ಬಳ್ಳಾರಿ

ಪತ್ರಕರ್ತರಿಗೆ ಸರ್ಕಾರದ ಸವಲತ್ತು ಒದಗಿಸಲು ಬದ್ಧ: ಸೋಮಶೇಖರ್ ರೆಡ್ಡಿ

ಪತ್ರಕರ್ತರಿಗೆ ಸರ್ಕಾರದ ಸವಲತ್ತು ಒದಗಿಸಲು ಬದ್ಧ: ಸೋಮಶೇಖರ್ ರೆಡ್ಡಿ

ಬಳ್ಳಾರಿ 06: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಂತೆಯೇ ಪತ್ರಿಕಾ ರಂಗವೂ ಪ್ರಮುಖವಾಗಿದೆ. ಪತ್ರಿಕಾ ರಂಗದಲ್ಲಿ ದುಡಿಯುವ ಪ್ರತಿಯೊಬ್ಬ ಪತ್ರಕರ್ತರಿಗೂ ಸರ್ಕಾರದ ಸವಲತ್ತು ಸಿಗಬೇಕು. ಈ ದಿಸೆಯಲ್ಲಿ ಬಳ್ಳಾರಿಯ ಪತ್ರಕರ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸುವÀ ಚಿಂತನೆ ಇದೆ ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಭರವಸೆ ನೀಡಿದರು.

ಪತ್ರಿಕಾ ಭವನದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರಿಗೆ ಹಮ್ಮಿಕೊಂಡಿದ್ದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮಹಾನಗರ ಪಾಲಿಕೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಒಳಚರಂಡಿ ಮಂಡಳಿ ಸಹಯೋಗದಲ್ಲಿ ಪತ್ರಕರ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ. ಎಲ್ಲರ ಸಹಕಾರ ಇರಬೇಕಷ್ಟೇ ಎಂದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಕರ್ನಾಟಕದಲ್ಲಿ 1500 ಪತ್ರಕರ್ತರಿಗೆ ಮಾನ್ಯತೆ ಕಾರ್ಡುಗಳನ್ನು ನೀಡಲಾಗಿದೆ. ಕೇವಲ ಮಾನ್ಯತೆ ಇರುವವರು ಮಾತ್ರ ಪತ್ರಕರ್ತರಲ್ಲ. ರಾಜ್ಯದಲ್ಲಿ 15 ಸಾವಿರ ಪತ್ರಕರ್ತರು ಸಮಾಜ ಮತ್ತು ಸರ್ಕಾರದ ಕಣ್ಣೆವೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಕೂಡ ಮಾನ್ಯತಾ ಪತ್ರಗಳನ್ನು ನೀಡಬೇಕು. ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ರೂಪಿಸುತ್ತದೆ. ಅದರಲ್ಲಿ ಅದೆಷ್ಟೋ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹಣ ಪೋಲಾಗುತ್ತಿದೆ. ರಾಜ್ಯದ ಎಲ್ಲ ಪತ್ರಕರ್ತರಿಗೆ ಮಾನ್ಯತೆ ಪತ್ರಗಳನ್ನು ನೀಡಿದರೆ ನಷ್ಟವೇನೂ ಇಲ್ಲ. ಉಚಿತ ಬಸ್ ಪಾಸ್, ನಿವೇಶನ, ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಪತ್ರಕರ್ತರ ಒಳಿತಿಗಾಗಿ ಕಾನೂನಾತ್ಮಕವಾಗಿ ಹೋರಾಡುತ್ತೇನೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಮಾತನಾಡಿ, ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಎಲ್ಲ ಪತ್ರಕರ್ತರಿಗೂ ಆರೋಗ್ಯ ಕಾರ್ಡುಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಪತ್ರಕರ್ತರ ಸಂಘಗಳು ಸರ್ಕಾರದ ಗಮನ ಸೆಳೆದರೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಪತ್ರಕರ್ತ ಬಜಾರಪ್ಪ ಮಾತನಾಡಿ, ಪತ್ರಕರ್ತರಿಗೆ ಆರೋಪ, ಪ್ರತ್ಯಾರೋಪ, ನಿಂದನೆಗಳು ಸಹಜ. ಪತ್ರಕರ್ತರಲ್ಲಿ ಯಾವುದೇ ಜಾತಿ, ಮೇಲು-ಕೀಳು ಇಲ್ಲ. ದ್ವೇಷಾಸೂಯೆ ಇಟ್ಟುಕೊಳ್ಳದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ವೃತ್ತಿಪರತೆಯನ್ನು ಕಾಪಾಡಿಕೊಂಡು ಹೋಗುವ  ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಜಗನ್ಮೋಹನ ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೋತ್ಕರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ವೇಣಿ ಲೋಕನಾಥ್ ಅವರೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರು, ವಿವಿಧ ಪತ್ರಿಕಾ ಮಾಧ್ಯಮಗಳ ವರದಿಗಾರರು ಇದ್ದರು. 

ಪತ್ರಕರ್ತ ಸಿದ್ಧರಾಮ ಸಿರಿಗೇರಿ ಕಾರ್ಯಕ್ರಮ ನಿರ್ವಹಿಸಿದರು. ವೆಂಕಟೇಶ್ ದೇಸಾಯಿ ಸ್ವಾಗತಿಸಿದರು. ವೀರೇಶ್ ಕರೂರು ವಂದಿಸಿದರು.  

ನಿವೇಶನ ಖರೀದಿಯಲ್ಲಿ ಪತ್ರಕರ್ತರಿಗೆ ಶೇ 5ಮೀಸಲಾತಿ ಒದಗಿಸಲು ಸಚಿವರಾದ ಬಿ.ಶ್ರೀರಾಮುಲು, ಆನಂದ್ ಸಿಂಗ್, ಸಂಸದ ದೇವೇಂದ್ರಪ್ಪ, ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಒತ್ತಾಸೆ ಮೇರೆಗೆ ದಮ್ಮೂರು ಶೇಖರ್ ಸರ್ಕಾರದ ಗಮನ ಸೆಳೆದಿದ್ದರು. ಪತ್ರಕರ್ತರ ಕುರಿತ ಅವರ ಕಾಳಜಿಗಾಗಿ ಪತ್ರಕರ್ತರು ಈ ಕಾರ್ಯಕ್ರಮ ಆಯೋಜಿಸಿದ್ದರು. ಇದೇ ವೇಳೆ ಪತ್ರಕರ್ತರ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಸುದ್ದಿ ಓದಿ