿ ಬೆಂಬಲದಿಂದ ಆಯ್ಕೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.