ಶ್ರೀಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ ಲಿಂಗೈಕ್ಯ
ಹಗರಿಬೊಮ್ಮನಹಳ್ಳಿ 04: ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮಿಜೀ ಶುಕ್ರವಾರ ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
ಕಳೆದ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಶ್ರೀಗಳು ಆಗಾಗ ಡಯಾಲಿಸಿಸ್ ಮಾಡಿಸುತ್ತಿದ್ದರು. ಕಳೆದ 10ದಿನಗಳಿಂದ ಹಿಂದೆ ಬಳ್ಳಾರಿಯ ವಿಮ್ಸ್ನಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇವರಿಗೆ ಪತ್ನಿ, ಮಠದ ಸ್ವಾಮೀಜಿ ಹಾಲಸಿದ್ದೇಶ್ವರ ಸ್ವಾಮೀಜಿ ಸೇರಿ ಇಬ್ಬರು ಪುತ್ರರು, ಒಬ್ಬ ಪುತ್ರಿ ಮತ್ತು ಅಪಾರ ಬಂದುಬಳಗ ಹಾಗೂ ಭಕ್ತ ಸಮೂಹವನ್ನು ಹೊಂದಿದ್ದರು.
ಪಟ್ಟಣದ ಸರ್ಕ್ಯೂಟ್ಹೌಸ್ ಬಳಿಯ ಅನ್ನಪೂರ್ಣೇಶ್ವರಿ ಮಠದ ನಿವೇಶನದಲ್ಲಿ ಶುಕ್ರವಾರ ಬೆಳಗ್ಗೆ 11ಂಟೆಗೆ ವಿದಿವಿಧಾನಗಳಿಂದ ಅಂತ್ಯಸಂಸ್ಕಾರ ಜರುಗಿತು.
ನಾನಾ ಮಠಾಧಶರಾದ ಮಲ್ಲಿಕಾರ್ಜುನ ಸ್ವಾಮೀ, ಹನಸಿ ಮಠದ ಶಂಕರ ಸ್ವಾಮೀಜಿ, ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ, ನಾಗತಿಬಸಾಪುರದ ಗಿರಿರಾಜ ಹಾಲಸ್ವಾಮಿ ಹಾಗೂ ಎಂಪಿ.ಎಂ.ಮಂಜುನಾಥ ಸ್ವಾಮೀಜಿ, ಕೊಟ್ಟೂರಿನ ಚಾನುಕೋಟಿ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಹಂಪಸಾಗರ ರುದ್ರಮುನಿ ಸ್ವಾಮೀಜಿ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ ಹಾಗೂ ಮಾಜಿ ಶಾಸಕ ನೇಮಿರಾಜ್ನಾಯ್ಕ್ ಇತರೆ ಪ್ರಮುಖರು ಪಾಲ್ಗೊಂಡಿದ್ದರು.
ಮಠ ಬೆಳೆದುಬಂದ ದಾರಿ:
ಶ್ರೀಗಳು ಪಟ್ಟಣಕ್ಕೆ ಬಂದಾಗ ಜೀವನೋಪಾಯಕ್ಕೆ ಸೀಡ್ಸ್ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಂಚರಿಸುತಿದ್ದ ಶಂಕರಸ್ವಾಮಿಯವರಿಗೆ, ಹೂವಿನ ಹಡಗಲಿ ತಾಲೂಕಿನ ನಾಗತಿ ಬಸಾಪುರದ ಶ್ರೀಹಾಲಸ್ವಾಮಿ ಮಠದ ಗಿರಿರಾಜ ಹಾಲಸ್ವಾಮೀಜಿಯವರ ಕೃಪ ಕಟಾಕ್ಷದಿಂದ ಈಗಿರುವ ಹಾಲಸ್ವಾಮಿ ಮಠದ ಖಾಲಿ ನಿವೇಶನದಲ್ಲಿ 1998ರ ಸೆ.11ರಂದು ಹಾಲಸ್ವಾಮಿ ಕತೃಗದ್ದಿಗೆ ಸ್ಥಾಪನೆಯಾಯಿತು.
ನಂತರ ಅದರ ನಿರ್ವಹಣೆ ಮಾಡಿಕೊಂಡು, ತಾಲೂಕಿನಾಧ್ಯಂತ ಅಷ್ಟೇ ಏಕೆ ಬಹುತೇಕ ಜಿಲ್ಲೆಯಲ್ಲೆಡೆ ಸಾಕಷ್ಟು ಭಕ್ತರನ್ನು ಸೆಳೆದರು. ಮಠದಲ್ಲಿ ತಮ್ಮ ನೇತೃತ್ವದಲ್ಲಿ ಸುಮಾರು 13ವರ್ಷಗಳಿಂದ ಒಂದು ಸಾವಿರಕ್ಕೂ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ಮುಳ್ಳುಗದ್ದುಗೆ ಪವಾಡ, ಕಾರ್ತಿಕೋತ್ಸವ, ರಥೋತ್ಸವ ಸೇರಿದಂತೆ ದಸರದಲ್ಲಿ ಅದ್ಧೂರಿಯಾಗಿ ವಿಜಯದಶಮಿ ಆಚರಣೆ, ದೇವೆಯನ್ನೊತ್ತ ಅಂಬಾರಿ ಮೆರವಣಿಗೆ, ಸರ್ವಧರ್ಮಗಳ ಸಮನ್ವಯ ಸಮಾರಂಭಗಳು, ಜೊತೆಜೊತೆಗೆ ನಾಟಕೋತ್ಸವ, ಗಣೇಶ ಪ್ರತಿಷ್ಠಾಪನೆಯೊಂದಿಗೆ ಪುರಾಣಗಳಾದ ಶರಣಬಸವೇಶ್ವರ, ಗುಡ್ಗಡದ ದಾನೇಶ್ವರಿ, ದೇವಿಪುರಾಣಗಳು ಸೇರಿದಂತೆ ವರ್ಷವಿಡಿ ಮಠದಲ್ಲಿ ನಾನಾ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಭಕ್ತರನ್ನು ಸೆಳೆದು ಮಂತ್ರಮುಗ್ಧರನ್ನಾಗಿಸುತ್ತಿದ್ದರು.
ಮಠಕ್ಕೆ ಇಲ್ಲಿಯವರೆಗೂ ಪಂಚಪೀಠಾದೀಶ್ವರರೆಲ್ಲ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ಲಾಘನೆ ವ್ಯಕ್ತಪಡಿಸಿದ್ದರು. ಹಾಲಶಂಕರ ಸ್ವಾಮೀಜಿಯವರು 58ನೇ ವರ್ಷದಲ್ಲೂ ಲವಲವಿಕೆಯಿಂದ ಕೂಡಿದ್ದರು.
ಅವರ ಕನಸ್ಸು ನನಸಾಗಲಿಲ್ಲ: ಸ್ವಾಮೀಜಿಯವರು ಹಾಲಸ್ವಾಮಿ ಮಠದ ಪಕ್ಕದಲ್ಲಿ 100*100 ಅಳತೆಯ ಶ್ರೀಗುರು ಹಾಲಸ್ವಾಮಿ ಮಂಗಳ ಭವನ ನಿರ್ಮಾಣದ ಕನಸು ಕಂಡಿದ್ದು, ಕಾಮಗಾರಿ ತಳಪಾಯದಲ್ಲಿದೆ. ಸರ್ಕ್ಯೂಟ್ ಹೌಸ್ಬಳಿ 2.5 ಎಕರೆ ನಿವೇಶನದಲ್ಲಿ ಅನ್ನಪೂರ್ಣೇಶ್ವರಿ ಮಠದಲ್ಲಿ ನಿರಾಶ್ರಿತರಿಗೆ ಆಶ್ರಮ ಸೇರಿ ಅನೇಕ ಅಭಿವೃದ್ಧಿ ಕೆಲಸಗಳ ಗುರಿಯನ್ನು ಹೊಂದಿದ್ದರು. ಈ ಎಲ್ಲಾ ಕೆಲಸಗಳನ್ನು ಪೂರೈಸಲು 2012-13ರಲ್ಲಿ ಶ್ರೀಗುರು ಹಾಲಸ್ವಾಮಿ ಮಠದ ಟ್ರಸ್ಟ್ ಕೂಡ ಸ್ಥಾಪಿಸಿದರು. ಆದರೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಲೇ ಇಲ್ಲ ಎನ್ನುವ ಕೊರಗು ಶ್ರೀಗಳಲ್ಲಿ ಕಾಡುತಿತ್ತು.
ಮುಂದಿನ ದಿನದಲ್ಲಿ ಮಠದ ನೇತೃತ್ವ ವಹಿಸಿಕೊಂಡಿರುವ ಶಂಕರ ಸ್ವಾಮೀಜಿಗಳ ಪುತ್ರ ಹಾಲಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ತಂದೆಯ ಕನಸುಗಳನ್ನು ಕಟ್ಟಿ ಬೆಳೆಸಬೇಕಿದೆ ಭಕ್ತ ಸಮೂಹ ಹಾಗೂ ಜನಪ್ರತಿನಿಧಿಗಳು ಬೆಂಬಲವಾಗಿ ನಿಲ್ಲಬೇಕಿದೆ.