ವಿಜಯಪುರ

ಅಗ್ನಿವೀರರ ನೇಮಕಾತಿಗೆ ಶ್ರಮ, ಶಿಸ್ತು ಅಗತ್ಯ

ಅಗ್ನಿವೀರರ ನೇಮಕಾತಿಗೆ ಶ್ರಮ, ಶಿಸ್ತು ಅಗತ್ಯ

ಲೋಕದರ್ಶನ ವರದಿ 

 ವಿಜಯಪುರ 21: ಸೇನೆಗೆ ಸೇರುವ ಕನಸು ಹೊತ್ತಿರುವ ಯುವಕರು ನಿರಂತರ ಪರಿಶ್ರಮ ಹಾಗೂ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಕರ್ನಲ್ ಸೋಮು ಹೇಳಿದರು. ಭಾರತೀಯ ಸೇನೆಯ ಮಂಗಳೂರು ನೇಮಕಾತಿ ವಲಯ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಡಾ. ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಗ್ನಿವೀರ ನೇಮಕಾತಿ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸೇನೆ ಸೇರುವ ಕನಸು ಸಾಕಾರಗೊಳ್ಳಲು ಉತ್ಸಾಹ, ನಿರಂತರ ದೈಹಿಕ ಅಭ್ಯಾಸ ಹಾಗೂ ಶಿಸ್ತು ಮುಖ್ಯ. ಯುವಕರು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪ್ರಯತ್ನಿಸಿದರೆ ಸೇನೆ ಸೇರುವ ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು. ಸೇನೆಗೆ ಸೇರುವುದು ದೇಶಸೇವೆಯ ಅತ್ಯಂತ ಮಹತ್ವದ ಅವಕಾಶವಾಗಿದೆ.

ವಿಜಯಪುರದಲ್ಲಿ ನಡೆದ ರ್ಯಾಲಿಯಲ್ಲಿ 11 ಜಿಲ್ಲೆಗಳ ಯುವಕರು ಭಾಗವಹಿಸಿ ಶಿಸ್ತು, ಉತ್ಸಾಹ ಹಾಗೂ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಇದರಿಂದ ನೇಮಕಾತಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲವಾಯಿತು ಎಂದು ಹೇಳಿದರು. ಆನ್ಲೈನ್ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ರ್ಯಾಲಿಯ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಂದಿನ ಹಂತದ ಸಿದ್ಧತೆ ಕೈಗೊಳ್ಳುವಂತೆ ಅವರು ಶುಭ ಹಾರೈಸಿದರು. ರ್ಯಾಲಿಯ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ವಿಜಯಪುರ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ ಕರ್ನಲ್ ಸೋಮು, 11 ಜಿಲ್ಲೆಗಳಿಂದ ಆಗಮಿಸಿದ ಎಲ್ಲ ಅಭ್ಯರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಡಳಿತದ ಕ್ರಮವನ್ನು ಶ್ಲಾಘಿಸಿದರು.

ಪೊಲೀಸ್, ಆರೋಗ್ಯ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಸಹಕರಿಸಿದ್ದಕ್ಕಾಗಿ ಸೇನೆಯ ಪರವಾಗಿ ಅವರು ಧನ್ಯವಾದ ಸಲ್ಲಿಸಿದರು. ಅಭ್ಯರ್ಥಿಗಳಿಗೆ ವಸತಿ, ಕುಡಿಯುವ ನೀರು, ವೈದ್ಯಕೀಯ ಸೇವೆ ಹಾಗೂ ಭದ್ರತೆ ಒದಗಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉಪನಿರ್ದೇಶಕ ವಿನಾಯಕುಮಾರ ಪಾಟೀಲ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ