ಹುನಗುಂದ

ಮುಖ್ಯಾಧಿಕಾರಿಗೆ ತರಾಟೆ ತಗೆದುಕೊಂಡ ದಲಿತ ಮುಖಂಡ ನಡುವಿನಮನಿ

ಮುಖ್ಯಾಧಿಕಾರಿಗೆ ತರಾಟೆ ತಗೆದುಕೊಂಡ ದಲಿತ ಮುಖಂಡ ನಡುವಿನಮನಿ

ಹುನಗುಂದ 04:  ಪಟ್ಟಣದ ಮಧ್ಯಭಾಗದಲ್ಲಿ ಹಾಯ್ದು ಹೋಗುವ ಹಿರೇಹಳ್ಳದ ನೀರು ಪ್ರತಿ ಸಾರಿ ಎಸ್.ಸಿ ಕಾಲೋನಿಗೆ ಪ್ರವೇಶಿಸುತ್ತಿದ್ದರೂ ಪುರಸಭೆ ಅಧಿಕಾರಿಗಳು ಕ್ರಮ ತಗೆದುಕೊಳ್ಳುತ್ತಿಲ್ಲ ಎಂದು ದಲಿತ ಮುಖಂಡ ಹನಮಂತ ನಡುವಿನಮನಿ ಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಪಾಟೀಲ ಅವರನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.                      

ಶನಿವಾರ ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ದಲಿತರ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿದರು.

ಹಿರೇಹಳ್ಳದ ನೀರು ಬಂದು ಹೋದ ಮೇಲೆ ಲಕ್ಷ್ಮೀ ನಗರ,ಡಾ.ಬಿ.ಆರ್.ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಮ ಕಾಲೋನಿ ಸುತ್ತಮುತ್ತಲು ಹಾಳೆತ್ತರದಷ್ಟು ಮುಳ್ಳುಕಂಟಿಗಳು ಬೆಳೆದು ಅಲ್ಲಿನ ವಾಸಿಗಳು ನಿತ್ಯ ಹಾವು ಚೇಳಿನ ಜೊತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಚರಂಡಿ ಎಸ್ಟೀಮೆಂಟ್ ಮಾಡಿ ಮೂರು ವರ್ಷಗಳು ಗತಿಸಿದರೂ ಸರಿಯಾದ ಚರಂಡಿ ನಿರ್ಮಾಣವಾಗಿಲ್ಲ ಎಂದು ಆರೋಪಿಸಿದಾಗ ಅದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಸಧ್ಯ ಹಿರೇಹಳ್ಳದ ಸ್ವಚ್ಚತೆಗಾಗಿ ಕ್ರಿಯಾಯೋಜನೆಯನ್ನು ಸಿದ್ಧಗೊಳಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ.

ಸಧ್ಯದಲ್ಲಿಯೇ ಸ್ವಚ್ಚತೆಯ ಕಾರ್ಯ ಮಾಡಲಾಗುವುದು ಎಂದು ಸಭೆ ತಿಳಿಸಿದರು. ಇನ್ನು ಗ್ರಾಮೀಣ ಪ್ರದೇಶದಲ್ಲಿ ದಲಿತರು ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಾಡಳಿತದಿಂದ ಗ್ರಾಮೀಣ ಮಟ್ಟದ ದಲಿತರ ಕುಂದುಕೊರತೆ ಸಭೆ ನಡೆಸಬೇಕು ಮತ್ತು ತಾಲೂಕಿನ ಸಮೀಪದ ಕಮಲದಿನ್ನಿ ಗ್ರಾಮದ ಪುನರ ವಸತಿ ಕೇಂದ್ರದಲ್ಲಿ ಸರಿಯಾದ ಹಕ್ಕು ಪತ್ರ ನೀಡದೇ ಇರೋದರಿಂದ ದಲಿತರು ವಾಸಿಸುತ್ತಿರುವ ಶೆಡ್‍ಗಳನ್ನು ತೆರುವುಗೊಳಿಸುವಂತೆ ಅಲ್ಲಿನ ಮೇಲ್ವರ್ಗದ ಜನರು ದಲಿತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಅದರ ಕುರಿತು ಏನು ಕ್ರಮ ತಗೆದುಕೊಂಡಿದ್ದೀರಿ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಹೊಸಮನಿ ತಹಶೀಲ್ದಾರ ಜಿ.ಎಂ.ಕುಲಕರ್ಣಿ ಅವರನ್ನು ಪ್ರಶ್ನಿಸಿದಾಗ ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ ನಾಳೆನೇ ನಾನು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.ಚಿಕ್ಕಮಾಗಿ ಗ್ರಾಮದಲ್ಲಿ ಮನೆಯ ಹಂಚಿಕೆಯಲ್ಲಿ ದಲಿತರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ದಲಿತ ಮುಖಂಡ ಬಸವರಾಜ ಹೊಸಮನಿ ಸಭೆಗೆ ತಿಳಿಸಿದಾಗ ತಹಶೀಲ್ದಾರ ಅದರ ಕುರಿತು ನನಗೆ ನಿನ್ನೆ ಮಾಹಿತಿ ಬಂದಿದೆ ನಾನು ಮತ್ತು ಸಿಪಿಐ ಅಯ್ಯನಗೌಡ ಪಾಟೀಲ ಅಲ್ಲಿಗೆ ಹೋಗಿ ಬಗೆಹರಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆತಯಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ ಇದರ ಕುರಿತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದಾಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅದರ ಕುರಿತು ಕ್ರಮ ಕೈಕೊಳ್ಳುವ ಭರವಸೆಯನ್ನು ನೀಡಿದರು. ಕೃಷಿ ಇಲಾಖೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕೀರುವ ಅನುದಾನದಲ್ಲಿ ಕೊಡುವ ಪಿಂಕ್ಲರ್ ಪೈಪ್‍ಗಳು ಸರಿಯಾಗಿ ವಿರಣೆಯಾಗುತ್ತಿಲ್ಲ ಎಂದು ಮುಖಂಡ ಸಂಗಪ್ಪ ಚಲವಾದಿ ಆರೋಪಿಸಿದರು.                               

ಈ ಸಂದರ್ಭದಲ್ಲಿ ಅಬಕಾರಿ ಇನ್ಸ್‍ಪೆಕ್ಟರ್ ಮಂಜುನಾಥ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ ಇದ್ದಲಗಿ,ದಲಿತ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ