ಬಳ್ಳಾರಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಆರಂಭ
ಬಳ್ಳಾರಿ 13, ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರಾಜ್ಯ ಸರ್ಕಾರವು ಸಂಧ್ಯಾಶಕ್ತಿ ಯೋಜನೆಯಡಿಯಲ್ಲಿ ಪ್ರಾರಂಭಿಸಲಾದ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜನ್ನು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ ಜಿ.ಸೋಮಶೇಖರರೆಡ್ಡಿ ಅವರು, ನಮ್ಮ ಬಳ್ಳಾರಿಯಲ್ಲಿ ಸಂಜೆ ಕಾಲೇಜು ಪ್ರಾರಂಭವಾಗಿರುವುದು ಉದ್ಯೋಗಸ್ಥರಿಗೆ, ಅರೆಕಾಲಿಕ ಉದ್ಯೋಗಿಗಳಿಗೆ, ವಿದ್ಯಾಭ್ಯಾಸವನ್ನು ಅಪೂರ್ಣಗೊಳಿಸಿದವರಿಗೆ ಈ ಸಂಜೆ ಕಾಲೇಜು ಶಿಕ್ಷಣವು ಸಹಕಾರಿಯಾಗಿದ್ದು, ಬಿ.ಕಾಂ ಮತ್ತು ಬಿ.ಸಿ.ಎ ಪದವಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಇದರ ಪ್ರಯೋಜನವನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ ಭಾಗದ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾಲೇಜಿಗೆ ಸುಂದರ ಸುಸಜ್ಜಿತ ಸಭಾಂಗಣವು ಮಂಜೂರಾಗಿದ್ದು, ಭೌತಿಕ ಸಂಪನ್ಮೂಲಗಳ ಜೊತೆಗೆ ಬೌದ್ಧಿಕ ಸಂಪನ್ಮೂಲಗಳನ್ನು ಮುಂದಿನ ದಿನಗಳಲ್ಲಿ ಕಾಲೇಜಿಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಹೇಮಣ್ಣ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವೀರಶೇಖರೆಡ್ಡಿ, ಶ್ರೀನಿವಾಸಮೋತ್ಕರ್, ಇಬ್ರಾಹಿಂ ಬಾಬು, ಅಶೋಕ್ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮೊದಲಾದವರು ಹಾಜರಿದ್ದರು. ದೇವರಾಜ ಪ್ರಾರ್ಥಿಸಿದರು. ಕಲ್ಯಾಣಬಸವ ಸ್ವಾಗತಿಸಿದರು. ಡಾ.ತಿಪ್ಪೇರುದ್ರ ಸಂಡೂರು ಇವರು ನಿರೂಪಿಸಿದರು.