ತಾಳಿಕೋಟಿಯಲ್ಲಿ 1987ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ
ಜೀವನದಲ್ಲಿ ಏನೂ ಆಗದಿದ್ದರೂ ಸಂಸ್ಕಾರವಂಥರಾಗಿ: ಕರ್ಜಗಿ
ತಾಳಿಕೋಟಿ: ಬದುಕಿಗೆ ಸ್ಪಷ್ಟವಾದ ಗುರಿ ಅದನ್ನು ತಲುಪಲು ಮಾರ್ಗದರ್ಶನ ಮಾಡುವ ಗುರು ಇದ್ದಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಏನೂ ಆಗದಿದ್ದರೂ ಪರವಾಗಿಲ್ಲ ಉತ್ತಮ ಸಂಸ್ಕಾರವಂಥರಾಗಿ ಬದುಕಲು ಪ್ರಯತ್ನಿಸಿ ಎಂದು ಎಸ್.ಕೆ. ಪ್ರೌಢಶಾಲೆ ಉಪಪ್ರಾಚಾರ್ಯ ಎಸ್.ಡಿ. ಕರ್ಜಗಿ ಹೇಳಿದರು.
ಪಟ್ಟಣದಲ್ಲಿ 1987ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬಳಗದ ವತಿಯಿಂದ ಅಡತ್ ಮರ್ಚಂಟ್ ಅಸೋಸಿಯೇಷನ್ ಸಭಾ ಮಂಟಪದಲ್ಲಿ ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು 1984ರಲ್ಲಿ ವೃತ್ತಿ ಜೀವನ ಆರಂಭಿಸಿದಾಗ ನೀವು ನನ್ನ ಮೊದಲು ವಿದ್ಯಾರ್ಥಿಗಳು, ನೀವು ಕೊಟ್ಟ ಟ್ಯೂಷನ್ ಫೀಯಿಂದಲೇ ನಾನು ಬಿ.ಎಡ್. ಮುಗಿಸಿ ಇಲ್ಲಿ ಶಿಕ್ಷಕನಾದೆ. ನಾನು ನಿಮಗೆ ಕಲಿಸಿದ್ದೇನೆ ಎನ್ನುವುದಕ್ಕಿಂತಲೂ ನಿಮ್ಮಿಂದ ನಾನು ಬಹಳಷ್ಟು ಕಲಿತಿದ್ದೇನೆ. ನೀವು ನೀತಿವಂತರಾಗಿ ಬದುಕಲು ಪ್ರಯತ್ನಿಸಿ, ನಾವು ಬಾಳಿ ಬೆಳಗುವ ದಾರಿ ವ್ಯಸನವಿಲ್ಲದೆ ಹಸನಾಗಿರಬೇಕು ಎಂದರು.
ನಿವೃತ್ತ ಶಿಕ್ಷಕ ಎನ್.ಸಿ. ಕಿಣಗಿ ಅವರು ಮಾತನಾಡಿ ನೀವು ಶಿಕ್ಷಣ ಮುಗಿಸಿ 37 ವರ್ಷಗಳ ನಂತರವೂ ನಮ್ಮನ್ನು ಕರೆದು ಸತ್ಕರಿಸುವಂಥಹ ಕೆಲಸ ಮಾಡಿದ್ದೀರಿ ಇದು ಬೆಲೆ ಕಟ್ಟುವಂಥಹ ಶ್ರೇಷ್ಠ ಕಾರ್ಯವಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಬಿ.ಆರ್. ಬಿರಾದಾರ ಹಾಗೂ ಆರ್.ಕೆ. ಭೂಸಾರೆ ಅವರು ಸಮಯೋಚಿತವಾಗಿ ಮಾತನಾಡಿ ಹಳೆಯ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
1987ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬಳಗದ ವತಿಯಿಂದ ಸಾಲಿನ ಉಪಸ್ಥಿತ ಎಲ್ಲ ಗುರುಗಳನ್ನು ಸನ್ಮಾನಿಸಿ ಗೌರವ ಸಮರೆ್ಣ ಸಲ್ಲಿಸಿ ಅವರ ಸೇವೆಯನ್ನು ಕೊಂಡಾಡಿದರು ಶ್ರೀ ಖಾಸ್ಗತೇಶ್ವರ ಮಠದ ಮುಖ್ಯಸ್ಥ ವೇ.ಮೂ. ಮುರಗೇಶ ವಿರಕ್ತಮಠ ಸಾನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಜಿ.ಜಿ. ಕಾದಳ್ಳಿ ಅಧ್ಯಕ್ಷತೆ ವಹಿಸಿದ್ದರು.