ಬಳ್ಳಾರಿ

ಮನಸ್ಸಿನ ದುಗುಡವನ್ನು ಕಳೆಯುವ ಶಕ್ತಿ ಡೊಳ್ಳಿನ ನಾದಕ್ಕಿದೆ: ಡಾ. ರಮೇಶ

ಮನಸ್ಸಿನ ದುಗುಡವನ್ನು ಕಳೆಯುವ ಶಕ್ತಿ ಡೊಳ್ಳಿನ ನಾದಕ್ಕಿದೆ: ಡಾ. ರಮೇಶ

ಬಳ್ಳಾರಿ 19:  ಕೊರೊನಾದಂತ ಸಾಂಕ್ರಾಮಿಕ ರೋಗಗಳ ನಡುವೆ ಬದುಕಿನ ಜಂಜಾ ಸಿಲುಕಿದವರ ಮನಸ್ಸಿನ ದುಗುಡವನ್ನು ಕಳೆಯುವ ಶಕ್ತಿ ನಾದಕ್ಕಿದೆ. ಅದರಲ್ಲಿಯೂ ಅತ್ಯಂತ ವಿಶೇಷ ವಾದ್ಯವಾದ ಡೊಳ್ಳಿನ ನಾದವಂತೂ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ನಾದಕ್ಕೆ ಮೈ ಮರೆತು ಕುಣಿಯಲು ಬಾರದವರನ್ನೂ ಕುಣಿಸುವ ಶಕ್ತಿ ಈ ಡೊಳ್ಳಿನ ನಾದಕ್ಕಿದೆ. ಇದು ಕೇವಲ ಒಂದು ಜಾನಪದ ಕಲೆಯಾಗಿದೆ ಹಾಲುಮತದವರ ಜೀವನ, ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ಒಂದು ವಿಭಿನ್ನ ದೇಸಿ ಕಲೆಯಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಅಭಿಪ್ರಪಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಾಲುಮತ ಅಧ್ಯಯನ ಪೀಠದ ಅಡಿಯಲ್ಲಿ ಹಾಲುಮತ ಸಂಸ್ಕೃತಿ ಸಮ್ಮೇಳನ-8ರಲ್ಲಿ ನಡೆದ ಡೊಳ್ಳಿನ ಹಾಡುಗಳ ಪುಸ್ತಕ ಲೋಕಾರ್ಪಣೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಮ್ಮ ಪೂರ್ವಜರು ನಮಗಾಗಿ ಹಲವು ರೀತಿಯ ಜನಪದ ಸಾಹಿತ್ಯವನ್ನು ಬಿಟ್ಟು ಹೋಗಿದ್ದಾರೆ. ಅಂತಹ ಜನಪದ ಸಾಹಿತ್ಯದಲ್ಲಿ ಒಂದಾದ ಡೊಳ್ಳಿನ ಹಾಡುಗಳು ಮತ್ತು ಡೊಳ್ಳಿನ ಕುಣಿತ ಹಾಲುಮತ ಸಮಾಜದವರಲ್ಲಿ ರಕ್ತಗತವಾಗಿ ಬಳುವಳಿಯಾಗಿ ಬಂದಿದ್ದು, ಇಂದು ಕನ್ನಡ ಜನಪದ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.  

ಕುರಿಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರೂಢಿಮಾಡಿಕೊಂಡು ಈ ಡೊಳ್ಳಿನ ಕುಣಿತ ಮತ್ತು ಡೊಳ್ಳಿನ ಹಾಡುಗಳು ಇಂದು ಧಾರ್ಮಿಕ ಲೌಕಿಕ ಪ್ರಪಂಚವನ್ನು ಪ್ರವೇಶಿಸಿದೆ. ಆದರೆ ಈ ಕಲೆ ಇಲ್ಲಿಯವರೆಗೆ ಕೇವಲ ಮೌಖಿಕವಾಗಿ, ವಂಶಪಾರಂಪರಿಕವಾಗಿ ಬಂದಿದ್ದು, ಅದಕ್ಕೆ ಯಾವುದೇ ತರದ ಗ್ರಾಂಥಿಕ ರೂಪದ ಪುಸ್ತಕಗಳಾಗಲಿ, ಸಂಶೋಧನಾ ಪ್ರಬಂಧಗಳಾಗಲಿ ಇರಲಿಲ್ಲ. ಆದ್ದರಿಂದ ಕನ್ನಡ ವಿಶ್ವವಿದ್ಯಾಲಯ ಒಂದು ಹೆಜ್ಜೆ ಮುಂದೆ ಹೋಗಿ ಇಂಥ ವಿಭಿನ್ನ ಜನಪದ ದೇಸಿ ಸಾಹಿತ್ಯ ಕಲೆಯ ಉಳುವಿಗಾಗಿ ಹಾಲುಮತ ಅಧ್ಯಯನ ಪೀಠದ ಅಡಿಯಲ್ಲಿ ಸಂಶೋಧನೆ ಕೈಗೊಂಡು ಹಾಲುಮತ ಸಾಹಿತ್ಯವನ್ನು ನಾಡಿಗೆ ಪರಿಚಯಿಸುವಂಥ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.  

ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಭಾರತದ ಪ್ರಮುಖ ಜನಸಮುದಾಯಗಳಲ್ಲಿ ಹಾಲುಮತ ಸಮುದಾಯವೂ ಒಂದು. ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದ ಸಮುದಾಯವಿದು. ಕುರುಬರು, ಧನಗಾರರು, ಪಾಲರು, ಗಢಾರಿಯಾ, ಚಂದೇಲರು, ಗೊಲ್ಲರು, ಕುರುಮನ್, ಕುರುಂಬರು, ಯಾದವರು, ರೇವಡಿ, ಬಘೇಲರು ಎಂಬ ಹೆಸರಿನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಗುರುತಿಸಲಾಗುತ್ತಿದೆ. ಮೂಲ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ಇವರು ಪ್ರಾಚೀನ ಕಾಲದಿಂದಲೂ ಪಶುಪಾಲನೆ, ಕುರಿಸಾಕಣೆ, ಕಂಬಳಿ ತಯಾರಿಕೆ ಹಾಗೂ ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಜಾಗತೀಕರಣ-ಉದಾರೀಕರಣ ಗಳಂಥ ಇಂದಿನ ಸಂದರ್ಭಗಳಲ್ಲಿಯೂ ತಮ್ಮ ಸಂಸ್ಕೃತಿಯ ಮೂಲ ಸೊಗಡನ್ನು, ಪರಂಪರಾಗತ ಜೀವನ ಪದ್ಧತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದವರಲ್ಲಿ ಕುರುಬರು ಪ್ರಮುಖರೆನಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಡಾ.ಸಿದ್ಧಣ್ಣ ಎಫ್.ಜಕಬಾಳ ಅವರು ರಚಿಸಿರುವ ಡೊಳ್ಳಿನ ಹಾಡುಗಳು: ಸಂ-1 ಹಾಗೂ ಡಾ.ಚನ್ನಪ್ಪ ಕಟ್ಟಿ ಸಿಂದಗಿ ಅವರು ರಚಿಸಿರುವ ಜನಪದ ಅಮೋಘಸಿದ್ಧ ಮಹಾಕಾವ್ಯ ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಇನ್ನು ಡೊಳ್ಳು ಕಲಾವಿದರಾದ  ಸುಭದ್ರಮ್ಮ ಮತ್ತು ಕಾರಮಂಚಪ್ಪ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಾ.ಜಿ.ಸಂತೋಷಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಯೋಗ ಅಧ್ಯಯನ ವಿಭಾಗದ ಅಧ್ಯಾಪಕರಾದ ಸಿದ್ದರಮೇಶ ಅವರು ಕಾರ್ಯಕ್ರಮವನ್ನು ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.

ಸುದ್ದಿ ಓದಿ