ಲೇಖನಗಳು

ಎನ್ನ ಕಂದ ಹಳ್ಳಿಯ ಹನುಮ

ಎನ್ನ ಕಂದ ಹಳ್ಳಿಯ ಹನುಮ

ಭಾರತೀಯ ದೇವತೆಗಳಲ್ಲೇ ಅತ್ಯಂತ ವ್ಯಾಪಕವಾಗಿ ಪೂಜಿಸುವ ದೇವರು ಹನುಮಂತ ದೇವರು. ಏಕಕಾಲಕ್ಕೇ ಶಿಷ್ಟ ಮತ್ತು ಗ್ರಾಮ್ಯ ಎರಡೂ ಪರಿಸರಕ್ಕೆ ಅಷ್ಟೇ ಪ್ರೀಯನಾದ ದೇವರು. ಭಾರತದಂತಹ ಜಾತಿ ಪ್ರಧಾನ ದೇಶದಲ್ಲಿ ಕೆಲವು ದೇವರು ಕೆಲವು ಜಾತಿಗಳ ಜನರಿಂದಲಷ್ಟೇ ಆರಾಧಿಸಲ್ಪಡು ವದು ಇಲ್ಲಿನ ಒಂದು ಧಾರ್ಮಿಕ ಪದ್ಧತಿ. ಆದರೆ ಯಾವುದೇ ಜಾತಿ ಜನಾಂಗ ಗಳಿಗೆ ಮಾತ್ರ ಮೀಸಲಾಗದೇ, ಇಡೀ ಭಾರತದಾದ್ಯಂತ ಪೂಜಿಸಲ್ಪಡುವ ಜಾತ್ಯತಾತೀತ ದೇವರೆಂದರೆ ಆತ ಹನುಮಂತನೆ ಇರಬೇಕು.  

ಅವರಿಗೆ ಕುಲದೈವ, ಗ್ರಾಮದೈವ, ಅಧಿದೈವ ಯಾವುದೇ ಇದ್ದರೂ ಅವುಗಳನ್ನು ಮೀರಿ ಹನುಮಂತನನ್ನು ಪೂಜಿಸುತ್ತಾರೆ. ಶಿಷ್ಟ ಪುರಾಣ ಮತ್ತು ಜನಪದ ಎರಡೂ ಮೂಲಗಳಲ್ಲಿ ಆತನಿಗೆ ಮಹತ್ವದ ಸ್ಥಾನವಿದೆ. ಭಾರತೀಯ ಪ್ರಾಚೀನ ಕಾವ್ಯ ವಾದ ವಾಲ್ಮಿಕಿ ರಾಮಾಯಣದಲ್ಲಿ ಹನುಮಂತನೇ ಪ್ರಧಾನ ಪಾತ್ರಗಳಲ್ಲಿ ಒಬ್ಬ. ಆತ ರಾಮಚಂದ್ರನಿಗೆ ಆಪ್ತ. ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನನನ್ನೂ ಮೀರಿಸಿ ಪ್ರಿಯನಾದವನು. ಇಡೀ ರಾಮಾಯಣದ ಚಾಲಕ ಶಕ್ತಿಯಾಗಿ ಅಲ್ಲಿ ಆತನ ಪಾತ್ರ ವಿನ್ಯಾಸವಿದೆ. ನಮ್ಮ ಜನಪದರ ಹಾಡುಗಳಲ್ಲಿಯಂತೂ ಅವನ ಸ್ತುತಿಗೆ ಸೀಮೆಯಿಲ್ಲ. ಹಲಸಂಗಿ ಗೆಳೆಯರು ಸಂಪಾದಿಸಿದ ಗರತಿ ಯ ಹಾಡಿನ ಸ್ತುತಿಭಾಗದಲ್ಲಿ  

ಯಾಲಕ್ಕಿ ತಂದೀದ ಏಳಪ್ಪ ಬಲಭೀಮ   

ಯಾಲಕ್ಕಿ ಒಳಗ ಎಳಿನಾಮ /ತಂದೀದ   

ಏಳೋ ನಿಮ್ಬರಗಿ ಬಲಭೀಮ//  

ಎಂದು ತಾವು ಹಾಡುಗಳನ್ನು ಸಂಗ್ರಹಿಸಿದ ಪರಿಸರದ ನಿಂಬರಗಿ ಹನುಮಂತನನ್ನು ನೆನೆಯಲಾಗಿದೆ.  

ಗ್ರಾಮಗಳಲ್ಲಿ ಜನಪದ ಹೆಣ್ಣುಮಕ್ಕಳು ನೀರು ತರಲು ಹೊಳೆಗೆ ಹೋಗುವದು ನದಿ ದಂಡೆಯ ಊರುಗಳ ಸಂಪ್ರದಾಯ. ಅವರು ಹೋಗುವಾಗೊಮ್ಮೆ ಬರುವಾ ಗೊಮ್ಮೆ ಅವನಿಗೆ ನಮಸ್ಕರಿಸಿಯೇ ಮುಂದೆ ಹೋಗುವದು. ಏಕೆಂದರೆ ಅವರಿಗೆ ಬೇಕಾ ಇಷ್ಟರ್ಥಗಳನ್ನು ಕರುಣಿಸುವ ದೇವರೂ ಅವನೇ. ಹಾಗಾಗಿ ಜನಪದ ಗರತಿ  

ಹೋಗಾಗ ಎಡಕಾದಾ ಬರುವಾಗ ಬಲಕಾದಾ   

ಈಗ ನನ ಕೊಡಕ ಇದಿರಾದಾ/ ಬಲಭೀಮ   

ಕೊಡ ಹೊತ್ತು ಕೈಯಮುಗಿದೆನ//  

ಎಂದು ತಲೆಯ ಮೇಲೆ ಕೊಡವಿದ್ದರೂ ಅವನಿಗೆ ಕೈ ಮುಗಿದೇ ಮುಂದೆ ಹೋಗುತ್ತಾರೆ. ತಾವು ಹೇಗೆ ಬದುಕುತ್ತಾರೆಯೋ ಹಾಗೆ ತಮ್ಮ ದೈವ ಬದುಕುತ್ತವೆ ಎಂದು  ನಮ್ಮ ಜನಪದರ ನಂಬಿಕೆ ಆತ ಅವರಂತೆಯೇ ತನ್ನ ದೇವಾಲಯದಿಂದ ಎದ್ದು  ಜಳಕಕ್ಕೂ ಹೋಗುತ್ತಾನೆ.  

ಅದನ್ಬು ಒಂದು ತ್ರಿಪದಿ  

ಹಾಸುಗಲ್ಕಿನ ಮ್ಯಾಲ ಹಾಯ್ದು ಹೋದವನ್ಯಾರ   

ಪಾದ ಮೂಡ್ಯಾವ ಪರಿಪರಿ//ಬಲಭೀಮ   

ಹಾಯ್ದು ಹೋಗ್ಯಾನ ಜಳಕಕ//  

ಆತನ ನಡಿಗೆಯೇ ಒಂದು ಚಂದ, ಎಂತಹ ಸುಂದರ ನಡಿಗೆ ಎಂದರೆ ನಡೆದು ಹೋದ ಹನುಮನ ಪರಿಪರಿಯ ಪಾದ ಮೂಡಿವೆಯಂತೆ! ಕಲ್ಲೊಳ್ಳಿ ಊರಿನ ಲ್ಲಿ ನೆಲೆಸಿದ ಹನುಮಂತ ದೇವರನನೇ ಸ್ತುತಿಸುವ ಒಂದು ತ್ರಿಪದಿ ಗರತಿಯ ಹಾಡುಗಳಲ್ಲಿ  

ಯಾರಾಸಿ ನನಗಿಲ್ಲ ಭಾಗ್ಯದ ಬಲವಿಲ್ಲ/  

ಕಲ್ಲೊಳ್ಳಿ ಊರ ಕರಿರಂಗ/ ವೆಂಕೋಬ//  

ನಿನ್ನಾಸೆ ನನಗೆ ಅನುಗಾಲ/  

ಕರಿಯ ಕಲ್ಲಿನಲ್ಲಿ ನೆಲೆಸಿದ ಹಣಮಂತ ನನ್ನು ಕರಿರಂಗ ಎಂದು ಕರೆದಿರುವದು ವಿಶಿಷ್ಟವಾಗಿದೆ. ನಮ್ಮ ಜನಪದರು ಯಾರನ್ನು ನಂಬಿದವರಲ್ಲ ಅವರಿಗೆ ತಮ್ಮ ದೈವವೊಂದೆ ಕಾಯುತ್ತದೆ ಎಂಬ ಬಲವಾದ ನಂಬಿಕೆ .ರಾಮಾಯಣದಲ್ಲಿ ಹನುಮಂತ ನಾಡಿದ ಪ್ರಧಾನ ಪಾತ್ರವನ್ನು ಅವರು ಮರೆತಿಲ್ಲ. ಹೀಗಾಗಿ ರಾಮಾಯಣದ ಹನುಮಂತನನ್ನು  ನೆನಪಿಸುತ್ತಾರೆ.  

ರಾಮಲಕ್ಷ್ಮಣನೆ ಸೀತೆಯ ತಂದೋನೆ/  

ರಾಮರ ಬಂಟ ಹನುಮಂತ / ಶರಣೆಂಬೆ /  

ಜಯಜಯರಾಮ ಕರುಣಿಸೋ//  

ಇಲ್ಲಿ ಮೊದಲ ಸಾಲು ರಾಮಲಕ್ಷ್ಮಣನ ಪ್ರೀತಿಗೊಳ ಗಾದವನು ಎಂದು ಹೇಳಿದರೆ, ಮುಂದಿನ ಭಾಗ ಸೀತೆಯನ್ನು ತಂದ ರಾಮಭಂಟ ಎಂದು ಬಣ್ಣಿಸಿದೆ. ಈ ತ್ರಿಪದಿ ಹನುಮಂತ ಶ್ರೀರಾಮ ಲಕ್ಷ್ಮಣ ಎಲ್ಲರನ್ನೂ ಒಂದೇ ಪದ್ಯದಲ್ಲಿ ಸ್ತುತಿಸಿದೆ  

ನಮ್ಮ ಪರಂಪರೆಯಲ್ಲಿ ಆತ ತ್ರೇತಾಯು ಗದಲ್ಲಿ ರಾಮಭಕ್ತ ಹನುಮಂತನಾಗಿದ್ದರೆ, ದ್ವಾಪರ ಯುಗದಲ್ಲಿ ಮಹಾಭಾರತದ  ಪಾಂಡವವೀರ ಭೀಮನಾಗಿ ಜನಿಸಿದ್ದಾನೆ. ಇನ್ನು ದಾಸ ಸಾಹಿತ್ಯಕ್ಕೆ ಬಂದರೆ ಆತ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ಮಧ್ವಾಚಾರ್ಯರಾಗಿ ಜನಿಸಿದ್ದಾನೆ ಎಂಬುದು ನಂಬಿಕೆ.  

ಕರ್ನಾಟಕದಲ್ಲಿ ಹನುಮಂತ ದೇವರು ಯಾವ ಯಾವ ಊರುಗಳಲ್ಲಿ ನೆಲೆಸಿದ್ದಾನೋ ಆ ಎಲ್ಲ ಊರುಗಳೆಲ್ಲ ಅವನ ಹೆಸರಿನಿಂದಲೇ ಪ್ರಸಿದ್ದವಾಗಿವೆ. ಹೀಗೆ ತಾನು ನೆಲೆಸಿದ ಊರಿಗೇ ಆ ಊರಿನ ಅಸ್ಮಿತೆಯ ದೈವವಾದ, ಹೆಸರಾಗಿ ನಿಂತ ಇನ್ನೊಂದು ದೇವರು ತಕ್ಷಣಕ್ಕೆ ನೆನಪಿಗೆ ಬಾರವು.ಬೆಂಗಳೂರು ಸಮೀಪದ ಸಾತನೂರಿನ ಹತ್ತಿರದ ಮುತ್ತತ್ತಿ ರಾಯ (ಮುತ್ತತ್ತಿ ಊರ ಹೆಸರು) ರಾಮನಗರ ಜಿಲ್ಲೆಯ ಕೆಂಗಲ್ಲರಾಯ (ಕೆಂಗಲ್ಲು) ಬಾಗಲಕೋಟ ಜಿಲ್ಲೆಯ ಎಲಗೂರೇಶ (ಊರ ಹೆಸರು ಎಲಗೂರು) ತುಳಸಿಗೇರೇಪ್ಪ (ಊರ ಹೆಸರು ತುಳಸಿಗೇರಿ) ಗೋಕಾಕ ತಾಲೂಕಿನ ಕಲ್ಲೊಳ್ಳೆಪ್ಪ (ಊರ ಹೆಸರು ಕಲ್ಲೊಳ್ಳಿ) ಹೀಗೆ ಹೆಸರಿಸುತ್ತಾ ಸಾಗಬಹುದು. ಕದರಮಂಡಲಗಿಯ ಕಾಂತೇಶ, ಮುಳುಬಾಗಿಲು ಆಂಜನೆಯ ಕ್ಷೇತ್ರ ತುಂಬ ಹೆಸರಾದ ಹನುಮ ಕ್ಷೇತ್ರಗಳು. ಹಾಗೆಯೆ ಬಹುಶಃ  ಹನುಮಂತನ ಆರಾಧನೆ ಕಡಿಮೆ ಇರುವ  ದಕ್ಷಿಣ ಕನ್ಬಡ ಮೊದಲಾದ ಜಿಲ್ಲೆಗಳಲ್ಲಿ ಯಕ್ಷಗಾನದಲ್ಲಿ ಹನುಮಂತನ ಪಾತ್ರವಾಗಿಯೂ  ವಿಶಿಷ್ಟವೆನಿಸಿದೆ.  

ನಮ್ಮ  ಜನಪದರಿಗೆ ಬಂದರಂತೂ ಹನುಮಂತನೇ ಎಲ್ಲದಕ್ಕೂ ಆದಿ. ಆತ ಧೈರ್ಯದ ದೇವರು.ಅವನಿದ್ದೆಡೆ ಭೂತ ಪಿಶಾಚಿಗಳು ಸುಳಿಯವು.ದೆವ್ವ ಮೆಟ್ಟಿ ಕೊಂಡ ಗ್ರಾಮೀಣ ನಂಬಿಗಸ್ತ ಭಕ್ತರು ಅವನ ದೇವಾಲಯಕ್ಕೆ ನಡೆದುಕೊಂಡು ಅವುಗಳ ಕಾಟದಿಂದ ಮುಕ್ತರಾಗುತ್ತಾರೆ.ಮಕ್ಕಳು ಹೆದರಬಾರದೆಂದು ಬಾಲ್ಯದಲ್ಲಿ ಹನುಮಂತನ ರಕ್ಷೆಯಾದ ತಾಯತ, ದಾರ ಕಟ್ಟಿಸಿಕೊಳ್ಳುತ್ತಾರೆ. ಯಾವುದೇ ಊರಿನಲ್ಲಿ ಹನಂತನಿಲ್ಲದ ದೇವಸ್ಥಾನವೇ ಇಲ್ಲ. ಆತ ಊರ ಕಾಯುವ ದೇವತೆ. ಹೀಗಾಗಿ ಆತ ಊರ ಹೊರಗೇಯೇ ಇರುತ್ತಾನೆ "ಊರ ಸುಟ್ಟರೂ ಹನಮಪ್ಪ ಹೊರಗೆ" ಎಂಬ ಗಾದೇ ಮಾತೇ ಇದೆ. ಬಹುಶಃ ಇದರ ಅರ್ಥ ಆತ ಯಾವ ಜಾತಿ ಜಂಜಡಗಳ, ಸಂಘರ್ಷಗಳಿಗೆ ಬಲಿಯಾದವನಲ್ಲ ಎಂಬರ್ಥವನ್ನು ನೀಡುವ ವಾಕ್ಯವೂ ಆಗಿರಬಹುದು. ಆತ ಯುವಕರ ಆರಾಧ್ಯ ದೈವವೂ ಹೌದು. ಏಕೆಂದರೆ ಹನುಮಂತ ಶಕ್ತಿಶಾಲಿ ಮಾತ್ರವಲ್ಲ, ಜಿತೇಂದ್ರಿಯ. ಬ್ರಹ್ಮಚಾರಿ. ಶಕ್ತಿ ಗಳಿಸಬೇಕೆಂಬ ಸಾಹಸವಂತರು ಅವನ ಆರಾಧಕರು. ಕುಸ್ತಿ ಪಟುಗಳಿಗೆ, ಸಾಹಸವಂತರಿಗೆ ಅವನೇ ಮಾದರಿ.   

ಇದು ನಮ್ಮ ಕಂದ ಹಳ್ಳಿ ಹನುಮ ಎನ್ನುವ   ಕನಕದಾಸರು ಕೀತಲರ್ತನೆಗಳಲ್ಲಿ ಹನುಮಂತನ ಸ್ತುತಿ ಪ್ರತ್ಯೇಕವಾಗಿ ಅಧ್ಯಯನಿಸುವಷ್ಟಿದೆ. ಕನಕದಾಸರು ಜನಿಸಿದ ಸಮೀಪದ ಊರು ಕದರಮಂಡಲಗಿ ಇಲ್ಲಿ ಪ್ರಸಿದ್ಧ ಹಣುಮಂತನ ದೇವಾಲಯವಿದೆ. ಈ ಕದರಮಂಡಲಗಿಯ ಹಣುಮಂತದೇವರನ್ನು ಕೀರ್ತನೆಯಲ್ಲಿ ಕನಕದಾಸರು ಸ್ತುತಿಸಿದ್ದಾರೆ. ಇದು ಕನಕದಾಸರ ಬಾಲ್ಯದ ಬೀಡು ಎಂದು ಹೇಳಲಾಗುತ್ತದೆ. ಅಲ್ಲದೆ ಕನಕದಾಸರ ಸಮಾಧಿಯೂ ಕದರಮಂಡಲಗಿಯಲ್ಲಿಯೇ ಆಗಿದೆ ಎಂದೂ ಹೇಳಲಾಗುತ್ತದೆ.  

ಕದರಮಂಡಲಗಿ ಕರುಣಿ ಹನುಮಂತರಾಯ  

ಸದುಗುಣವಂತನೇ / ಗುಣವಂತನೆ  

ಆಂಜನೆಯ ವರಸೂನು/ಅಶ್ರಿತ  ಕಾಮಧೇನು  

ಮಂಜುಳ ಸು ಗಾನ ಗೀತ / ಪರಮವಿಖ್ಯಾತ  

ಸಂಜೀವನವ ದನು / ವೀರ ಹನುಮನು   

ಸದುಗುಣವಂತನೆ/ಗುಣವಂತನೆ  

ಇದು ಕದರಮಂಡಲಗಿಯ ಹಣಮಪ್ಪನನ್ನು ಕುರಿತು ಬರೆದ ಕೀರ್ತನೆಯ ಸಾಲುಗಳು.ಕನಕರು  ಇನ್ನೂ ರಾಜರಾಗಿರುವಾಗ ಯುದ್ದದಲ್ಲಿ ನಿರ್ವಿಣ್ಣ ನಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಡುತ್ತಾರೆ. ದಾರಿಯಲ್ಲಿ ಕದರಮಂಡಲಗಿ ಹನುಮಂತ ದೇವರ ದೇವಸ್ಥಾನವಿದ್ದಿತು ಆದರೆ ಕನಕರು ಅಲ್ಲಿ ಬೆಟ್ಟಿಯಾಗದೆ  ನೇರವಾಗಿ ತಿರುಪತಿ ತಿಮ್ಮಪ್ಪನಿಗೆ ಹೋಗುತ್ತಾನೆ.ಅಲ್ಲಿ ಈತನಿಗೆ  ತಿಮ್ಮಪ್ಪ ದರ್ಶನವಾಗುವದಿಲ್ಲ.ತಿಮ್ಮಪ್ಪ ನೀನು ಕದರಮಂಡಲಗಿ ಹನುಮಪ್ಪನನ್ನು ಬೆಟಿಯಾಗಿಲ್ಲ, ಬೆಟಿಯಾಗಿ ಬಾ ಎಂದು ಮರಳಿ ಕಳಿಸುತ್ತಾನಂತೆ. ಇಂತಹುದೊಂದು ಕಥೆ ಆ ಭಾಗದಲ್ಲಿದೆ. ಹೀಗೆ ನಮ್ನ ಜನಪದರು, ನಮ್ಮ ಶಿಷ್ಟ ಸಾಹಿತ್ಯ  ಹನುಮಂತನನ್ನು ಕಂಡರೀತಿ ಅನನ್ಯ. ಅಧ್ಯಯನಕ್ಕೆ ಒಳಗಾಗಿಯಾದರೂ ಇನ್ನೂ  ಆಗಬೇಕಿದೆ.  


- ಡಾ. ಯ. ಮಾ. ಯಾಕೊಳ್ಳಿ  


ಸುದ್ದಿ ಓದಿ