ಲೇಖನಗಳು

ಹಡಪದ ಅಪ್ಪಣ್ಣ ಸಮ ಸಮಾಜಕ್ಕೆ ಶ್ರಮಿಸಿದ ನಿಜ ಶರಣ

ಹಡಪದ ಅಪ್ಪಣ್ಣ ಸಮ ಸಮಾಜಕ್ಕೆ ಶ್ರಮಿಸಿದ ನಿಜ ಶರಣ

ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ.... ಎಂಬ ಬಸವಣ್ಣನವರ ವಚನದಂತೆ ಹನ್ನೆರಡನೆ ಶತಮಾನದ ಕಾಲಘಟ್ಟದಲ್ಲಿನ ಸಾಮಾಜಿಕ ಕಂದಕವನ್ನು, ಅಸಮಾನತೆಯನ್ನು... ಅನೀತಿ, ಅಧರ್ಮವನ್ನು ಪ್ರಶ್ನಿಸಿ ಸಮ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಶಿವ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು. 

ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಗೆ ಮುಂತಾದ ಶರಣ ಹಡಪದ ಅಪ್ಪಣ್ಣನವರು ಕಾಯಕ ನಿಷ್ಠೆಯಿಂದ, ಮಾನವೀಯ ದೃಷ್ಠಿಯಿಂದ ಸಮಾಜದಲ್ಲಿನ ಶೋಷಣೆಯನ್ನು, ಅಂಧಕಾರವನ್ನು ಸುಧಾರಿಸಲು ಪ್ರಯತ್ನಿಸಿದರು. ಹಡಪದ  ಕಾಯಕವನ್ನು ಮಾಡುತ್ತಿದ್ದ ಅಪ್ಪಣ್ಣನು ಬಸವಣ್ಣನವರ ಬಾಲ್ಯದ ಒಡನಾಡಿಯೂ ಹೌದು.  ಬಸವಣ್ಣನವರು ಸ್ಥಾಪಿಸಿದ ವಿಶ್ವದ ಪ್ರಥಮ ಪ್ರಜಾಪ್ರಭುತ್ವ ವ್ಯವಸ್ಥೆಯಂತಿದ್ದ ಅನುಭವ ಮಂಟಪದ ಸಕ್ರಿಯ ಸದಸ್ಯರಾಗಿದ್ದರು ಮತ್ತು ಬಸವಣ್ಣನವರ ಅತ್ಯಂತ ಆಪ್ತನಾಗಿದ್ದರು. ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯೂ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಹಾಗೂ ಬಸವಣ್ಣನವರು ಕೈಗೊಳ್ಳುವ ಸಾಮಾಜಿಕ ಕ್ರಾಂತಿಯ ಕಾರ್ಯಗಳಿಗೆ ಯಾವುದೇ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ.  

ದುರಾದೃಷ್ಟವೆಂದರೆ.... ಅಂದಿನ ಸಾಮಾಜಿಕ ವ್ಯವಸ್ಥೆಯ ಕರಾಳತೆಯಾಗಿದ್ದಿದ್ದು ಇವರನ್ನು ನಿಕೃಷ್ಟವಾಗಿ ಕಾಣುತ್ತಿದ್ದದ್ದು ಬೆಳಿಗ್ಗೆ ಎದ್ದ ತಕ್ಷಣ ಹಡಪದ ಸಮಾಜದ ಮುಖ ನೋಡಿದರೆ ಅಮಂಗಳವಾಗುತ್ತದೆ ಎಂಬ ನಂಬಿಕೆ ಬಲವಾಗಿತ್ತು.  ಈ ನಂಬಿಕೆಯನ್ನು ಹೋಗಲಾಡಿಸಲೆಂದೇ ಬಸವಣ್ಣನವರು ಯಾರೇ ನನ್ನನ್ನು ನೋಡಲು ಬರುವವರಿದ್ದರೆ ಮೊದಲು ಹಡಪದ ಅಪ್ಪಣ್ಣನನ್ನು ನೋಡಿಕೊಂಡು ಬಂದು ನನ್ನನ್ನು ನೋಡಿ ಎಂದು ನಿಯಮ ಮಾಡಿದ್ದರು. ಅದರಲ್ಲೂ ಮುಂಜಾನೆಯ ಹೊತ್ತಿನಲ್ಲಿ ಮೊಟ್ಟ ಮೊದಲಿಗೆ ಅಪ್ಪಣ್ಣನವರನ್ನೇ ನೋಡುತ್ತಿದ್ದರು. ಶರಣರ ಪರಂಪರೆಯಲ್ಲಿ ಕೇವಲ ಅವರಷ್ಟೇ ಶರಣರಾಗಿರದೆ, ವಚನಕಾರರಾಗಿರದೆ,  ಅವರ ಧರ್ಮ ಪತ್ನಿಯರು ಶರಣರಾಗಿ,  ವಚನಕಾರರಾಗಿ ಸಮಾಜ  ಸುಧಾರಣೆಗೆ ಮುಂದಾಗಿದ್ದರು.   

ಹಡಪದ ಅಪ್ಪಣ್ಣನಂತೆ ಆತನ ಹೆಂಡತಿ ಲಿಂಗಮ್ಮನೂ ವಚನಕಾರಳಾಗಿ ಸಮ ಸಮಾಜಕ್ಕೆ ಶ್ರಮಿಸಿದವರಾಗಿದ್ದಾರೆ. ಬಿಜಾಪುರ ಜಿಲ್ಲೆಯ ತಂಗಡಿಗಿಯವರು  ಬಸವಣ್ಣನವರ ಆಪ್ತರಾಗಿದ್ದ ಅಪ್ಪಣ್ಣನವರು ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕೂಡಲ ಸಂಗಮಕ್ಕೆ ಬಂದು ನೆಲೆಸಿದರು. ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಿ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅಲ್ಲಿಯೇ ನೆಲೆಸಿದರು. ಮಡದಿ ಲಿಂಗಮ್ಮ ಮತ್ತು ಅಪ್ಪಣ್ಣನವರು ಕ್ರಾಂತಿಯ ಕುರಿತು, ಶರಣರ ಕುರಿತು, ಲಿಂಗ ಪೂಜೆಯ ಕುರಿತು ಮತ್ತು ಷಟಸ್ಥಲ ತತ್ವದ ಕುರಿತು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದರು.  

ಅವರು ತಮ್ಮ ವಚನಗಳಲ್ಲಿ ಹೆಚ್ಚಾಗಿ ಷಟಸ್ಥ ತತ್ವ ನಿರೂಪಣೆಗೆ ಆದ್ಯತೆ ನೀಡಿದರು ಮತ್ತು ಬೆಡಗುಗಳಿಗೆ ಮಹತ್ವವನ್ನೂ ನೀಡಿದರು. ಅವರ ವಚನಗಳನ್ನು ಅವಲೋಕಿಸುವುದಾದರೆ... ಅಯ್ಯಾ ! ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವವರಲ್ಲದೇಶವ ತಿರುಗಿ ಕಲಿತ ಮಾತ ನುಡಿದವರಲ್ಲಲೇಸಾಗಿ ನುಡಿವರು. ಆಸೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು, ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು, ಸರಸವಿಲ್ಲದೆ ವಾಸಿಸುವವರು. ಇಂತಿಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ ಬಸವಪ್ರಿಯ ಕೂಡಲ ಚನ್ನಬಸವಣ್ಣ, ಇಂತಿಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ..  ಎನ್ನುತ್ತಾರೆ. ಶರಣರು ವೆಷ ಹಾಕಿ ಮಾತನಾಡುವವರಲ್ಲ. ದೇಶ ತಿರುಗಿದ ಅನುಭವದಲ್ಲೀ ಮಾತಾಡುವವರಲ್ಲ. ಆಸೆ ಇಲ್ಲದೆ, ರೋಷವಿಲ್ಲದೆ ಸರಸವಿಲ್ಲದ ಬದುಕಿನಲ್ಲಿ ಲೇಸಾಗಿ ಸುಡಿಯುವವರು, ಭಕ್ತಿಯಿಂದ ನಿಜ ಕಾಯಕದ ಅನುಭವದಿಂದ ನುಡಿಯುವವರು ಶರಣರು ಎಂದು ಶರಣರ ಮಹತ್ವವನ್ನು ಹೇಳುತ್ತಾರೆ. ಬೇರಿಲ್ಲದ ಮರದಂತೆ ನೆಲೆಯೇ ಇಲ್ಲದ ಶರಣರ ಕುರಿತು ನಾನೇನು ಬಲ್ಲೆನಯ್ಯ ಗುರುವೆ ಎಂದು ಹೇಳುವನು.  

ಮತ್ತೊಂದು ವಚನದಲ್ಲಿ  ಪುಣ್ಯವು ಯಾವುದರಿಂದ ಬರುತ್ತದೆ, ಹೇಗೆ ಬರುತ್ತದೆ, ಈ ಜಗತ್ತಿನಲ್ಲಿ ನಮ್ಮ ಕಾರ್ಯವೇನು ಎಂಬುದನ್ನು ಹೀಗೆ ವಿವರಿಸುತ್ತಾನೆ.ಅನ್ನವನಿಕ್ಕಿದರೇನು? ಹೊನ್ನ ಕೊಟ್ಟರೇನು? ಹೆಣ್ಣು ಕೊಟ್ಟರೇನು? ಮಣ್ಣು ಕೊಟ್ಟರೇನು? ಪುಣ್ಯ ಉಂಟೆಂಬರು ಅವರಿಂದಾದೊಡೆವೆ ಏನು ಅವರೀವುದಕೆ? ಇದಕೆ ಪುಣ್ಯವಾವುದು  ಪಾಪವಾವುದು ನದಿಯ ಉದಕವ ನದಿಗೆ ಅರ​‍್ಿಸಿ, ತನತನಗೆ ಪುಣ್ಯ ಉಟೆಂಬ ಬಡ ಹಾರುವರಂತೆ, ಸದಮಳ ಶಾಶ್ವತ ಮಹಾಘನಲಿಂಗವನರಿಯದೆ ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ, ನಮ್ಮ ಬಸವಪ್ರಿಯ ಕೂಡಲ ಚನ್ನಬಸವಣ್ಣ! ಎನ್ನುತ್ತಾನೆ.  

ಪುಣ್ಯವೆಂಬುದು ಹೆಣ್ಣು ಹೊನ್ನು ಮಣ್ಣು ಹಾಗೂ ಅನ್ನವನ್ನು ಕೊಟ್ಟರೆ ಬರುತ್ತದೆ ಎನ್ನುವವರು ಅದೇನು ಇವರು ಮಾಡಿದ್ದೇನು? ಹೆಣ್ಣು ಹೊನ್ನು ಮಣ್ಣು ಮತ್ತು ಅನ್ನ  ಅಲ್ಲ ಹೀಗೆನ್ನುವವರು ನಿಜವಾಗಿಯೂ ಶರಣರ ತತ್ವ ಸಿದ್ದಾಂತ ಅರಿತವರಲ್ಲ, ಕಾಯಕನಿಷ್ಠೆ ತಿಳಿದವರಲ್ಲ, ಲಿಂಗದ ಪೂಜೆಯ ಅರಿವಿಲ್ಲ  ಎನ್ನುತ್ತಾನೆ.  

ಅಲ್ಲದೆ ಮುಂದುವರೆದು ನಾವೆಲ್ಲ ಕೆರೆಯ ನೀರನ್ನು ಕೆರೆಗೆ ಚಲ್ಲುವ ಕಾಯಕ ಮಾಡುತ್ತಿದ್ದೇವೆ ಅಷ್ಟೆ. ಈ ಕಾರ್ಯ ಮಾಡುವುದಕ್ಕೆ ಪುಣ್ಯ ಯಾವುದು? ಪಾಪ ಯಾವುದು?  ಕೊನೆಗೆ ಇವರು ಏನೇ ಮಾಡಿದರು ವಿಫಲವಾಗುತ್ತದೆ ಎನ್ನುತ್ತಾನೆ. 

ಹೀಗೆ ನಿಜವಾದ ಶರಣರ ಕುರಿತು. ಭಕ್ತಿಯ ಕುರಿತು. ಷಟಸ್ಠಲ ತತ್ವಗಳ ಕುರಿತು. ಕಾಯಕ ನಿಷ್ಠೆಯ ಕುರಿತು ವಚನಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಹಡಪದ ಅಪ್ಪಣ್ಣನವರ ಸಾಮಾಜಿಕ ಕಾಳಜಿ ನಿಜಕ್ಕೂ ನಮಗೆಲ್ಲಾ ಮಾದರಿ. ಇದೆ 21 ರಂದು ಅವರ ಜಯಂತಿಯು ಅರ್ಥಪೂರ್ಣವಾಗಲೆಂದು. ಶಿವ ಶರಣ ಹಡಪದ ಅಪ್ಪಣ್ಣನವರನ್ನು ನೆನೆಯುತ್ತಾ ಈ ಲೇಖನ ಬರೆದಿರುವೆ. ಇದು ಓದುಗರ ಮನ ತಣಿಸಲಿ ಎಂದು ಆಶಿಸುವೆ. 

- ವೆಂಕಟೇಶ ಈಡಿಗರ 

ರಾಣೇಬೆನ್ನೂರು 

- * * * - 


ಸುದ್ದಿ ಓದಿ