ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ: ಬಿಎಸ್ವೈ ಸೂಚನೆ
ಬಳ್ಳಾರಿ 20: ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ನದಿ ತೀರದ ಗ್ರಾಮಗಳ ಜನರ ನೆರವಿಗೆ ಅಧಿಕಾರಿಗಳು ಧಾವಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ್ಪ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕಳೆದ ಹಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಆಗಿರುವ ಹಾನಿ, ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಮತ್ತು ಪರಿಹಾರ ಕುರಿತು ರಾಜ್ಯದ 12 ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಗೃಹ ಕಚೇರಿ ಕೃಷ್ಣಾದಿಂದ ಮಂಗಳವಾರ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷ ಎದುರಾಗುವ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಾಗುತ್ತಿದೆ. ಈ ವರ್ಷವು ಕೂಡ ಎಲ್ಲಾ ರೀತಿಯ ಸಿದ್ದತಾ ಕ್ರಮಗಳನ್ನು ಕೈಗೊಳ್ಳಿ. ಮಳೆ ಹೆಚ್ಚಾದಾಗ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳ ಮೂಲಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಎಂದರು.
ಪ್ರವಾಹದಿಂದ ನಷ್ಟ ಅನುಭವಿಸಿದವರಿಗೆ ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ ಶೀಘ್ರವಾಗಿ ಪರಿಹಾರ ನೀಡಿ, ಯಾವುದೇ ಕಾಮಗಾರಿ ಕೆಲಸಗಳನು ಅರ್ಧಕ್ಕೆ ನಿಲ್ಲಿಸಬೇಡಿ, ಹಣದ ಕೊರತೆಯಿದ್ದರೆ ನಮ್ಮ ಗಮನಕ್ಕೆ ತನ್ನಿ, ಅವಶ್ಯಕತೆಯಿರುವ ಕಡೆ ಆದಷ್ಟು ಬೇಗ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮಾತನಾಡಿ ಜಿಲ್ಲೆಯಲ್ಲಿ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ಹಡಗಲಿಯ್ಲಿ ಇಬ್ಬರು ನದಿಗೆ ಕೊಚ್ಚಿ ಹೋಗಿದ್ದು, ಒಬ್ಬರಿಗೆ ರೂ.5ಲಕ್ಷದಂತೆ ಈಗಾಗಲೇ 10 ಲಕ್ಷ ಪರಿಹಾರ ನೀಡಲಾಗಿದೆ. 9 ಜಾನುವಾರುಗಳು ಜೀವ ಕಳೆದುಕೊಂಡಿದ್ದು,ಅವುಗಳಿಗೆ ಸಂಬಂಧಿಸಿದಂತೆಯೂ ಸಹ ಪರಿಹಾರ ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜೂನ್ನಿಂದ ಇಲ್ಲಿಯವರಗೆ ವಾಡಿಕೆಗಿಂತ ಶೆ.60ರಷ್ಟು ಜಾಸ್ತಿ ಮಳೆಯಾಗಿದ್ದು, ಅಪಾರ ಮಳೆಯಿಂದಾಗಿ ಇದುವರೆಗೆ 120 ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ 2 ಮನೆಗೆ ತೀವ್ರವಾಗಿ ಹಾನಿಯಾಗಿದೆ. ಹರಪನಹಳ್ಳಿ, ಹಡಗಲಿ ವ್ಯಾಪ್ತಿಯ ಹೆಚ್ಚಿನ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ಮಳೆಯ ಸಮಯದಲ್ಲಿ ಬಿಳುವ ಹಂತದಲ್ಲಿರುವ ಮನೆಯ ಸದಸ್ಯರನ್ನು ಶಾಲೆಯ ಕೊಠಡಿಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದು ಯಾವುದೇ ರೀತಿಯ ಹಣದ ಕೊರತೆಯಿಲ್ಲ ಎಂದು ಅವರು ಸಿಎಂ ಅವರಿಗೆ ತಿಳಿಸಿದರು.
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೂ ಸಿಎಂ ಅವರು ಸಂವಾದ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು.
ಈ ಸಮಯದಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮತ್ತು ಇತರೆ ಅಧಿಕಾರಿಗಳು ಇದ್ದರು.