ಸಂತ್ರಸ್ತರ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್: ಸೆ.16ರಂದು ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘಟನೆ ನಿರ್ಧಾರ
ಕೊಲ್ಹಾರ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಕೊಲ್ಹಾರ ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯ ಸಂತ್ರಸ್ತರಿಗೆ ನಿವೇಶನ ಹಂಚಿಕೆ, ಉತಾರೆ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ನೇತೃತ್ವದಲ್ಲಿ ಗುರುವಾರ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸೆ. 16ರೊಳಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕೊಲ್ಹಾರಕ್ಕೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಇಲ್ಲವಾದಲ್ಲಿ ಅಂದು ಬೆಳಿಗ್ಗೆ 12 ಗಂಟೆಗೆ ಪಟ್ಟಣ ಪಂಚಾಯಿತಿ ಎದುರು ಬೃಹತ್ ರೈತ ಜನತಾ ಸಭೆ ನಡೆಸಿ, ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರ ಸೇತುವೆ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಹಾಗೂ ಸಂತ್ರಸ್ತರು ಎಚ್ಚರಿಸಿದರು.
ನಿವೇಶನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ನಿವಾರಿಸಿ, ಸಿಓಡಿ ಪ್ರಕರಣ ಹೊರತುಪಡಿಸಿ ನೈಜ ಸಂತ್ರಸ್ತರಿಗೆ ಯಾವುದೇ ದಾಖಲೆಗಳ ನೆಪವೊಡ್ಡದೆ ಉತಾರೆ ನೀಡಬೇಕು. ಸಿಓಡಿ ತನಿಖಾ ವರದಿಯನ್ನು ಬಹಿರಂಗಪಡಿಸಿ, ವರದಿ ವಿಳಂಬಕ್ಕೆ ಕಾರಣ ತಿಳಿಸಬೇಕು ಎಂದು ಒತ್ತಾಯಿಸಿದರು.ಸಂತ್ರಸ್ತ ಕುಟುಂಬಗಳಲ್ಲಿನ ಎಲ್ಲ ಮಕ್ಕಳಿಗೂ ನಿವೇಶನ ನೀಡಬೇಕು. ಬಡತನದ ಕಾರಣದಿಂದ ಮಾರಾಟ ಮಾಡಿರುವ ಅಥವಾ ಪಡೆದಿರುವ ನಿವೇಶನಗಳ ರದ್ದು ಆದೇಶವನ್ನು ಹಿಂಪಡೆಯಬೇಕು. ಕೊಲ್ಹಾರ ಪಟ್ಟಣದ ಅಸಮರ್ಪಕ ಒಳಚರಂಡಿ ಕಾಮಗಾರಿಯನ್ನು ಸರಿಪಡಿಸಿ, ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಳವಾಡ ಏತ ನೀರಾವರಿ ‘ಎ’ ಮತ್ತು ‘ಬಿ’ ಸ್ಕೀಮ್ ಕಾಲುವೆಗಳ ಮೂಲಕ ಅಖಂಡ ವಿಜಯಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಲು 2027ರ ಜನವರಿಯಿಂದ ಜುಲೈವರೆಗೆ 20 ಟಿಎಂಸಿ ನೀರು ಕಾಯ್ದಿರಿಸಬೇಕು. ರೈತರ ಜಮೀನುಗಳಿಗೆ ನಿರಂತರ 2 ಫೇಸ್ ಹಾಗೂ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸೆ. 16ರಂದು ನಡೆಯುವ ಸಭೆಗೆ ವಿಜಯಪುರ ಜಿಲ್ಲಾಧಿಕಾರಿ, ಬಾಗಲಕೋಟೆ ಪುನರ್ವಸತಿ ಹಾಗೂ ಭೂಸ್ವಾಧೀನ ಅಧಿಕಾರಿಗಳು, ಆಲಮಟ್ಟಿ ಪುನರ್ವಸತಿ ಅಧಿಕಾರಿಗಳು, ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಹಾಗೂ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ಖುದ್ದಾಗಿ ಹಾಜರಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಹೆದ್ದಾರಿ ಹಾಗೂ ಸೇತುವೆ ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.ಇದೆ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಕಲ್ಲಪ್ಪ ಗಿಡ್ಡಪ್ಪಗೋಳ, ರಮೇಶ ಬೀಳಗಿ, ಶಶಿಕಾಂತ ಬಿರಾದಾರ, ಸತೀಶ ಕುಲ್ಲಳ್ಳಿ, ಮುದಕನ್ನ ಚಲವಾದಿ, ಯಮನಪ್ಪ ಬಿಸ್ಟಗೊಂಡ, ಸಂಗಪ್ಪ ಗುಳಗೊಂಡ ಸೇರಿದಂತೆ ಸಂತ್ರಸ್ತರು ಹಾಗೂ ರೈತ ಮುಖಂಡರು ಇದ್ದರು.