ಆರೋಗ್ಯವು ಸರಕು ಅಲ್ಲ, ಪ್ರತಿಯೊಬ್ಬರ ಜವಾಬ್ದಾರಿ: ಕುಲಸಚಿವ ಶಂಕರಗೌಡ ಸೋಮನಾಳ
ಲೋಕದರ್ಶನ ವರದಿ
ವಿಜಯಪುರ, 21: “ಆರೋಗ್ಯವು ಒಂದು ಸರಕು ಅಲ್ಲ, ಅದು ಪ್ರತಿಯೊಬ್ಬರ ಜವಾಬ್ದಾರಿ. ಯೋಗವು ಆರೋಗ್ಯ, ಏಕಾಗ್ರತೆ, ಮನಃಶಾಂತಿ ಹಾಗೂ ಆತ್ಮವಿಶ್ವಾಸ ವೃದ್ಧಿಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ನಿಯಮಿತವಾಗಿ ಯೋಗಾಭ್ಯಾಸ ಮಾಡಬೇಕು” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಯೋಗ ಅಧ್ಯಯನ ವಿಭಾಗ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಆರ್.ಕೆ.ಎಂ. ಆಯುರ್ವೇದ ವೈದ್ಯಕೀಯ ಕಾಲೇಜಿನ ಯೋಗ ವಿಜ್ಞಾನ ವಿಭಾಗದ ಯೋಗ ತರಬೇತಿದಾರರಾದ ಶ್ರೀಮತಿ ಕೀರ್ತಿ ಮಠಪತಿ ಮಾತನಾಡಿ, “ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಅದು ಆರೋಗ್ಯಕರ, ಸಮತೋಲಿತ ಮತ್ತು ಸಂತೋಷದಾಯಕ ಜೀವನದ ಮಾರ್ಗವಾಗಿದೆ. ಪ್ರತಿಯೊಂದು ಮನೆಯೂ ಮೊದಲ ಯೋಗಶಾಲೆಯಾಗಬೇಕು ಹಾಗೂ ಪ್ರತಿಯೊಬ್ಬರೂ ದಿನನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು” ಎಂದು ಹೇಳಿದರು.
ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ. ಇಂದಿನ ಒತ್ತಡದ ಬದುಕಿನಲ್ಲಿ ಯೋಗ ಅತ್ಯಗತ್ಯವಾಗಿದ್ದು, ಯುವಜನತೆ ಅದನ್ನು ಜೀವನಶೈಲಿಯ ಭಾಗವನ್ನಾಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.