ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ; ಭಜನಾ ಸಂಘದವರು ಹೋರಾಟಕ್ಕೆ ಬೆಂಬಲ
ವಿಜಯಪುರ 28: 102 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಅನಿರ್ಧಿಷ್ಟ ಧರಣಿಯು 13 ನೇ ದಿನಕ್ಕೆ ಅಹೋರಾತ್ರಿ ಧರಣಿಗೆ ಕಾಲಿಟ್ಟಿದೆ. ಈ ಒಂದು ಹೋರಾಟ ಸ್ಥಳಕ್ಕೆ ತೊರವಿಯ ಧರಿ ದೇವರ ಭಜನಾ ಸಂಘದವರು ಆಗಮಿಸಿ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದರು. ವಿವಿಧ ಭಜನಾ ಹಾಡುಗಳನ್ನು ಹಾಡುತ್ತಾ ಧರಣಿಗೆ ಮೆರಗು ತಂದರು. ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಲ್ಲಿ ಸರಕಾರ ಮಾಡುತ್ತಿರುವ ಅನ್ಯಾಯವನ್ನು ಖಂಡಿಸುವ ಮೂಲಕ ಸರಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಭಾರಿಸಿದರು. ವಿಜಯಪುರಕ್ಕೆ ಮೊದಲಿನಿಂದಲೂ ಸರಕಾರ ದ್ರೋಹ ಬಗೆಯುತ್ತಲೆ ಬಂದಿದೆ.
ಇಲ್ಲಿರುವ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸರಕಾರಕ್ಕೆ ತೆರಿಗೆಯನ್ನು ಕಟ್ಟುತ್ತಾ ಬಂದಿದ್ದಾರೆ. ನಮ್ಮ ಹಣದಿಂದ ನಮ್ಮಜಿಲ್ಲೆಗೆ ವೈದ್ಯಕೀಯ ಕಾಲೇಜು ನಿರ್ಮಿಸಲಿ. ನಾವು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನಮ್ಮ ಕಾಲೇಜು ಮಾರಾಟ ಮಾಡಲು ಬಿಡುವುದಿಲ್ಲ. ಬಡಮಕ್ಕಳು ವೈದ್ಯಕೀಯ ಶಿಕ್ಷಣನ್ನು ಕಡಿಮೆ ಖರ್ಚಿನಲ್ಲಿ ಕಲಿಯಲು ಸಹಾಯವಾಗುತ್ತದೆ ಎಂದು ಹೇಳಿದರು. ಹಿನ್ನಲೆ ಗಾಯಕರು ಪರುಶುರಾಮ ಇಂಡಿ, ಲಾಲಸಾಭ ಅಕ್ತರ್, ರೇಣುಕಾತೊರವಿ, ಸಿದ್ದು ದಂಡವಾರ, ತಾಳವಾದಕರು ಭೀಮಶಿ ತಟ್ಟೆದ ಭಜನೆ ಹಾಡುಗಳನ್ನು ಹಾಡಿದರು. ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.