ಲೇಖನಗಳು

ದೈವಸ್ವರೂಪಿ ತಂದೆ-ತಾಯಿಯನ್ನು ಗೌರವಿಸುವ ಭಾವ ನಮ್ಮದಾಗಲಿ...

ದೈವಸ್ವರೂಪಿ ತಂದೆ-ತಾಯಿಯನ್ನು ಗೌರವಿಸುವ ಭಾವ ನಮ್ಮದಾಗಲಿ...

ಖ್ಯಾತ್ ತತ್ವಶಾಸ್ತ್ರಜ್ಞ ಹೆನ್ರಿ ವಾರ್ಡ ಬೀಚರ್ ರವರ ಆ ದೇವರು ಕಣ್ಣಿಗೆ ಕಾಣಿಸಲ್ಲ. ಈ ಜಗತ್ತಿನಲ್ಲಿ ನಮ್ಮ ತಂದೆ-ತಾಯಿರೇ ನಿಜವಾದ ಮತ್ತು ಕಣ್ಣಿಗೆ ಕಾಣಸಿಗುವ ದೈವಶಕ್ತಿಯ ಪ್ರತಿರೂಪ. ಅದಕ್ಕಾಗಿ ಪ್ರತಿಯೊಬ್ಬರು ಜನ್ಮ ನೀಡಿದ ತಂದೆ-ತಾಯಿಯರನ್ನು ಪ್ರೀತಿಸಿ-ಗೌರವಿಸಬೇಕು. ಅವರನ್ನು ವೃದ್ಧಾಪ್ಯದಂತಹ ಸಂದರ್ಭದಲ್ಲಿ ಕಡೆಸಬಾರದು. ಅಂದಾಗ ಮಾತ್ರ ನಾವು ನೈಜದೇವರನ್ನು ಒಲಿಸಿಕೊಂಡಂತೆಯೇ ಸರಿ” ಎಂದು ಹೇಳಿದ್ದಾರೆ. ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು-ಹೆತ್ತು ತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ಸದಸ್ಯರ ಒಳಿತಿಗಾಗಿ ಸದಾ ಜೀವನವನ್ನೇ ಸವೆಯುತ್ತಿರುವ ತ್ಯಾಗಜೀವಿ ಎಂದರೆ ಅವಳೇ ತಾಯಿ. ಕೂಲಿ-ನಾಲಿಯನ್ನಾದರೂ ಮಾಡಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಬದುಕಿಗೊಂದು ಆಸರೆ ಕಲ್ಪಿಸಿ ಅವರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಗಳನ್ನಾಗಿಸಲು ಯಾವಾಗಲೂ ಚಿಂತಿಸುತ್ತಿರುವ ತಂದೆ-ಪೋಷಕರ ಪಾತ್ರ ಅನನ್ಯವಾದುದು.  

“ಅಮ್ಮ ನಿನ್ನ ಈ ಜನುಮ, ನನ್ನ ವರದಾನಮ್ಮ ಎಂಬ ಗೀತೆಯ ಸಾಲುಗಳಿಂದ ಅಮ್ಮ ಎಂಬ ಎರಡರಕ್ಷರದ ಪದದ ಶಕ್ತಿಯು ಅಪರಿಮಿತ ಮತ್ತು ಅರ್ಥಪೂರ್ಣವಾಗಿರುತ್ತದೆ. ಜನರ ಕಷ್ಟ-ಕಾರ​‍್ಪಣಯಗಳನ್ನು ನಿವಾರಿಸಲು ಹಾಗೂ ಎಲ್ಲ ಸಂಕಷ್ಟಗಳಿಂದ ಜನರನ್ನು ಕಾಯಲು ದೇವರಿಗೆ ಆಗದೆಂದು ತಾಯಿ ಎಂಬ ಸ್ವರೂಪದ ದೇವತೆಯನ್ನು ಸೃಷ್ಟಿಸಿದ್ದಾನೆ. ಆದ್ದರಿಂದ ಅಮ್ಮ ಎಂಬ ಪರಮದೈವ ನಮ್ಮ ಜೊತೆಗಿದ್ದರೆ ಸಮಸ್ಯೆಗಳು ಹತ್ತಿರವೇ ಸುಳಿಯುವುದಿಲ್ಲ. ಒಂದು ವೇಳೆ ಬಂದರೂ ಅವೆಲ್ಲವುಗಳಿಗೆ ತಾಯಿಯೆಂಬ ಅಗಣಿತ ಶಕ್ತಿದೇವತೆ ಹೊಡೆದೋಡಿಸುವಳು. ನಮ್ಮನ್ನು ಹೊತ್ತು, ಹೆತ್ತು, ಪಾಲನೆ-ಪೋಷಣೆ, ಕಲಿಸಿ-ಬೆಳೆಸಿ, ತಿದ್ದಿ-ತೀಡಿ, ಜೀವನ-ಬದುಕಿನ ಕಲೆ-ನೆಲೆಯನ್ನು ತಿಳಿಸಿಕೊಟ್ಟು ನಮ್ಮಲ್ಲಿ ಜೀವನ-ಮೌಲ್ಯ, ಆದರ್ಶ, ನೈತಿಕತೆ, ಸದ್ಗುಣ, ಸದ್ವಿಚಾರ, ಸನ್ನಡತೆ, ಸಂಸ್ಕೃತಿ-ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಮತ್ತು ಸತ್ಕಾರ್ಯಗಳನ್ನು ಒಡಮೂಡಿಸುವ ಶ್ರೇಷ್ಠ ಗುರುವೆಂದರೆ ತಾಯಿ ದೇವರು ಎನ್ನಬಹುದು.  

ಆದರೆ ದುರದೃಷ್ಟವಶಾತ್ ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ಗ್ರಹಸ್ಥರನ್ನಾಗಿ ಮಾಡಿ ಸದಾ ಮಕ್ಕಳ ಅಭಿವೃದ್ಧಿಯನ್ನೇ ಬಯಸುವ ತಂದೆ-ತಾಯಿಯರನ್ನು ನೋಡಿಕೊಳ್ಳುವ ರೀತಿ-ನೀತಿ, ನೀಡುವ ಗೌರವ, ಆರೋಗ್ಯ ರಕ್ಷಣೆ ಇಲ್ಲದಂತಾಗಿ ಬಹಳ ಕ್ರೌರ್ಯದಿಂದ ಕಾಣುವದು ಮತ್ತು ಚಿತ್ರಹಿಂಸೆ ನೀಡುತ್ತಿರುವದನ್ನು ಕಂಡರೆ ಮನಕಲುಕುವಂತಾಗುತ್ತದೆ. ಇಂದಿನ ಆಧುನಿಕ ಭರಾಟೆಯಲ್ಲಿ ಕೇವಲ ಹಣ ಗಳಿಕೆಯತ್ತ ಸಾಗುತ್ತಿರುವ ನಮ್ಮಜನ ಹಿರಿಯ ಜೀವಿಗಳಾದ ವಯೋವೃದ್ಧ ತಂದೆ-ತಾಯಿಯರನ್ನು ಕಡೆಗಣಿಸುವ, ತಿರಸ್ಕರಿಸುವ ಮತ್ತು ತಮ್ಮ ಜೊತೆಗೆ ಬದುಕಲು ನಿರಾಕರಿಸುತ್ತಿರುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಯಾರಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ತಮ್ಮೆಲ್ಲ ಆಶೋತ್ತರಗಳನ್ನು ಗಮನಿಸದೇ ಕೇವಲ ಮಕ್ಕಳಿಗಾಗಿಯೇ ಬದುಕಿ-ಮಕ್ಕಳಿಗಾಗಿಯೇ ಏನೆಲ್ಲ ಆಸ್ತಿ ಮಾಡಿಟ್ಟು, ಕೂಡಿಟ್ಟ ಅದೇಷ್ಟೋ ತಂದೆ-ತಾಯಿಯಂದಿರು ವೃದ್ಧಾಶ್ರಮಕ್ಕೆ ಸೇರುವ ಸನ್ನಿವೇಶಗಳು ನಮ್ಮುಂದಿವೆ.  

ಆದ್ದರಿಂದ ನಾವು ನಮ್ಮ ಜನ್ಮ ನೀಡಿದ ತಂದೆ-ತಾಯಿಯರನ್ನು ವೃದ್ದಾಪ್ಯದಂತಹ ವಯಸ್ಸಿಯಲ್ಲಿ ಮಾನಸಿಕವಾಗಿ ಸ್ಥೈರ್ಯ ತುಂಬಿ ಬದುಕಿಗೊಂದು ಅಸರೆಯಾಗಿ ಅವರು ಸುಖ-ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ಅತಿ ಕಾಳಜಿ ಪೂರ್ವಕವಾಗಿ ಕಂಡು ಅವರ ಮನ ನೋಯಿಸದೇ ಅವರು ನಮ್ಮ ಮಕ್ಕಳೆಂಬ ಭಾವದಿಂದ ಕಾಣವಂತಾಗಬೇಕು. ನಿಜವಾದ ದೇವರೆಂದರೆ ಅಪ್ಪ-ಅಮ್ಮ ಎಂಬುದನ್ನು ಅರಿತು ಅವರನ್ನು ಗೌರವದಿಂದ ಕಾಣುವ ಮನೋಭಾವವು ನಮ್ಮಲ್ಲಿ ಒಡಮೂಡಬೇಕು. ಈ ಜಗತ್ತಿನಲ್ಲಿ ಅಥವಾ ಲೋಕದಲ್ಲಿ ದೈವ ಸ್ವರೂಪಿಗಳಾದ ಅಪ್ಪ-ಅಮ್ಮರನ್ನು ಉತ್ತಮ ರೀತಿಯಿಂದ ಕಂಡು ಅವರ ಅನುಭವ, ಮಾರ್ಗದರ್ಶನ ಮತ್ತು ಕುಟುಂಬ ನಿರ್ವಹಣೆಯಲ್ಲಿ ಸೂಕ್ತ ಸಲಹೆ ಪಡೆದು ಮನೇಯೇ ದೇವಾಲಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ. ಇಂದು ವಯೋವೃದ್ಧ ಹಿರಿಯ ಜೀವಿಗಳು ಕುಟುಂಬದಲ್ಲಿ ನೀಡುವ ಹಿಂಸೆ, ಅಗೌರವ ಮತ್ತು ನೀಡುವ ಕಷ್ಟಗಳಿಂದ ನೊಂದು-ಬೆಂದು, ಮನನೊಂದು ಕೊನೆಗೆ ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿಯು ನಮ್ಮ ಸಂಸ್ಕೃತಿಗೆ ಒಂದು ಕಪ್ಪುಚಿಕ್ಕೆ ಬಿದ್ದಂತಾಗಿದೆ. ಬಡತನ-ಶ್ರೀಮಂತಿಕೆಯ ಹಂಗುಮೀರಿದ, ದಿಕ್ಕಿಲ್ಲದ ಅನೇಕ ವಯೋವೃದ್ಧ ಹಿರಿಯ ಜೀವಿಗಳ ಬದುಕು ತೀರಾ ಅತಂತ್ರವಾಗುತ್ತಾ ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ ದುಸ್ಥಿತಿಗೆ ನಾವೆಲ್ಲರೂ ಅಸಹ್ಯಪಡಬೇಕಾಗಿದೆ.  

ಅಷ್ಟೇ ಅಲ್ಲದೇ ಮಕ್ಕಳೇ ತನ್ನೇಲ್ಲಾ ಸರ್ವಸ್ವವೆಂದು ತಿಳಿದು ಇಡೀ ಬದುಕನ್ನೇ ಅವರಿಗಾಗಿಯೇ ಸಮರ​‍್ಿಸಿದ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಮತ್ತು ಪೋಷಕರನ್ನು ಅವರ ಜೀವನದ ಸಂಧ್ಯಾಕಾಲದಲ್ಲಿ ನೋಡಿಕೊಳ್ಳುವವರು ಯಾರು? ಎಂಬ ಪ್ರಶ್ನೆಗೆ ಉತ್ತರಗಳೇ ಸಿಗುತ್ತಿಲ್ಲ. ವಯಸ್ಸಾದ ನಂತರ ಆರೋಗ್ಯ ಸಮಸ್ಯೆ, ದೈಹಿಕ-ಮಾನಸಿಕವಾಗಿ ಕುಂದು ಹೋಗಿರುವ ಮತ್ತು ಜೀವನವೇ ಇಷ್ಟೇ ಎಂಬ ಭಾವ ತಾಳಿ, ಮಕ್ಕಳೊಂದಿಗೆ ಮಕ್ಕಳಾಗಿ ಬದುಕಿ ಕಾಲ ಕಳೆಯುತ್ತಿರುವ ತಂದೆ-ತಾಯಿ ಗಳಿಸಿಟ್ಟ ಹಣ, ನಗ-ನಾಣ್ಯ, ಆಸ್ತಿ-ಪಾಸ್ತಿ ಮತ್ತುಇತರಎಲ್ಲ ವಸ್ತುಗಳು ಮಕ್ಕಳಿಗೆ ಬೇಕು. ಆದರೆ ಚಿಕ್ಕಂದಿನಲ್ಲಿ ತಂದೆ-ತಾಯಿಯೇ ನೈಜ ದೇವರು ಎಂದು ಗೌರವಿಸುವ ನಾವಿಂದು ಹಿರಿಯ ಜೀವಿಗಳನ್ನು ತಿರಸ್ಕಾರ ಭಾವದಿಂದ ಕಾಣುವುದು ಸರಿಯಲ್ಲ. ಮೊಮ್ಮಕ್ಕಳೊಂದಿಗೆ ನಕ್ಕು-ನಲಿದು ಅಂಬೆಗಾಲಿಕ್ಕುತ್ತಾ ಆಟವಾಡುವ ಮತ್ತು ಮಕ್ಕಳೊಂದಿಗೆ ಮಕ್ಕಳಾಗಿ ಬದುಕುವ, ಸದಾ ಅಧ್ಯಾತ್ಮ-ಪ್ರವಚನ ಮತ್ತು ದೇವರ ನಾಮಸ್ಮರಣೆ ಪಠಿಸುತ್ತಾ ಕಾಲ ಕಳೆಯುತ್ತಿರುವ ಹಿರಿಯ ಜೀವಿಗಳನ್ನು ತುಂಬಾ ಪ್ರೀತಿ, ವಾತ್ಸಲ್ಯ ಮತ್ತು ಕರುಣೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಅರಿಯಬೇಕು. ನಮ್ಮನ್ನು ಈ ಭೂಮಿಗೆ ಬರಲು ಕಾರಣಿಕರ್ತರಾಗಿ ಹುಟ್ಟಿನಿಂದ ಬೆಳೆದು ದೊಡ್ಡವರಾಗುವವರೆಗೂ ಬದುಕಿನಲ್ಲಿ ಏನೇ ಬರಲಿ ಸಂತೋಷದಿಂದ ಎದುರಿಸಿ, ನಮಗಾಗಿ ಏನೆಲ್ಲವನ್ನು ತ್ಯಾಗ ಮಾಡಿದ ಶ್ರಮಜೀವಿಗಳನ್ನು ಅತಿಗೌರವಯುತವಾಗಿ ಕಾಣುವ ಮನೋಭಾವ ನಮ್ಮದಾಗಬೇಕು.  

ಅಮೂಲ್ಯವಾದ ಅನುಭವ, ಸಂಸ್ಕೃತಿ-ಸಂಸ್ಕಾರದ ಪ್ರತೀಕ, ಸಂಪ್ರದಾಯ, ಆಚರಣೆ ಮತ್ತು ಪದ್ಧತಿಗಳ ಅನುಸರಣೆಯ ಪ್ರತಿಬಿಂಬವಾಗಿರುವ ನಮ್ಮ ಹಿರಿಯರಾದ ಅಜ್ಜ-ಅಜ್ಜಿ, ತಂದೆ-ತಾಯಿ ಮತ್ತು ಇತರ ಕುಟುಂಬದ ವಯೋವೃದ್ಧ ಹಿರಿಯ ಜೀವಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದು ಜೀವನವನ್ನು ಪಾವನ ಮಾಡಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ-ಸಂಸ್ಕಾರ, ಮನೆಯ ಪದ್ಧತಿ, ಆಚರಣೆ ಮತ್ತು ಸಾಮಾಜಿಕ-ಧಾರ್ಮಿಕ ವಿಧಿವಿಧಾನಗಳನ್ನು ಪರಿಚಯಿಸಲು ಹಾಗೂ ಉಳಿಸಿ-ಬೆಳೆಸಲು ನಮ್ಮ ಹಿರಿಯರು ನಮಗೆ ಬೇಕು. ಆದ್ದರಿಂದ ನಮಗೆ ಜನ್ಮ ನೀಡಿ, ತಪ್ಪು ಮಾಡಿದಾಗ ತಿದ್ದಿ-ತೀಡಿ, ಶಿಕ್ಷಣ ನೀಡಿ, ಉದ್ಯೋಗ ದೊರಕಲು ಸದಾಶಯ ಮಾಡಿದ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದ ಅವರನ್ನು ಗೌರವ-ಪೂಜ್ಯನೀಯ ಭಾವನೆಯಿಂದ ಕಾಣುವಂತಹ ಮನೋಧರ್ಮವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. 

ಕೊನೆಯ ಮಾತು: ಆದ್ದರಿಂದ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ, ಪರಂಪರೆ ಮತ್ತು ಭಾವನಾತ್ಮಕ ವ್ಯವಸ್ಥೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ ವಯೋವೃದ್ಧ ತಂದೆ-ತಾಯಿಯರನ್ನು ಮನೆಯಿಂದ ದೂರ ತಳ್ಳಿ ಅವರು ವೃದ್ಧಾಶ್ರಮ ಸೇರುವಂತಹ ದುಸ್ಥಿತಿ ಬರದಂತೆ ನಾವೆಲ್ಲರೂ ಅವರನ್ನು ನಮ್ಮ ಮಕ್ಕಳಂತೆ ಕಾಣುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮತ್ತು ಪ್ರೀತಿ-ವಾತ್ಸಲ್ಯ, ತಾಯಿ ಹೃದಯದಿಂದ ಉಪಚರಿಸುವಂತೆ ಮತ್ತು ಗೌರಯುತವಾಗಿ ಕಾಣುವಂತಹ ವಾತಾವರಣ ಪ್ರತಿ ಮನೆ, ಕುಟುಂಬ ಮತ್ತು ಕುಟುಂಬದ ಸದಸ್ಯರಲ್ಲಿ ಅರಿವು ಮೂಡಬೇಕು. ದೇವರು ಬೇರೆಲ್ಲೂ ಇಲ್ಲ, ಅವರು ನಮ್ಮ ಹಿರಿಯ ಜೀವಿಗಳ ರೂಪದಲ್ಲೇ ಇರುತ್ತಾನೆ ಎಂಬುದನ್ನು ಅರಿತು ವಯೋ ಸಹಜವಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಂದು ಹೋಗುತ್ತಿರುವ ಅವರನ್ನು ಗೌರವದಿಂದ ಕಂಡು ಸಂತೋಷ-ಖುಷಿಯಾಗಿ ಇನ್ನಷ್ಟು ಕಾಲ ಮಕ್ಕಳು-ಮೊಮ್ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಾಗಿ ನೂರು ಕಾಲ ಬಾಳಿ-ಬದುಕುವಂತೆ ನೋಡಿಕೊಂಡಾಗ ಮಾತ್ರ ನಾವು ಅವರ ವಂಶದ ಕುಡಿಗಳಾಗಿ ಅವರ ಋಣ ತೀರಿಸುವುದು ನಮ್ಮ ಕರ್ತವ್ಯವಾಗಿದೆ, ಅಷ್ಟೇ ಅಲ್ಲದೇ ಮುಂದೆ ನಮ್ಮ ಮಕ್ಕಳು ವಯೋವೃದ್ಧರಾದ ಸಂದರ್ಭದಲ್ಲಿ ನಮ್ಮನ್ನು ವೃದ್ಧಾಶ್ರಮಗಳಿಗೆ ಕಳಿಸಬಾರದೆಂದು ಕನಿಷ್ಠ ವಿಷಯವನ್ನು ಅರ್ಥೈಸಿಕೊಂಡು ಹಿರಿಯ ಜೀವಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ.  

- ಮಲ್ಲಪ್ಪ. ಸಿ. ಖೊದ್ನಾಪೂರ  

(ತಿಕೋಟಾ) 



ಸುದ್ದಿ ಓದಿ