ವಿಜಯಪುರ

ನೀರಾವರಿ ಯೋಜನೆಗೆ ಕೃತಜ್ಞತೆ; ಸಚಿವ ಎಂ.ಬಿ. ಪಾಟೀಲ ಹೆಸರಿಟ್ಟ ರೈತ ಕುಟುಂಬ

ನೀರಾವರಿ ಯೋಜನೆಗೆ ಕೃತಜ್ಞತೆ; ಸಚಿವ ಎಂ.ಬಿ. ಪಾಟೀಲ ಹೆಸರಿಟ್ಟ ರೈತ ಕುಟುಂಬ

ವಿಜಯಪುರ 12: ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ರೈತ ಕುಟುಂಬವೊಂದು ತಮ್ಮ ಹೊಸ ಮನೆಗೆ ಸಚಿವ ಎಂ.ಬಿ. ಪಾಟೀಲ ಅವರ ಹೆಸರಿಟ್ಟು ಕೃತಜ್ಞತೆ ಸಲ್ಲಿಸಿರುವ ಅಪರೂಪದ ಘಟನೆ ನಡೆದಿದೆ.  ಸೋಮದೇವರಹಟ್ಟಿ ಗ್ರಾಮದ ಸಿದ್ದಯ್ಯ, ಸಾತಯ್ಯ, ಬಸಯ್ಯ ಹಾಗೂ ಮಲ್ಲಯ್ಯ ಸಹೋದರರ ಅವಿಭಕ್ತ ಕುಟುಂಬವು ವಿಜಯಪುರ ನಗರದ ಅಥಣಿ ರಸ್ತೆಯ ರಾಜಕುಮಾರ ಲೇಓಟ ಸುವರ್ಣನಗರದಲ್ಲಿ ನೂತನ ಮನೆ ನಿರ್ಮಿಸಿದ್ದು, ಅದಕ್ಕೆ  ಎಂ.ಬಿ. ಪಾಟೀಲ ನಿಲಯ ಎಂದು ನಾಮಕರಣ ಮಾಡಿದೆ. ಮನೆ ವಾಸ್ತುಶಾಂತಿ ಹಾಗೂ ಗೃಹಪ್ರವೇಶ ಕಾರ್ಯಕ್ರಮವನ್ನು ಭಾನುವಾರ ನೆರವೇರಿಸಲಾಯಿತು.  

ಈ ಕುರಿತು ಮಾತನಾಡಿದ ಕುಟುಂಬದ ಸದಸ್ಯರು, ತಮ್ಮ ಬಳಿ ಸುಮಾರು 40 ಎಕರೆ ಜಮೀನಿದ್ದು, ಹಿಂದೆ ಮಳೆ ಆಧಾರಿತ ಕೃಷಿಯನ್ನೆ ಅವಲಂಬಿಸಬೇಕಾಗಿತ್ತು. 2013ಹಿ18 ಅವಧಿಯಲ್ಲಿ ಎಂ.ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಜಾರಿಗೆ ತಂದ ನೀರಾವರಿ ಯೋಜನೆಗಳಿಂದ ತಮ್ಮ ಜಮೀನಿಗೆ ನೀರು ದೊರೆತು ಕೃಷಿಯಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು.  

ನೀರಾವರಿ ಸೌಲಭ್ಯದಿಂದ ದ್ರಾಕ್ಷಿ ಬೆಳೆ ಆರಂಭಿಸಿ, ಒಣದ್ರಾಕ್ಷಿ ಉತ್ಪಾದನೆಯ ಮೂಲಕ ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ಗಳಿಸುವಂತಾಗಿದೆ. ತಮ್ಮ ಆರ್ಥಿಕ ಪ್ರಗತಿಗೆ ಸಚಿವ ಎಂ.ಬಿ. ಪಾಟೀಲ ಅವರ ಕೊಡುಗೆ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಮನೆಗೆ ಇಟ್ಟು ಕೃತಜ್ಞತೆ ಸಲ್ಲಿಸಿದ್ದೇವೆ ಎಂದು ಕುಟುಂಬ ತಿಳಿಸಿದೆ.  ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, ರೈತ ಕುಟುಂಬದ ಈ ಪ್ರೀತಿ ಮತ್ತು ಗೌರವದಿಂದ ಭಾವುಕರಾಗಿದ್ದೇನೆ. ಇದು ವೈಯಕ್ತಿಕ ಗೌರವವಲ್ಲ; ರೈತರ ವಿಶ್ವಾಸ ಮತ್ತು ಪ್ರೀತಿಯ ಪ್ರತೀಕವಾಗಿದೆ. ರೈತರ ಬದುಕು ಇನ್ನಷ್ಟು ಸುಧಾರಿಸಲು ತಮ್ಮ ಸೇವೆ ನಿರಂತರವಾಗಿರಲಿದೆ ಎಂದು ಹೇಳಿದರು.  

ಗೃಹಪ್ರವೇಶ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್‌ ಅಂಡ್ ಅನಿಮಲ್ಸ್‌ ಅಧ್ಯಕ್ಷ ಧ್ರುವ ಎಂ. ಪಾಟೀಲ, ಟಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದುಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಕುಟುಂಬದ ಸದಸ್ಯರಿಗೆ ಶುಭ ಹಾರೈಸಿದರು. 


ಸುದ್ದಿ ಓದಿ