ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ: ಎಸ್.ಡಿ.ಮುಡೆಣ್ಣವರ
ಮುಂಡಗೋಡ:ವಿದ್ಯಾರ್ಥಿ ಜೀವನದಲ್ಲಿ ರಾಜಕಾರಣದತ್ತ ಆಸಕ್ತಿ ತೋರಬಾರದು ದುಶ್ಚಟಗಳಿಗೆ ಬಲಿಯಾಗಬಾರದು ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಆದಿಜಾಂಭವ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಡಿ.ಮುಡೆಣ್ಣವರ ಹೇಳಿದರು.
ತಾಲೂಕಿನ ಟಿಬೆಟಿಯನ್ ಕಾಲನಿಯ ಕ್ಯಾಂಪ್ ನಂ.1ರ ಗಾದೆನ್ ಶಾರ್ಟ್ಸೆ ಸಭಾಭವನದಲ್ಲಿ ರವಿವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ.)ಯ ರಾಜ್ಯಮಟ್ಟದ ಪದಧಿಕಾರಿಗಳ ಎರಡನೇ ದಿನದ ಅಧ್ಯಯನ ಶಿಬಿರದ ಸಮಾರೋಪ ಸಮರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸಂಚಾಲಕಿ ರತ್ನಮ್ಮ ಮಾತನಾಡಿ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ದೊಡ್ಡ ಭಾರ ಹೊರಿಸುತ್ತಾರೆ. ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮ್ಮ ಸಮುದಾಯವನ್ನು ಮೇಲಕ್ಕೆತ್ತುವ ಕೆಲಸವಾಗಬೇಕು ಎಂದರು.
ಗೆಶೆ ಲೋಬ್ಸಂಗ್ ಟೆಂಪಾ ಮಾತನಾಡಿ ತರಬೇತಿಯಲ್ಲಿ ಪಡೆದ ಮಾಹಿತಿಗಳ ಸದುಪಯೋಗ ಪಡೆದುಕೊಂಡರೆ ತರಬೇತಿ ಸಾರ್ಥಕವಾದಂತೆ. ಪ್ರಶ್ನೆ ಮತ್ತು ಪ್ರತಿಕ್ರಿಯೆ, ದಲಿತ ವರ್ಗದವರ ಒಗ್ಗಟ್ಟು ನೋಡಿ ಸಂತಸವಾಯಿತು. ಎರಡು ದಿನಗಳ ತರಬೇತಿ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆಯಿತು. ಟಿಬೆಟ್ನವರಲ್ಲಿ ಒಗ್ಗಟ್ಟು ಇಲ್ಲದ ಕಾರಣ ಚೀನಾದವರಿಗೆ ಆಕ್ರಮಣ ಮಾಡಲು ಅನುಕೂಲವಾಯಿತು. ದಲಿತ ವರ್ಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಪಾಲಕರು ಮಾಡಬೇಕು ಎಂದರು.
ಗೆಶೆ ಚಂಗ್ಚುಪ್ ಸಂಘೆ ಮಾತನಾಡಿ ತರಬೇತಿ ಶಿಬಿರದಿಂದ ಹಲವಾರು ವಿಷಯಗಳ ಬಗ್ಗೆ ತಿಳಿಯಲಾಯಿತು. ಸಂಘಟಕರ ಸಹಕಾರದಿಂದ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆಯಿತು. ದಲಿತ ವರ್ಗದವರ ಒಬ್ಬರಿಗೊಬ್ಬರ ಸಹಕಾರ ಮತ್ತು ಒಗ್ಗಟ್ಟು ಎರಡು ದಿನಗಳ ಕಾರ್ಯಕ್ರಮದಿಂದ ನಮಗೆ ತುಂಬಾ ಸಂತೋಷವಾಯಿತು. ಇದೇ ರೀತಿಯಾಗಿ ಮುಂದೆ ಟಿಬೆಟಿಯನ್ನರ ಸಹಾಯದಿಂದ ಕಾರ್ಯಕ್ರಮಗಳನ್ನು ಆಯೋಜಿಸೋಣ ಎಂದರು. ಅಬಿಗೌಡ ಸಮಾರೋಪ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಗೆಶೆ ಲೋಬ್ಸಂಗ್ ಟೆಂಪಾ, ಗೆಶೆ ಚಂಗ್ಚುಪ್ ಸಂಘೆ, ಶ್ರೀಧರ ಕಲವೀರ, ಜಂಪಾ ಲಾಮಾ, ಎಮ್.ಗುರುಮೂರ್ತಿ, ಸಂಪನ್ಮೂಲ ವ್ಯಕ್ತಿಗಳನ್ನು, ರಾಜ್ಯ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಬಿ.ಎಲ್.ರಾಜು, ಎಮ್.ಗುರುಮೂರ್ತಿ, ಎಸ್.ಫಕ್ಕೀರ್ಪ, ಬಿ.ಎನ್.ಗಂಗಾಧರ್ಪ, ಹನುಮಂತಪ್ಪ ಕಾಕರಗಲ್, ವೆಂಕಟೇಶ ನಾಗಮಂಗಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.