ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಸಮಾನವಾಗಿ ಹಂಚಿಕೆ ಮಾಡಿಲ್ಲ: ಭೀಮಾನಾಯ್ಕ್
ಹಗರಿಬೊಮ್ಮನಹಳ್ಳಿ 24: ರಾಜ್ಯ ಸರ್ಕಾರ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿಲ್ಲ ಎಂದು ಶಾಸಕ ಎಸ್.ಭೀಮಾನಾಯ್ಕ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಎಂ.ಬಿ.ಕಾಲೂನಿಯ ಹತ್ತಿರ ನಬಾರ್ಡ್ ಯೋಜನೆಯಡಿ 2.3ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿರುವ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಈಗ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದು, ಅನುದಾನ ನೀಡುವಲ್ಲಿ ತಾರತಮ್ಯ ಮಾಡುವ ಮೂಲಕ ಇಲ್ಲಿಯವರೆಗೂ ಬರೀ 10ಕೋಟಿ ರೂ.ಗಳನ್ನು ಮಾತ್ರ ನೀಡಿದ್ದರ ಪರಿಣಾಮ ಅಭಿವೃದ್ಧಿ ಕುಟಿಂತವಾಗಿದೆ ಎಂದು ರಾಜ್ಯ ಸರಕರದ ಮೇಲೆ ಆರೋಪಿಸಿದರು.
ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆಧ್ಯತೆ ನೀಡಿದ್ದು, ಸುಮಾರು ನೂರಾರು ಕೋಟಿ ರೂ.ಗಳ ಅನುದಾನವನ್ನು ತರುವ ಮೂಲಕ ಶಿಕ್ಷಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತಾಲೂಕಿಗೆ ಡಿಪ್ಲೋಮ್ ಮತ್ತು ಇಂಜಿನಿಯರಿಂಗ್ ಕಾಲೇಜ್‌ಗಳನ್ನು ತರುವಲ್ಲಿ ಶ್ರಮಿಸುತ್ತಿರುವೆ ಎಂದರು.
ನಾನು ರಾ.ಬ.ಕೊ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಳಿಕ, ರೈತರಿಗೆ ಎರಡು ಬಾರಿ ಬೋನಸ್ಸ್‌ನೀಡಿದ್ದೇನೆ ಈಗ ಮತ್ತೇ 3ನೇಯಬಾರಿ 6.ರೂ.ಗಳ ಬೋನಸ್ಸ್‌ನ್ನು ನೀಡಲಾಗುವುದು ಎಂದ ಅವರು, ಈ ಎಂ.ಬಿ.ಕಾಲೂನಿ ವ್ಯಾಪ್ತಿಯಲ್ಲಿಯೇ 100 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಬೃಹತ್ ಹಾಲಿನ ಡೈರಿ ತೆರೆಯಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ತಾಲೂಕು ಪಶುಸಂಗೋಪನೆ ಇಲಾಖೆಯ ಹೆಚ್ಚುವರಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ನಂತರ ವೀರಶೈವ ಹಡಪದ್ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರದ ಅಕ್ಕಿತೋಟೇಶ್, ಹೆಗ್ಡಾಳ್ ರಾಮಣ್ಣ, ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ಜಿ.ಮಂಜಣ್ಣ, ತಾಲೂಕು ಅಧ್ಯಕ್ಷ ದೇವರಾಜ್, ಬಾಬು, ಡಿಶ್ ಮಂಜುನಾಥ, ಮರಿ ರಾಮಪ್ಪ, ಎಚ್.ಪ್ರಭಾಕರ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜೆ.ಡಿ. ಎಸ್.ರವೀಂದ್ರನಾಥ ಬಾಳಿ, ಕಾಲೇಜ್ ಪ್ರಾಂಶುಪಾಲರಾದ ಕೆ.ನಾಗಭೂಷಣ, ಇಂಜಿನಿಯರ್ ದೇವರೆಡ್ಡಿ ಹಾಗೂ ಸಿಬ್ಬಂದಿಯವರಿದ್ದರು.