ಕಲಾವಿದರಿಗೆ ಮಸಾಶನ ಕನಿಷ್ಟ 5000 ಸರಕಾರ ನೀಡಿ: ಬಸವರಾಜ
ಬಳ್ಳಾರಿ: ಕಲಾವಿದರು ಬಹಳ ಸಂಕಷ್ಟದಲ್ಲಿದ್ದಾರೆ. ಕಲಾವಿದರಿಗೆ ಮಸಾಶನ ಕನಿಷ್ಟ 5000 ರೂ. ಸರಕಾರ ನೀಡಬೇಕು ಎಂದು ಕನರ್ಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ.ಎಚ್.ಎಂ. ಬಸವರಾಜ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ವೈಭವ-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರ ಬೇರೆ ಬೇರೆ ಹಲವು ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದರೆ, ಕಲಾವಿದರಿಗೆ ಸವಲತ್ತುಗಳು ಇಲ್ಲ. ಕಲಾವಿದರು ಯಾರೂ ಶ್ರೀಮಂತರಲ್ಲ. ಅವರ್ಯಾರು ಎಂಎ, ಪಿಎಚ್ಡಿ ಓದಿದವರೂ ಅಲ್ಲ. ಕಲಾವಿದರೆಲ್ಲರೂ ಬುಡಕಟ್ಟು ಸಮಾಜದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರೇ ಹೆಚ್ಚು. ಅವರ ಜೀವನದ ಕನಿಷ್ಟ ನಿರ್ವಹಣೆಗೆ ಸರಕಾರ ಐದು ಸಾವಿರ ರು.ಮಾಸಾಶನ ನೀಡಬೇಕು ಎಂದರು.
ಪ್ರಸ್ತುತ ಶಾಸಕರು, ಸಂಸದರು ಸೇರಿ ಜನಪ್ರತಿನಿಧಿಗಳು ತಮ್ಮ ಮಾಸಿಕ ಸಂಬಳವನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ, ಪಿಂಚಣಿಯೂ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಯಾರು ನಾವು ಕಂಡಂಗೆ ಬಡವರು ಇಲ್ಲ. ಆದರೂ ಅವರಿಗೆ ಸಂಬಳ ಹೆಚ್ಚು, ಮತ್ತೆ ಪಿಂಚಣಿ ಮಾಡಿಕೊಂಡಿದ್ದಾರೆ. ಬಡ ಕಲಾವಿದರಿಗೆ ಬದುಕು ರೂಪಿಸಿಕೊಡಲು ಸರಕಾರ ಮಾಸಾಶನ ಹೆಚ್ಚಳಮಾಡಬೇಕು. ನಿವೇಶನಕೊಡಬೇಕು. ಮನೆಯನ್ನೂ ಸಹ ಕಟ್ಟಿಸಿಕೊಡಬೇಕು ಎಂದು ಸರಕಾರದ ಗಮನ ಸೆಳೆದರು.
ಯಕ್ಷಗಾನಕ್ಕಿಂತ ಮೊದಲೇ ಬಯಲಾಟ ಸೃಷ್ಟಿಯಾಗಿದೆ. ಆದರೆ, ಬಯಲಾಟ ಅಷ್ಟೂ ಬೆಳವಣಿಗೆ ಆಗಲಿಲ್ಲ. ಕೇವಲ ಮೂರು ಜಿಲ್ಲೆಯಲ್ಲಿರುವ ಯಕ್ಷಗಾನ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ಆದರೆ, ಬಯಲಾಟ ಅಷ್ಟು ಎತ್ತರಕ್ಕೆ ಬೆಳೆಯಲಿಲ್ಲ. ಕಾರಣ ಯಕ್ಷಗಾನಕ್ಕೆ ವಿದ್ಯಾವಂತ ಬುದ್ಧಿವಂತರು ಪ್ರೋತ್ಸಾಹ ನೀಡುವ ಮೂಲಕ ಭಾಗವಹಿಸುತ್ತಾರೆ. ಬಯಲಾಟಕ್ಕೆ ವಿದ್ಯಾತರ ಪ್ರೋತ್ಸಾಹದ ಕೊರತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಬಯಲಾಟ ಕಲಾವಿದರಿಗೆ ಸೌಲಭ್ಯ ನೀಡಬೇಕು. ಅದೇ ರೀತಿ ನಾವು ಸಹ ಸಹಾಯ ಹಸ್ತ ಚಾಚಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಪ್ರಶಸ್ತಿ ಪುರಸ್ಕೃತರು, ಖ್ಯಾತ ತೊಗಲುಗೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ತೊಗಲುಗೊಂಬೆ ಆಟ ಮರೆತು ಹೋಗಿದೆ. ಆದರೆ ತೊಗಲುಗೊಂಬೆ ಕಲೆ ಭವ್ಯವಾದ ಕಲೆ ಅದಕ್ಕೆ ಅದರದೇ ಆದಂತ ಶಕ್ತಿ ತುಂಬಿಕೊಂಡಿದೆ. ತೊಗಲುಗೊಂಬೆ ಕಲಾವಿದರು ಆ ಕಲೆ ಮೇಲೆ ವಿಶ್ವಾಸ ಇಟ್ಟುಕೊಂಡು ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇದರಿಂದ ಈಗಿನ ಕಾಲದಲ್ಲಿ ಹೊಟ್ಟೆ ತುಂಬುವುದಿಲ್ಲ ಅದಕ್ಕಾಗಿ ಜೀವನೋಪಾಯಕ್ಕೆ ಬೇರೆ ಕೆಲಸ ನೋಡಿಕೊಳ್ಳಬೇಕು. ಈ ಕಲೆಯನ್ನು ಪ್ರವೃತ್ತಿಯಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಹಿರಿಯ ಪತ್ರಕರ್ತರು ಹಾಗು ಬಯಲಾಟ ಕಲಾವಿದರಾ ಸಿದ್ದರಾಮಪ್ಪ ಸಿರಿಗೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಲೆಮಾರಿ ಸಿಳೆಕ್ಯಾತಸ್ ಸಮಿತಿ ರಾಜ್ಯಾಧ್ಯಕ್ಷ ಬಿ.ಎಚ್. ಮಂಜುನಾಥ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹೆಚ್. ತಿಪ್ಪೇಸ್ವಾಮಿ, ಮುಖಂಡರಾದ ಯು. ಎರರ್ಿಸ್ವಾಮಿ, ಕೊಳಗಲ್ಲು ಅಂಜಿನಿ, ಕುಡಿತಿನಿ ರಾಮಾಂಜಿನಿ, ಹನುಮಾವಧೂತಪ್ಪ, ಲೋಕರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಧುಸೂದನ್ ಮತ್ತು ತಂಡದವರಿಂದ ತೊಗಲುಗೊಂಬೆ ಪ್ರದರ್ಶನ, ದೊಡ್ಡ ಬಸವ ಗವಾಯಿ ಅವರಿಂದ ವಚನ ಗಾಯನ ಮತ್ತು ಅಂಬಿಕಾ ಎಸ್. ಮತ್ತು ತಂಡದವರಿಂದ ಜಾನಪದ ನ್ಯತ್ಯ ಪ್ರದರ್ಶನ ನಡೆಯಿತು.
ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ಸಿ. ಜಯಲಕ್ಷ್ಮೀ ವಂದಿಸಿದರು.