ಮುಂದಗೋಡ

ರಂಗು ಗುಂಗಿನ ಸಂಭ್ರಮದ ಹೋಳಿ

ರಂಗು ಗುಂಗಿನ ಸಂಭ್ರಮದ ಹೋಳಿ

ಮುಂಡಗೋಡ 01: ಗುರುವಾರ ಪಟ್ಟಣದಲ್ಲಿ ರಂಗು ಗುಂಗಿನ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದ ಹೋಳಿ ವಿವಿಧ ಬಡಾವಣೆಗಳ ಪ್ರಾರಂಭವಾಗಿ ಮಧ್ಯಾಹ್ನದ ವೇಳೆಗೆ ತೀವ್ರ ಬಿರುಸು ಪಡೆದುಕೊಂಡಿತು. ಮಕ್ಕಳು ಮಹಿಳೆಯರು, ವೃದ್ದರು ಎಂಬ ಬೇದ ಭಾವವಿಲ್ಲದೇ ಪರಸ್ಪರ ಬಣ್ಣ ಎರಚಿ ಓಕುಳಿ ಆಟವಾಡಿದರು.

ಮೆರವಣಿಗೆ ಇಲ್ಲದರ ನಡುವೆಯೂ ಸಂಭ್ರಮದ ಹೋಳಿ: ಪಟ್ಟಣದ ಹಳೂರ ಬಡಾವಣೆ, ಬಸವನಬೀದಿ, ಆನಂದನಗರ, ಹೊಸ ಓಣಿ, ಕಂಬಾರಗಟ್ಟಿ, ಗಾಂಧಿನಗರ, ನೇಹರು ನಗರ, ಲಮಾಣಿ ತಾಂಡಾ ವಿವಿದ ಬಡಾವಣೆಗಳು ಸೇರಿದಂತೆ 10 ಕ್ಕೂ ಹೆಚ್ಚು ರತಿ ಕಾಮನ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ದಿನದಂದು ಎಲ್ಲ ಬಡಾವಣೆಯ ರತಿ ಕಾಮನ ಮೂರ್ತಿಗಳು ಒಂದು ಕಡೆ ಸೇರಿ ಪಟ್ಟಣದಲ್ಲಿ ಸಾಮೂಹಿಕ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಬಾರಿ ಕೋವಿಡ್ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಸರ್ಕಾರದ ಆದೇಶದಂತೆ ಸಾಮೂಹಿಕ ಮರವಣಿಗೆ ರದ್ದುಗೊಳಿಸಲಾಗಿದೆ.  ಮೆರವಣಿಗೆ ಹೊರತುಪಡಿಸಿ ಈ ಬಾರಿಯು ಸಹ 5 ದಿನಗಳ ಕಾಲ ರತಿ ಕಾಮನ ಮೂರ್ತಿ ಕೂರಿಸಿ ಕೊನೆಯ ದಿನವಾದ ಗುರುವಾರ ಸಂಭ್ರದಿಂದ ಹೋಳಿ ಆಚರಿಸಿ ಸಂಜೆ ವೇಳೆಗೆ ಅವರವರ ಬಡಾವಣೆಯಲ್ಲಿಯೇ ಕಾಮನ ಮೂರ್ತಿ ದಹನ ಮಾಡಲಾಯಿತು.  

ಮಹಿಳೆಯರ ಉತ್ಸಾಹದ ಹೋಳಿ: ಕೆಲ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಪರಸ್ಪರ  ಬಣ್ಣ ಎರಚುವ ಮೂಲಕ ಮೈ ನವಿರೇಳುವಂತೆ ಕುಣಿದು ಚೀರಾಡುತ್ತ ಮೋಜು ಮಸ್ತಿ ಮಾಡಿದ್ದು, ಹೋಳಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತು. 

ಹೋಳಿ ಪ್ರಯುಕ್ತ ಸರಕಾರಿ ಕಚೇರಿಗಳು ಹೊರತುಪಡಿಸಿ ನಗರದ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಯಾವ ಕಡೆ ನೋಡಿದರೂ ಎಲ್ಲೆಂದರಲ್ಲಿ ಬಣ್ಣದ ಓಕುಳಿ ಆಡುವವರದ್ದೇ ಕಾರೋಬಾರು ಕಂಡು ಬರುತ್ತಿತ್ತು. ಇದರಿಂದ ಗ್ರಾಮೀಣ ಭಾಗದಿಂದ ಕಾರ್ಯನಿಮಿತ್ತ ಇಲ್ಲಿಗೆ ಆಗಮಿಸಿದ್ದವರು ಅಂಗಡಿಗಳೆಲ್ಲ ಬಂದ್ ಇದ್ದಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗಬೇಕಾಯಿತು. 

ಬಿಗಿ ಪೊಲೀಸ ಬಂದೋಬಸ್ತ್: ಯಾವುದೇ ಅಹಿತಕ ಘಟನೆ ನಡೆಯದಂತೆ ಪೊಲೀಸ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಕಾಯ್ದಿಟ್ಟ ತುರ್ತು ಪೊಲೀಸ್ ತಕಡಿಗಳು ಸೇರಿದಂತೆ ನೂರಾರು ಪೊಲೀಸರು ಕಾರ್ಯನಿರ್ವಹಿಸಿದರು.

ಸುದ್ದಿ ಓದಿ