ಮುಂಡರಗಿ

ಮಗುವಿಗೆ ಆಸಕ್ತಿಯಿರುವಂತ ವಿಷಯಕ್ಕೆ ಹೆಚ್ಚು ಆಧ್ಯತೆ ನೀಡಿ: ಡಿಡಿಪಿಐ

ಮಗುವಿಗೆ ಆಸಕ್ತಿಯಿರುವಂತ ವಿಷಯಕ್ಕೆ ಹೆಚ್ಚು ಆಧ್ಯತೆ ನೀಡಿ: ಡಿಡಿಪಿಐ

ಮುಂಡರಗಿ 10: ಇಂದಿನ ಪಾಲಕರು ತಮ್ಮ ಮಕ್ಕಳನ್ನು ಹಣಗಳಿಕೆಗಾಗಿ ಮಾತ್ರ ಶಾಲೆ ಕಲಿಸುವುದಕ್ಕಿಂತ ಆ ಮಗುವಿಗೆ ಆಸಕ್ತಿಯಿರುವಂತ ವಿಷಯದ ಆಯ್ಕೆಗೆ ಹೆಚ್ಚು ಆಧ್ಯತೆ ನೀಡಬೇಕು. ಮಕ್ಕಳಿಗೆ ಅವರ ಬುದ್ದಿಮಟ್ಟಕ್ಕನುಸಾರವಾಗಿ ಸ್ವತಂತ್ರವನ್ನು ನೀಡುವುದರೊಂದಿಗೆ ಅವರಿಗೆ ಪ್ರೇರಣೆ ನಿಡಬೇಕು. ಅಂದಾಗ  ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ.ರಡ್ಡೇರ ಹೇಳಿದರು. 

ಪಟ್ಟಣದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಸಭಾ ಭವನದಲ್ಲಿ ಮುಂಡರಗಿ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನದಿಂದ ಶಿಕ್ಷಕರ ದಿನಾರಣೆಯ ಅಂಗವಾಗಿ ಆದರ್ಶ ಶಿಕ್ಷಕಿಯಾಗಿದ್ದ ಕಲಾವತಿ ಸೊಲಗಿಯವರ ಸಂಸ್ಮರಣೆಯಲ್ಲಿ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪುಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು. 

ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವಲ್ಲಿ ಯಾವುದೇ ಹಿಂಜರಿಕೆಯಿಂದ ಇರಬಾರದು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿರ್ದೇಶನದಲ್ಲಿ ಹಿಂದೆ ಇದ್ದಾರೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಶಾಲೆಯಿಂದ ವಿದ್ಯಾಭ್ಯಾಸ ಮಾಡುವಂತ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಾಹಿತ್ಯ ಹಾಗೂ ಕಲಿಕೆಯ ಬಗ್ಗೆ ಹೆಚ್ಚು ಪ್ರೋತ್ಸಾಹ ಹಾಗೂ ಪ್ರೇರಣೆಯನ್ನು ನೀಡುವಂತ ಕೆಲಸವಾಗಬೇಕಾಗಿದೆ. 

ಕಲಾವತಿ ಸೊಲಗಿ ತಮ್ಮ ಶಿಕ್ಷಕಿ ವೃತ್ತಿಯಲ್ಲಿ ಮಕ್ಕಳೊಂದಿಗೆ ಅಪಾರವಾದ ಪ್ರೀತಿ ಹಾಗೂ ಕಾಳಜಿ ಭಾವನೆಯಿಂದ ಕಾಣುತ್ತಿದ್ದರು. ಅಲ್ಲದೇ ಎಲ್ಲಾ ಶಿಕ್ಷಕರ ವೃಂದದೊಂದಿಗೆ ಗೌರವದಿಂದ ತಮ್ಮ ಜವಾಬ್ದಾರಿಯುತ ಕೆಲಸ ಕಾರ್ಯವನ್ನು ಶ್ರದ್ಧೆ ನಿಷ್ಠೆಯಿಂದ ನಿಭಾಯಿಸುತ್ತಿದ್ದ ಪರಿಣಾಮವಾಗಿ ಅವರಿಗೆ ಆದರ್ಶ ಶಿಕ್ಷಕಿ ಎಂಬ ಪ್ರಶಸ್ತಿ ಲಭಿಸಿತ್ತು. ಆದರೆ ವಿದಿವಶಾತ್ ಅವರ ಅಗಲಿಕೆಯಿಂದ ಈಡಿ ಶಿಕ್ಷಣ ಕ್ಷೇತ್ರಕ್ಕೆ ಒಬ್ಬ ಆದರ್ಶ ಶಿಕ್ಷಕಿಯರನ್ನು ಕಳೆದುಕೊಂಡ ಅಪಾರವಾದ ನೋವು ಕಾಡುತ್ತಿದೆ. ಇಂತಹ ಅಧ್ಬುತ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಅವರ ನೆನಪು ಮಾಡಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು. 

ಈ ವೇಳೆ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪುಸ್ಕೃತರಾದ ಎಫ್‌.ಸಿ.ಚೇಗರಡ್ಡಿ ಮಾತನಾಡಿ, ಇಂದಿನ ಪ್ರತಿಯೊಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧಿಸಲು ಶಿಕ್ಷಕರ ಪಾತ್ರ ಬಹುಮುಖ್ಯವಾದುದು. ಈ ನಿಟ್ಟಿನಲ್ಲಿ ಆ ಶಾಲೆಯಲ್ಲಿ ಒಬ್ಬ ಉತ್ತಮ ಶಿಕ್ಷಕ ಆಯಾ ವಿಷಯದ ಬಗ್ಗೆ ಹಾಕಿಕೊಟ್ಟ ಒಂದು ಉತ್ತಮವಾದ ವ್ಯವಸ್ಥೆಯನ್ನು ಅವರು ಇಲ್ಲದ ಸಂದರ್ಭದಲ್ಲಿ ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋದಾಗ ಮಾತ್ರ ಶೈಕ್ಷಣಿಕ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಆದರೆ ಹೆಚ್ಚು ಶಾಲೆಯಲ್ಲಿ ಅಂತಹ ವ್ಯವಸ್ಥೆಯನ್ನು ಆ ಶಿಕ್ಷಕನು ಇದ್ದಾಗ ಮಾತ್ರ ವ್ಯವಸ್ಥೆ ಇರುತ್ತದೆ. ಅವರು ವರ್ಗಾವಣೆಯಾದ ಮೇಲೆ ಅದು ಅಳಿದುಹೋಗುತ್ತಿರುವ ಅನೇಕ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಆದ್ದರಿಂದ ಎಲ್ಲಾ ಶಿಕ್ಷಕರು ನಾವೇಲ್ಲರೂ ಜಾಗೃತೆಯಿಂದ ಮಕ್ಕಳಿಗೆ ಕನ್ನಡ ಸಾಹಿತ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸೋಣ ಎಂದು ಸಲಹೆ ನೀಡಿದರು. 

ಈ ವೇಳೆ ವೈ.ಎನ್‌.ಗೌಡರ್, ವಿವೇಕಾನಂದಗೌಡ ಪಾಟೀಲ, ಮಲ್ಲಿಕಾ ನಾಯಕ ಡಾ.ನಿಂಗು ಸೊಲಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಡಯಟ್ ಕನ್ನಡ ಉಪನ್ಯಾಸಕ ಶಂಕರ ಹಡಗಲಿ ಶಾಲಾ ಶಿಕ್ಷಣ ಹಾಗೂ ಮಕ್ಕಳ ಕಲಿಕೆಯ ಬಗ್ಗೆ ಉಪನ್ಯಾಸ ನೀಡಿದರು. ಹಾಗೂ ವಿಶ್ವಾಸ ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣ ಆಯ್‌.ಕೆ.ಕುಷ್ಟಗಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿ ಶೋಭಾ ಮೇಟಿ, ಕರಬಸಪ್ಪ ಹಂಚಿನಾಳ, ಲಿಂಗರಾಜಗೌಡ ಪಾಟೀಲ, ಕೊಟ್ರೇಶ ಅಂಗಡಿ, ಮಂಜುನಾಥ ಇಟಗಿ, ಗಂಗಾಧರ ಅಣ್ಣಿಗೇರಿ, ಮಲ್ಲಿಕಾರ್ಜುನ ಸೊಲಗಿ, ಶಿವಕುಮಾರ ಕುಷ್ಟಗಿ, ಶರಣು ಸೊಲಗಿ, ಚೇತನ ಸೊಲಗಿ ಹಾಗೂ ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ