ಗೋಪಾಲ ವಾಜಪೇಯಿ ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಗೆ ಅಪಾರ ಕೊಡುಗೆ
ಲಕ್ಷ್ಮೇಶ್ವರ, ಅ. 8: ಶಂಕರ ಭಾರತಿ ಮಠದಲ್ಲಿ ಹಮ್ಮಿಕೊಂಡಿದ್ದ ‘ಮಾಸದ ಮಾತು’ ಕಾರ್ಯಕ್ರಮ ಸರಣಿಯ 43ನೇ ಕಾರ್ಯಕ್ರಮವಾಗಿ ‘ಗೋಪಾಲ ವಾಜಪೇಯಿ ಹಿ ಒಂದು ನೆನಪು’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೇಶ್ವರ ಬಜಾರ್ ವರ್ತಕರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ್, “ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾದ ಕನ್ನಡ ಚಲನಚಿತ್ರಗಳಾದ ನಾಗಮಂಡಲ, ಸಂತ ಶಿಶುನಾಳ ಶರೀಫ, ಸಿಂಗಾರವ್ವ, ಭೂಮಿ ಗೀತ, ತಾಯಿ ಸಾಹೇಬ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಗೀತರಚನೆ ಮೂಲಕ ಶ್ರೇಷ್ಠ ಕೊಡುಗೆ ನೀಡಿದವರು ಗೋಪಾಲ ವಾಜಪೇಯಿ. ಅವರು ನಮ್ಮ ಲಕ್ಷ್ಮೇಶ್ವರದವರು ಎಂಬುದೇ ಹೆಮ್ಮೆಯ ಸಂಗತಿ,” ಎಂದರು.
“ಗೋಪಾಲ ವಾಜಪೇಯಿ ಅವರನ್ನು ಸ್ಮರಿಸಿ, ಅವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯವನ್ನು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ,” ಎಂದು ಅವರು ಹೇಳಿದರು.
ಗೋಪಾಲ ವಾಜಪೇಯಿ ಅವರ ಸಾಧನೆಯ ಹಾದಿಯನ್ನು ಪರಿಚಯಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ ನವಲೆ, “ಶ್ರೇಷ್ಠ ಪತ್ರಕರ್ತ, ಕವಿ, ನಾಟಕಕಾರ, ರಚನಕಾರ, ದೂರದರ್ಶನ ಕಾರ್ಯಕ್ರಮ ಸಂಯೋಜಕ, ಚಿತ್ರಸಂಭಾಷಣೆಕಾರ, ಗೀತರಚನಕಾರ, ಅಂಕಣಕಾರ ಹಾಗೂ ರಂಗಭೂಮಿ ಮತ್ತು ನಾಟಕ ಅಕಾಡೆಮಿ ಸದಸ್ಯರಾಗಿ ಗೋಪಾಲ ವಾಜಪೇಯಿ ಅವರು ಬಹುಮುಖ ಪ್ರತಿಭೆ ಮೆರೆದಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಈ ನೆಲದ ಸೊಗಡಿನ ಭಾಷೆ ಮತ್ತು ಸಂಸ್ಕೃತಿಗೆ ಗೌರವ ತಂದುಕೊಟ್ಟಿದ್ದಾರೆ,” ಎಂದು ಅಭಿಪ್ರಾಯಪಟ್ಟರು.
ಗೌರವ ಉಪಸ್ಥಿತಿ ವಹಿಸಿ ಮಾತನಾಡಿದ ಗೋಪಾಲ ವಾಜಪೇಯಿ ಅವರ ಪುತ್ರ, ಬೆಂಗಳೂರಿನ ಮಾಧ್ಯಮಕರ್ಮಿ ವಿಶ್ವಾಸ ವಾಜಪೇಯಿ ಹಾಗೂ ಅವರ ಸಹೋದರ, ಧಾರವಾಡದ ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಗೀರೀಶ ವಾಜಪೇಯಿ, ತಮ್ಮ ತಂದೆಯ ಜೀವನ ಹೋರಾಟ ಹಾಗೂ ಸಾಧನೆಗಳನ್ನು ಸ್ಮರಿಸಿದರು.