ಇಂಡಿ

ಪಶುಗಳಿಗೆ ಹಸಿರು ಮೇವು ಬಹಳ ಮುಖ್ಯ; ನಾಯ್ಕ್‌

ಪಶುಗಳಿಗೆ ಹಸಿರು ಮೇವು ಬಹಳ ಮುಖ್ಯ; ನಾಯ್ಕ್‌


ಇಂಡಿ03:  ಪಶುಗಳಿಗೆ ಸಮತೋಲನ ಆಹಾರ, ಅದರಲ್ಲು ಹಸಿರು ಮೇವನ್ನು ನೀಡುವುದು ಬಹಳ ಮುಖ್ಯವಾದುದು ಎಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಸ್ತರಣಾ ನಿರ್ದೇಶಕ ಡಾ. ಬಾಲಚಂದ್ರ ನಾಯ್ಕ್‌ ಹೇಳಿದರು. 

ಅವರು ಶುಕ್ರವಾರ ಮಣಂಕಲಗಿ ಗ್ರಾಮದಲ್ಲಿ ಬಹುವಾರ್ಷಿಕ ಹಸಿರು ಮೇವಿನ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಏಕದಳ ಬಹುವಾರ್ಷಿಕ ಹೈಬ್ರಿಡ್ ನೇಪಿಯರ್ ತಳಿಯಾದ ಕೋ-5 ಮತ್ತು ಡಿ.ಹೆಚ್‌.ಎನ್‌-6ಅತಿ ಹೆಚ್ಚು ಪೌಷ್ಠಿಕ ಮತ್ತು ಅತಿ ಹೆಚ್ಚು ಇಳುವರಿ ನೀಡುವ ಮೇವಾಗಿದೆ. ಒಮ್ಮೆ ನಾಟಿ ಮಾಡಿದ ಮೇಲೆ ಈ ಬೆಳೆಯನ್ನು 2-3 ವರ್ಷಗಳವರೆಗೆ ಸತತವಾಗಿ ಮೇವನ್ನು ಒದಗಿಸುತ್ತದೆ. ನಮ್ಮ ವಿಜಯಪುರ ಭಾಗಕ್ಕೆ ಕೋ-5 ತಳಿ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾದ ಡಾ. ಶ್ರೀಪಾದ ಕುಲಕರ್ಣಿ ಮಾತನಾಡಿ ಹೈನುಗಾರಿಕೆ ಬಹಳ ಮುಖ್ಯವಾದ ಉಪಕಸಬು ಹಾಗೂ ಇದನ್ನು ಯಶಸ್ವಿ ಮಾಡಬೇಕಾದರೆ ಪಶು ಪಾಲನೆಯಲ್ಲಿ ಶೇ. 70 ರಷ್ಟು ಖರ್ಚು ಆಹಾರದ್ದೆ ಆಗಿರುತ್ತದೆ. ಆದರೆ ಸುಧಾರಿತ ತಳಿಯ ಏಕದಳ ಮತ್ತು ದ್ವಿದಳ ಮೇವನ್ನು ಬೆಳೆದು ರಾಸುಗಳಿಗೆ ನೀಡಿದರೆ ಖಂಡಿತವಾಗಿ ಪಶು ಪಾಲನೆಯಲ್ಲಿ ಆಗುವ ಆಹಾರದ ಖರ್ಚವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು. 

 ಕೆವಿಕೆ ಮುಖ್ಯಸ್ಥ ಡಾ. ಆರ್‌. ಬಿ. ನೆಗಳೂರ ಮಾತನಾಡಿದರು. ಡಾ. ಸಂತೋಷ ಶಿಂದೆ, ಎಸ್‌.ಟಿ.ಕೋಳಿ, ಅಪ್ಪಾಸಾಹೇಬ ಬಿರಾದಾರ,  ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ಮಣ್ಣು ವಿಜ್ಞಾನಿ ಡಾ. ಸವಿತಾ ಬಿ, ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾ. ಸೈಯದಾ ಸಮೀನಾ ಅಂಜುಮ ಹಾಗೂ ರೈತರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು. 


ಸುದ್ದಿ ಓದಿ