ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 25,000 ಹೊಸ ಕೋವಿಡ್ ಪ್ರಕರಣಗಳು ವರದಿ
ನವದೆಹಲಿ, ಮಾರ್ಚ್ 13: ದೇಶದಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 25,000 ಪ್ರಕರಣಗಳು ವರದಿಯಾಗಿವೆ.ಕಳೆದೊಂದು ದಿನದಲ್ಲಿ ಒಟ್ಟು 24,882 ಪ್ರಕರಣಗಳು ವರದಿಯಾಗಿದ್ದು, ಇದು 2021 ರಲ್ಲಿ ಅತ್ಯಧಿಕವಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,13,33,728 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ. ಅಲ್ಲದೆ, ಸೋಂಕಿನಿಂದ 140 ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 1,58,446 ಕ್ಕೆ ತಲುಪಿದೆ. ಕಳೆದ 24 ತಾಸಿನಲ್ಲಿ 19,957 ಮಂದಿ ಚೇತರಿಸಿಕೊಳ್ಳುವುದರೊಂದಿಗೆ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,09,73,260 ಕ್ಕೆ ಏರಿದೆ. ದೇಶಾದ್ಯಂತ ಇದುವರೆಗೆ 22,58,39,273 ಕೋವಿಡ್ ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 8,40,635 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.ಸದ್ಯ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,02,022 ತಲುಪಿದ್ದು, ಇವು ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 1.74 ರಷ್ಟಿವೆ. ಈವರೆಗೆ ದೇಶದಲ್ಲಿ ಒಟ್ಟು 2,82,18,457 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.