ನಿವೃತ್ತಿ ಭದ್ರತೆಗೆ ಇಂದಿನಿಂದಲೇ ಪಿಂಚಣಿ ಹೂಡಿಕೆ ಮಾಡಿ: ಸಿದ್ದಯ್ಯ
ಎನ್‌ಪಿಎಸ್ ಸಂಚಯ ಯಾತ್ರೆಗೆ ವಿಜಯಪುರದಲ್ಲಿ ಉತ್ತಮ ಸ್ಪಂದನೆ
ವಿಜಯಪುರ 08: ನಿವೃತ್ತಿ ಜೀವನದ ಆರ್ಥಿಕ ಭದ್ರತೆಗಾಗಿ ಇಂದಿನಿಂದಲೇ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸುವಂತೆ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ ಬಿ. ಸಾರ್ವಜನಿಕರಿಗೆ ಸಲಹೆ ನೀಡಿದರು.
ವಿಜಯಪುರ ನಗರದಲ್ಲಿ ಅ.7ರಂದು ನಡೆದ ‘ಎನ್‌ಪಿಎಸ್ ಸಂಚಯ ಯಾತ್ರೆ’ ಸಂದರ್ಭದಲ್ಲಿ ಮಾತನಾಡಿದ ಅವರು,ನಿಯಮಿತ ಹೂಡಿಕೆಯ ಮೂಲಕ ಭವಿಷ್ಯದ ನಿವೃತ್ತಿ ಅಗತ್ಯಗಳಿಗೆ ಆರ್ಥಿಕ ನಿಧಿಯನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಕಲ್ಪಿಸುವ ಪ್ರಮುಖ ವ್ಯವಸ್ಥೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಆದಾಯ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಿಂಚಣಿ ಯೋಜನೆಗೆ ಆದ್ಯತೆ ನೀಡಬೇಕು ಎಂದರು.
ವಿಜಯಪುರದಲ್ಲಿ ನಡೆದ ಎನ್‌ಪಿಎಸ್ ಸಂಚಯ ಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಾಗರಿಕರು ಆಸಕ್ತಿಯಿಂದ ಎನ್‌ಪಿಎಸ್ ಕುರಿತು ಮಾಹಿತಿ ಪಡೆದುಕೊಂಡಿರುವುದು ಶ್ಲಾಘನೀಯವಾಗಿದೆ. ಯಾತ್ರೆಯ ಯಶಸ್ಸಿಗೆ ಸಹಕರಿಸಿದ ಜಿಲ್ಲಾಡಳಿತ, ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.