ಉಮಾದೇವಿ ಶಿವರಾಜ್ಗೆ ಮೇಯರ್ ಸ್ಥಾನ ನೀಡಿ: ಡಾ. ಟಿ. ದುರಗಪ್ಪ
ಬಳ್ಳಾರಿ: ಮಾ28: ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮಾ.29ರಂದು ನಡೆಯಲಿದ್ದು, ಎಡಗೈ ಸಮುದಾಯದ 7ನೇ ವಾರ್ಡ್ ಸದಸ್ಯೆ ಉಮಾದೇವಿ ಶಿವರಾಜ್ ಅವರಿಗೆ ಮೇಯರ್ ಸ್ಥಾನವನ್ನು ನೀಡಬೇಕು ಎಂದು ಕರ್ನಾಟಕ ಶಕ್ತಿ ಮಾದಾರ ಚನ್ನಯ್ಯ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಹನುಮೇಶ್ ಜೋಳದರಾಶಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಇತಿಹಾಸದಲ್ಲೇ ಪಾಲಿಕೆ ಮೇಯರ್ ಸ್ಥಾನವನ್ನು ಎಡಗೈ ಸಮುದಾಯದವರಿಗೆ ನೀಡಿಲ್ಲ, ಈ ಬಾರಿ ಪಕ್ಷದ ವರೀಷ್ಠರು ಪಾಲಿಕೆ ಸದಸ್ಯೆ ಉಮಾದೇವಿ ಶಿವರಾಜ್ ಅವರಿಗೆ ಮೇಯರ್ ಸ್ಥಾನ ನೀಡಬೇಕು, ನಿರ್ಲಕ್ಷ್ಯ ವಹಿಸಿದರೇ ಮುಂಬರುವ ಚುನಾವಣೆಯಲ್ಲಿ ವಿಜಯನಗರ ಹಾಗೂ ಬಳ್ಳಾರಿ ಅಖಂಡ ಜಿಲ್ಲೆಯ ನಮ್ಮ ಸಮುದಾಯದ ಮತದಾರರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ.
ಬಳ್ಳಾರಿ ನಗರ ಸೇರಿದಂತೆ ಉಭಯ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಸಮುದಾಯದವರು ನಿರ್ಣಾಯಕರಾಗಿದ್ದಾರೆ. ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಈ ಬಾರಿ ಮೇಯರ್ ಸ್ಥಾನವನ್ನು ಎಡಗೈ ಸಮುದಾಯದವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಚಿದಾನಂದ ಅವರು ಮಾತನಾಡಿ, ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಎಡಗೈ ಸಮುದಾಯದ ಅದರಲ್ಲೂ ಒಬ್ಬ ಮಹಿಳೆಗೆ ನೀಡಬೇಕು, ಉಮಾದೇವಿ ಶಿವರಾಜ್ ಅವರು, ಎರಡನೇ ಬಾರಿ ಭರ್ಜರಿ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನಗಳು ಎಸ್ಟಿಗೆ ಮೀಸಲಾಗಿವೆ, ಬಳ್ಳಾರಿ ನಗರ ಮಾತ್ರ ಸಾಮಾನ್ಯ ಮೀಸಲಾಗಿದೆ. ಇಡೀ ಅಖಂಡ ಜಿಲ್ಲೆಯ 10 ಕ್ಷೇತ್ರಗಳಲ್ಲೂ ಎಡಗೈ ಸಮುದಾಯದವರೇ ನಿರ್ಣಾಯಕರಾಗಿದ್ದರೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಮಾ.29 ರಂದು ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಎಡಗೈ ಸಮುದಾಯದ ಉಮಾದೇವಿ ಶಿವರಾಜ್ ಅವರಿಗೆ ಮೇಯರ್ ಸ್ಥಾನವನ್ನು ನೀಡಬೇಕು, ನಿರ್ಲಕ್ಷ್ಯ ವಹಿಸಿದರೇ ಸಮುದಾಯದವರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಂಘದ ಕಾನೂನು ಸಲಹೆಗಾರ ಡಾ.ಡಿ.ದುರಗಪ್ಪ ಅವರು ಮಾತನಾಡಿ, ಅಖಂಡ ಜಿಲ್ಲೆಯಲ್ಲಿ ಎಡಗೈ ಸಮುದಾಯದವರೇ ಎಲ್ಲ ಕ್ಷೇತ್ರಗಳಲ್ಲೂ ನಿರ್ಣಾಯಕ ರಾಗಿದ್ದಾರೆ, ಹೀಗಿದ್ದರೂ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ, ಮೇಯರ್ ಸ್ಥಾನ ಎಸ್ಸಿಗೆ ಮೀಸಲಾದ ಹಿನ್ನೆಲೆ ಕಾಂಗ್ರೆಸ್ ವರೀಷ್ಠರು 7ನೇ ವಾರ್ಡ್ ಸದಸ್ಯೆ ಉಮಾದೇವಿ ಶಿವರಾಜ್ ಅವರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಎಂ.ನಾರಾಯಣಗೌಡ, ಎಚ್.ಗುರುರಾಜ್, ಎ.ರಾಮಕೃಷ್ಣಯ್ಯ, ಡಿ.ಸಿದ್ದೇಶ್, ಚಿದಾನಂದಪ್ಪ, ಪೃಥ್ವಿರಾಜ, ಎ.ಕೆ.ಮಾರೆಪ್ಪ ಸದಸ್ಯರು ಇತರರು ಉಪಸ್ಥಿತರಿದ್ದರು.