ನೇಕಾರರ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು
ಬಳ್ಳಾರಿ 06: ನೇಕಾರರ ಸಮಾಜದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು, ಈಗಾಗಲೇ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನೇಕಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಶ್ರಮಿಸುವ ಕೈಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದ್ಯ ವಚನಕಾರ ನೇಕಾರರ ಸಂತ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆ ಅಡಿ ನೀಡಲಾಗುತ್ತಿದ್ದ ವಾರ್ಷಿಕ 2 ಸಾವಿರ ಸಹಾಯಧನವನ್ನು 5ಸಾವಿರಕ್ಕೆ ಹೆಚ್ಚಿಸಲಾಗಿದೆ. ರೇಷ್ಮೆ, ಹತ್ತಿ, ಉಣ್ಣೆ ಮತ್ತು ಇತರ ಕೈಮಗ್ಗ ನೇಕಾರರು ಸಹ ಈ ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದರು.
54,789 ನೇಕಾರರಿಗೆ 10.97 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದೆ. ರಾಜ್ಯ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್ಗಳ ಮೂಲಕ ನೇಕಾರರ ಪಡೆಯುವ ಸಾಲದ ಮೇಲೆ ಶೇ.8ರಷ್ಟು ಬಡ್ಡಿ ಸಹಾಯಧನ ಸೌಲಭ್ಯ ಸರಕಾರ ನೀಡಿದೆ. ನೇಕಾರರ ಮಕ್ಕಳ ಶಿಕ್ಷಣ ಉತ್ತೇಜಿಸಲು ವಿದ್ಯಾರ್ಥಿ ವೇತನ ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು. ದೇವರ ದಾಸಿಮಯ್ಯ ಅವರು ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಸಚಿವ ಶ್ರೀರಾಮುಲು ಅವರು ನೇಕಾರರ ಶ್ರಮ ದೊಡ್ಡದು, ರೈತ ಅನ್ನ ಕೊಟ್ಟರೆ ನೇಕಾರ ಮಾನ ಮುಚ್ಚುತ್ತಾನೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ ನೇಕಾರ ಸಮುದಾಯದವರು ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ಅವರು ದೇವರ ದಾಸಿಮಯ್ಯರವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲಣ್ಣ, ಮಹಾನಗರ ಪಾಲಿಕೆ ಮಹಾಪೌರ ಎಂ.ರಾಜೇಶ್ವರಿ, ಉಪಮೇಯರ್ ಮಾಲನ್ ಜಿಪಂ ಸಿಇಒ ಲಿಂಗಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ತಹಶೀಲ್ದಾರ ವಿಶ್ವನಾಥ ಸೇರಿದಂತೆ ನೇಕಾರರ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.