ಬಳ್ಳಾರಿ ಜಿಲ್ಲೆಯಲ್ಲಿ 1782 ಜನರಿಗೆ ಎಚ್ಐವಿ ಸೊಂಕು: ಡಿಎಚ್ಒ ಡಾ.ಜನಾರ್ಧನ್
ಬಳ್ಳಾರಿ 30: ಬಳ್ಳಾರಿ ಜಿಲ್ಲೆಯಲ್ಲಿ 2017ರ ಅಕ್ಟೋಬರ್ನಿಂದ 2021 ರವರೆಗೆ ಒಟ್ಟಾರೆ 459034 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದು,ಅವರಲ್ಲಿ 1782 ಜನರಿಗೆ ಹೆಚ್.ಐ.ವಿ ಸೊಂಕು ಇರುವುದು ದೃಡಪಟ್ಟಿದೆ.
ಬಳ್ಳಾರಿ ಜಿಲ್ಲೆಯಲ್ಲಿ 2 ಎಆರ್ಟಿ ಕೇಂದ್ರಗಳು ಮತ್ತು 7 ಲಿಂಕ್ ಎಆರ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 1963 ಸೋಂಕಿತರಿಗೆ ಪ್ರೀ ಎಆರ್ಟಿ ದಾಖಲೆ ಮಾಡಿಕೊಂಡಿದ್ದು. ಇವರಲ್ಲಿ ಪ್ರಸ್ತುತ 1339 ಜನರು ಚಿಕಿತ್ಸೆಯನ್ನು ಮುಂದುವರಿಸಿದ್ದು, ಸುಮಾರು 624 ಜನರು ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ಮಂಗಳವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಅಸಮಾನತೆಗಳನ್ನು ಕೊನೆಗೊಳಿಸಿ ಏಡ್ಸ್ ಅನ್ನು ಕೊನೆಗೊಳಿಸಿ ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬದು ಈ ವರ್ಷದ ಘೋಷವಾಕ್ಯವಾಗಿದೆ ಎಂದು ತಿಳಿಸಿದ ಡಿಎಚ್ಒ ಡಾ.ಜನಾರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದೆ. ಹೆಚ್ಐವಿ/ಏಡ್ಸ್ ಸೊಂಕನ್ನು ಸೊನ್ನೆಗೆ ತರಲು ಸರಕಾರ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಸೋಂಕಿನ ತಡೆಗೆ ಸಾಕಷ್ಟು ಕೆಲಸಗಳಾಗುತ್ತಿವೆ ಎಂದು ಅವರು ವಿವರಿಸಿದರು.
*ಬಳ್ಳಾರಿ ಜಿಲ್ಲೆಯಲ್ಲಿ 06 ಮಕ್ಕಳಿಗೆ ಎಚ್ಐವಿ ಸೊಂಕು: ಎಚ್.ಐ.ವಿ ಸೋಂಕಿತ ಗರ್ಭೀಣಿ ಸ್ತ್ರೀಗೆ ಜನಿಸಿದ ಮಕ್ಕಳಿಗೆ 6 ವಾರ, 6 ತಿಂಗಳು, 12 ತಿಂಗಳು ಮತ್ತು 18 ತಿಂಗಳ ಅನುಸರಣೆ ಮಾಡಿ ಡಿ.ಬಿ.ಎಸ್ ಪರೀಕ್ಷೆಯನ್ನು ಐಸಿಟಿಸಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಈ ಡಿ.ಬಿ.ಎಸ್ ಪರೀಕ್ಷೆಯಿಂದ ಮಕ್ಕಳಲ್ಲಿ ಸೋಂಕು ಇದೆಯೋ ಅಥವಾ ಇಲ್ಲವೋ ಎಂಬುವುದನ್ನು ಪತ್ತೆಹಚ್ಚಬಹುದಾಗಿದೆ. ಇಂತಹ ಕೇಂದ್ರಗಳನ್ನು ಇ.ಐ.ಡಿ ಕೇಂದ್ರಗಳೆಂದು ಕರೆಯಲಿದದು, ಜಿಲ್ಲೆಯಲ್ಲಿ 10 ಇಐಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತ್ತಿವೆ.
ಇಐಡಿ ಕೇಂದ್ರಗಳಲ್ಲಿ 2017ರಿಂದ 2021 ಅಕ್ಟೋಬರ್ ವರೆಗೆ 166 ಮಕ್ಕಳಿಗೆ ಡಿ.ಬಿ.ಎಸ್ ಪರೀಕ್ಷೆಯನ್ನು ಮಾಡಿಸಲಾಗಿದ್ದು, ಇವರಲ್ಲಿ 06 ಮಕ್ಕಳಿಗೆ ಹೆಚ್.ಐ.ವಿ ಸೋಂಕು ಇರುವುದು ಕಂಡುಬಂದಿದೆ. ಇಲ್ಲಿಯವರೆಗ 115 ಮಕ್ಕಳನ್ನು 18 ತಿಂಗಳ ನಂತರ ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 06 ಮಕ್ಕಳಿಗೆ ಹೆಚ್.ಐ.ವಿ ಇರುವುದು ದೃಢಪಟ್ಟಿದ್ದು,ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ಇಂದ್ರಾಣಿ ಅನಿಲಕುಮಾರ್ ಅವರು ಮಾತನಾಡಿ, ಎಚ್ಐವಿ ಸೊಂಕಿತರ ಸಾಮಾನ್ಯ ಪ್ರಮಾಣದಲ್ಲಿ ಬಳ್ಳಾರಿ ಜಿಲ್ಲೆಯು ಇಡೀ ರಾಜ್ಯದಲ್ಲಿ 07ನೇ ಸ್ಥಾನದಲ್ಲಿದೆ. ಗರ್ಭೀಣಿ ಸ್ತ್ರೀಯರಲ್ಲಿ ಸೊಂಕು ಕಂಡುಬಂದಿರುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.
ಬಳ್ಳಾರಿ ಜಿಲ್ಲೆ ಹೆಚ್.ಐ.ವಿ/ಏಡ್ಸ್ ನಿಯಂತ್ರಣಾ ಮತ್ತು ನಿರ್ವಾಹಕ ಘಟಕ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತಯ್ತಿದ್ದು, 2012ರಿಂದ ಇಲ್ಲಿಯವರೆಗೆ ಅತ್ಯುತ್ತಮ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಅವರು ವಿವರಿಸಿದರು.
ಬಳ್ಳಾರಿ ಜಿಲ್ಲೆಯಲಿ ಪ್ರಸ್ತುತ ನಗರ ಕೇಂದ್ರಗಳಲ್ಲಿ 2213, ಗ್ರಾಮೀಣ ಬಾಗದಲ್ಲಿ 726 ಮಹಿಳಾ ಲೈಂಗಿಕ ಕಾರ್ಯಕರ್ತರು, ಹಾಗು 519 ಎಮ್ಎಸ್ಎಮ್ ಜನರಿದ್ದಾರೆ. ಈ ಜಿಲ್ಲೆಯಲ್ಲಿ 2021-22 (ಅಕ್ಟೋಬರ್ 2021 ರವರೆಗೆ ) ಸಾಲಿನಲ್ಲಿ 2342 ಲೈಂಗಿಕ ಕಾರ್ಯಕರ್ತರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಲಾಗಿದ್ದು, ಓರ್ವ ಮಹಿಳೆಗೆ ಸೊಂಕು ತಗುಲಿದೆ. 427 ಎಂಎಸ್ಎಂ ಜನರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಿದ್ದು ಇಬ್ಬರಿಗೆ ಹೆಚ್.ಐ.ವಿ ಸೋಂಕು ತಗಲಿದೆ ಎಂದರು.
ಕೋವಿಡ್ ನಂತರ ಲೈಂಗಿಕ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ ಎಂಬುದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿರುವ ಅಘಾತಕಾರಿ ಮಾಹಿತಿಯನ್ನು ಅವರು ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟರು.
ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಡಿ.1ರಂದು ಬೆಳಗ್ಗೆ 9.30ಕ್ಕೆ ಜಾಗೃತಿ ಜಾಥಾ ಡಿಎಚ್ಒ ಕಚೇರಿ ಆವರಣದಿಂದ ಹೊರಟು ನಗರದ ವಿವಿಧೆಡೆ ಸಂಚರಿಸಿ ಏಡ್ಸ್ ಕುರಿತು ಜಾಗೃತಿ ಮೂಡಿಸಲಿದೆ.ಇದಾದ ನಂತರ ಬೆಳಗ್ಗೆ 11ಕ್ಕೆ ಡಿಎಚ್ಒ ಕಚೇರಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ಶ್ರಮಿಸಿದ ಮಹನೀಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಾಜಾನಾಯ್ಕ ಅವರು ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣ ಘಟಕ ದಿಂದ ಹೆಚ್ಐವಿ ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆ ಅಡಿ ಪ್ರತಿ ಮಗುವಿಗೆ ತಿಂಗಳಿಗೆ 1 ಸಾವಿರ ರೂ.ಗಳಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 1120 ಮಕ್ಕಳಿಗೆ ಅನುದಾನ ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಆರ್ಟಿ ಕೇಂದ್ರದ ಡಾ.ದಿನೇಶ ಗುಡಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಗೀರೀಶ್, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಮತ್ತಿತರರು ಇದ್ದರು.