ಜಮಖಂಡಿ

ಬಾಳಿನಲ್ಲಿ ಗುರುವಿನ ಸ್ಥಾನ ಬಹಳ ಮಹತ್ವದ್ದು: ನಾರಾಯಣ ಶಾಸ್ತ್ರಿ

ಬಾಳಿನಲ್ಲಿ ಗುರುವಿನ ಸ್ಥಾನ ಬಹಳ ಮಹತ್ವದ್ದು: ನಾರಾಯಣ ಶಾಸ್ತ್ರಿ

ಲೋಕದರ್ಶನ ವರದಿ,

ಜಮಖಂಡಿ 05: ಜಗತ್ತಿನಲ್ಲಿ ಗುರುವಿಗೆ ಮಹತ್ವವ ಸ್ಥಾನವನ್ನು ನೀಡುವ ದೇಶ ಭಾರತ ದೇಶವಾಗಿದೆ. ಬಾಳಿನಲ್ಲಿ ಗುರುವಿನ ಸ್ಥಾನ ಬಹಳ ಮಹತ್ವದ್ದು ಗುರುವೇ ಬಾಳಿನ ದಾರಿದೀಪ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.

ತಾಲೂಕಿನ ಕುಂಬಾರಹಳ್ಳ ಗ್ರಾಮದ ಪ್ರೌಢ ಶಾಲೆಯಲ್ಲಿ ಸಂಪನ್ನಗೊಂಡ ಡಾ.ಫ.ಗು.ಹಳಕಟ್ಟಿ, ನಿಜಶರಣ ಹಡಪದ ಅಪ್ಪಣ್ಣ, ಸಂತ ಶಿಶುನಾಳ ಷರೀಪ, ಗುರುದೇವ ರಾನಡೆ ಮತ್ತು ಗುರುಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ವಚನಗುಮ್ಮಟ ಫ.ಗು.ಹಳಕಟ್ಟಿಯವರ ಕಾಯಕನಿಷ್ಠೆ, ನಿಜಶರಣ ಹಡಪದ ಅಪ್ಪಣ್ಣನವರ ನಿಜ ಭಕ್ತಿ, ಗುರುದೇವ ರಾನಡೆಯವರ ಆತ್ಮವಿಶ್ವಾಸ ಮತ್ತು ಸಂತ ಶಿಶುನಾಳ ಶರೀಫರ ಗುರುಭಕ್ತಿ ಮತ್ತು ಭಾವೈಕ್ಯತೆಯ ಭಾವ ಇಂದಿನ ತುರ್ತು ಅಗತ್ಯವಾಗಿದ್ದು. ಮಕ್ಕಳು ಎಲ್ಲಾ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಕ್ಷಕ  ಸಂಗನಬಸವ ಉಟಗಿ ಮಾತನಾಡಿ, ಹನ್ನೆರಡನೆಯ ಶತಮಾನದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತಾಗಿದ್ದು ಅಲ್ಲಿರುವ ಶರಣರೆಲ್ಲರ ಜೀವನವೂ ನಮಗೆ ಮಾರ್ಗದರ್ಶಕವಾಗಿದೆ. ಹಡಪದ ಕಾಯಕದ ಅಪ್ಪಣ್ಣನವರು ನಿಜಸುಖಿ ಶರಣರಾಗಿದ್ದರು. ಅವರ ಜೀವನವೆ ನಮಗೆ ಸಂದೇಶವಾಗಿದೆ. ಅಂದು ವಚನದ ಕಟ್ಟುಗಳನ್ನು ಅಲ್ಲಲ್ಲಿ ಇಟ್ಟು ಶರಣರು ಸಾಗಿದರು ಅದೆಲ್ಲವನ್ನು ಹಳಕಟ್ಟಿಯವರು ಸಂಗ್ರಹಿಸಿಕೊಟ್ಟು ವಚನ ಪಿತಾಮಹರಾದರು. ವಿಜಯಪುರದಲ್ಲಿ ಬಿ, ಎಲ್, ಡಿ, ಇ ಸಂಸ್ಥೆ, ಸಿದ್ದೇಶ್ವರ ಸಂಸ್ಥೆ, ಮುಂತಾದವುಗಳನ್ನು ಸ್ಥಾಪಿಸಿದರು. ಸಂತ ಶಿಶುನಾಳ ಶರೀಫರು ಭಾವೈಕ್ಯತೆಯ ಸಂದೇಶವನ್ನು ಸಾರಿದರು. ವಿದ್ಯಾರ್ಥಿಗಳು ಕಾಯಕನಿಷ್ಠರಾಗಬೇಕು ಎಂದರು.

ಶಿಕ್ಷಕ ಸಂಜೀವ ಝಂಬುರೆ ಮಾತನಾಡಿ, ನಾವೆಲ್ಲರೂ ತಂದೆ, ತಾಯಿ, ಗುರುಗಳು ತೋರಿಸಿಕೊಟ್ಟ  ಪಥದಲ್ಲಿ ಸಾಗಿ ಜೀವನವನ್ನು ಪಾವನ ಮಾಡಿಕೊಳ್ಳೋಣ ಎಂದರು.

ಪುಷ್ಪಾ ಹುದಲಿ ಮತ್ತು ಲಕ್ಷ್ಮಣ ತೇರದಾಳ ಮನದಾಳದ ನುಡಿನಮನ ಸಲ್ಲಿಸಿದರು. ಶಿಕ್ಷಕರಾದ ಸವಿತಾ ಬೆನಕಟ್ಟಿ ,ಆಸೀಫಾಭಾನು ಮೋಮಿನ್,ಎಸ್.ಎಸ್.ಬಿರಾದಾರ, ಚಂದ್ರಕಾಂತ ಪೋಲೀಸ್ ಇದ್ದರು. ಶಿಕ್ಷಕಿ ಶಾರದಾ ಮಠ ನಿರೂಪಿಸಿ, ವಂದಿಸಿದರು. ಸಾವಿತ್ರಿ ಕುರಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.



ಸುದ್ದಿ ಓದಿ