ಘಮ ಘಮ ಮಸಾಲೆ ದೋಸೆ
ಒಂದೇ ವಸ್ತುವಿನ ಬಗ್ಗೆ ವಿವಿಧ ಲೇಖಕರು ಬರೆದು ಸಂಗ್ರಹಿಸಿದ ಪುಸ್ತಕಗಳನ್ನು ನಾವು ನೋಡೇ ಇರುತ್ತೇವೆ. ಅದರಂತೆ ಕೇವಲ ಮಸಾಲೆ ದೋಸೆಯ ಮೇಲೆ ವಿವಿಧ ಲೇಖಕರಿಂದ ಲೇಖನಗಳನ್ನು ಬರೆಯಿಸಿಕೊಂಡು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ನೋಡಿ ವಿಶೇಷವೆನಿಸಿತು.
ಮೊದಲಿನಿಂದಲೂ ಖಾದ್ಯ ಪದಾರ್ಥಗಳ ರಾಜ ಎಂದು ಅಗ್ರಸ್ಥಾನ ಪಡೆದ ತಿಂಡಿ ದೋಸೆಯಾಗಿದೆ. ಇದನ್ನು ಅನೇಕ ಹೆಸರುಗಳಿಂದಲೂ ಕರೆಯುವರು ಹಾಗೂ ಮಾಡುವ ವಿಧಾನದಲ್ಲಿಯೂ ವಿವಿಧತೆ ಇದೆ.ನೀರ್ ದೋಸೆ, ಸೆಟ್ ದೋಸೆ, ಪ್ಲೇನ್ ದೋಸೆ, ಈರುಳ್ಳಿ ದೋಸೆ, ಮೆಂತ್ಯದ ದೋಸೆ, ಪೇಪರ್ ದೋಸೆ, ರವೆ ದೋಸೆ, ಬಟರ್ ದೋಸೆ, ಮೈಸೂರು ದೋಸೆ, ಮಸಾಲಾ ದೋಸೆ ಹೀಗೆ ವಿವಿಧ ಹೆಸರುಗಳಿಂದ ಕರೆಯುವರು.
ವೈ.ಎನ್.ಗುಂಡೂರಾವ್ ರವರು ಘಮ ಘಮ ಮಸಾಲೆ ದೋಸೆ ಎಂಬ ಕೃತಿಯನ್ನು ಸಂಪಾದಿಸಿದ್ದು ಈ ಕೃತಿಯಲ್ಲಿ ಕೇವಲ ಮಸಾಲೆ ದೋಸೆಯ ಕುರಿತಾದ ವಿವಿಧ ಲೇಖಕರಿಂದ ಬರೆಯಿಸಿದಂತ ಲೇಖನಗಳಿವೆ.ಶಿರೋನಾಮೆಗೆ ಸೂಕ್ತವಾದ ಮುಖಪುಟ ಚಿತ್ರ ಅರುಣ್ ಅಡಿಗ ವಿದ್ಯಾರ್ಥಿ ಭವನ, ವಿನ್ಯಾಸವನ್ನು ಶ್ವೇತಾ ಬಿ. ಎಸ್. ರವರು ಮಾಡಿದ್ದು ಕೃತಿಯನ್ನು ಅಂಕಿತ ಪುಸ್ತಕದವರು ಪ್ರಕಾಶಿಸಿದ್ದಾರೆ. ಬೆನ್ನು ಚಪ್ಪರಿಸಿ ಬೆನ್ನುಡಿ ಬರೆದ ಕೆ.ಎನ್. ಭಗವಾನ್ ರವರು ಮಸಾಲೆ ದೋಸೆಗೆ ನಾನಾ ಅವತಾರಗಳಿರಬಹುದು ಆದರೂ ಎಲ್ಲಕ್ಕೂ ಧಿಮಾಕಿನ ರಾಜನಂತೆ ಅಂದಿಗೂ ಇಂದಿಗೂ ಎಂದೆಂದಿಗೂ ದೋಸೆಗಳ ರಾಜ ಮಸಾಲೆ ದೋಸೆಯೇ ಎಂದು ಹೇಳಿದ್ದಾರೆ.
ಕೃತಿಯಲ್ಲಿ ಇಪ್ಪತ್ತೈದು ಲೇಖನಗಳಿದ್ದು, ಇಪ್ಪತ್ತೈದು ಲೇಖಕರು ಕೇವಲ ದೋಸೆಯ ಕುರಿತಾಗಿಯೇ ಬರೆದ ಲೇಖನಗಳಾಗಿವೆ. ವಿ.ಸೀತಾರಾಮಯ್ಯರವರು ‘ದೋಸೆ’ ಎಂಬ ಶೀರ್ಷಿಕೆಯಡಿಯಲ್ಲಿ ಹೋಟೆಲುಗಳಿಗಿರುವ ಹಲವಾರು ಹೆಸರುಗಳಾದ ರೆಸ್ಟೋರೆಂಟ್, ಆ ಭವನ, ಈ ಭವನ, ಕ್ಯಾಂಟೀನ್, ಕೆಫೆ, ಲಂಚ್ ಹೋಂ, ಕೆಬಿನ್, ನಾನಾ ವಿಲಾಸಗಳು, ಮಂದಿರಗಳು ಹೀಗೆ ಪ್ರಾರಂಭಿಸಿ ದೋಸೆ ಪ್ರೀಯರ ಇಷ್ಟಗಳು, ಬಯಸುವ ವಿಧಗಳು, ಹೋಟೆಲು ಮಾಲಿಕರಿಗೆ ಹಾಗೂ ಜನರಿಗೆ ಇರುವ ಆತ್ಮೀಯತೆಯ ಕುರಿತು ವಿವರವಾಗಿ ಪ್ರಸ್ತಾಪಿಸಿದ್ದಾರೆ. ಹೋಟೆಲಿನಲ್ಲಿ ಇಡ್ಲಿ, ಉಪ್ಪಿಟ್ಟು, ಪೂರಿ, ಪಲಾವ ಹೀಗೆ ವಿಧವಿಧವಾದ ತಿಂಡಿ ತಿನಿಸುಗಳಿದ್ದರೂ ದೋಸೆ ಇಷ್ಟಪಡುವವರ ಸಂಖ್ಯೆ ಅಧಿಕವಾಗಿದೆ.ದೋಸೆ ಒಂದೇ ಪದಾರ್ಥವಾದರೂ ಅದರಲ್ಲಿ ರೂಪಾಂತರ ಮಾಡಿ ಕೆಲ ಮಸಾಲೆ ಹಾಕಿ ಅದನ್ನು ವಿವಿಧ ಹೆಸರುಗಳಿಂದ ತಯಾರಿಸಿ ನೀಡುವರು. ಜನ ಬಾಯಿ ಚಪ್ಪರಿಸುತ್ತ ತಿನ್ನುವರೆಂದು ನಗೆ ಹೊನಲು ಹರಿಸಿದ್ದಾರೆ. ದೋಸೆ ತಯಾರಿಸುವ ವಸ್ತುವಿನ ಪ್ರಮಾಣ, ಮಾಡುವ ವಿಧ ಒಂದೇ ಇದ್ದರೂ ರುಚಿಯಲ್ಲಿ ಬೇರೆ ಬೇರೆ ಇರುತ್ತದೆ. ಇದಕ್ಕೆ ಕಾರಣ ಯಾರು ಎಂದು ಪ್ರಶಸ್ತಿದ್ದಾರೆ.
‘ದೋಸೆ ಮೇಲಣ ಪ್ರೀ ಪ್ರೀತಿ ಎಂಬ ಶೀರ್ಷಿಕೆಯ ಬರಹದಲ್ಲಿ ಎನ್. ಕೆ. ಕುಲಕರ್ಣಿರವರು ವಿ.ಸೀ. ಯವರ ವ್ಯಕ್ತಿತ್ವ, ಆತ್ಮೀಯತೆ, ಆತಿಥ್ಯ, ಸತ್ಕಾರಗಳ ಕುರಿತು ವಿವರಿಸಿದ್ದಾರೆ. ಕಚೇರಿ, ಕಾಲೇಜುಗಳಲ್ಲಿ ಸಹೋದ್ಯೋಗಿಗಳಿಗೆ ಸ್ನೇಹ ಸಂತೋಷಕೂಟ ಏರಿ್ಡಸಿದಾಗ ಊಟ ಬೇಡವೆಂದರೆ ದೋಸೆ ಆಯ್ಕೆ ಉತ್ತಮವಾಗಿತ್ತು. ಮಸಾಲೆ ದೋಸೆ ಕಾಫಿ ಒಳ್ಳೆಯ ಹೊಂದಾಣಿಕೆ ಅದನ್ನೇ ಆಯ್ಕೆ ಮಾಡಿ ತರಿಸಿಕೊಂಡು ಬಾಯಿಗೆಸೆದುಕೊಂಡು ಸುಖಾನಂದ ಅನುಭವಿಸಿದರ ಕುರಿತು ಚಿಕ್ಕ ಲೇಖನದ ಮೂಲಕ ವ್ಯಕ್ತಪಡಿಸಿದ್ದಾರೆ.
ಪು.ತಿ. ನರಸಿಂಹಾಚಾರ್ ರವರು ಮಸಾಲೆ ದೋಸೆಯ ಕುರಿತು ರೈತರ ಹಾಗೂ ಪಟ್ಟಣದ ಜನರ ದೋಸೆಯ ಪ್ರೀತಿಯನ್ನು ಹೋಲಿಸಿ ಬರೆದಿದ್ದಾರೆ. ದೋಸೆಯಲ್ಲಿ ರೈತರು ಬೆಳೆದರೋ, ಯಾವ ದ್ರವ್ಯವಿದೆಯೋ ಅಥವಾ ಜನರದ ಭಟ್ಟನು ತಯಾರಿಸಿದ ದ್ರವ್ಯವಿದೆಯೋ ಎಂದು ಕಿರು ನಗೆ ಬೀರುವ ರೀತಿಯಲ್ಲಿ ಬರೆಯುತ್ತಾ ಹೀಗೆ ಅನೇಕ ದೃಷ್ಟಿಗಳಿಂದ ಆರೋಗ್ಯವಾದರೂ ಬೋಗ್ಯವಾದ ಈ ವಸ್ತು ನಮ್ಮ ನಾಗರಿಕ ಸಂಸ್ಕೃತಿಯ ವಿಶಿಷ್ಠವಾದ ರುಚಿಯನ್ನು ಲೋಕಕ್ಕೆ ಎತ್ತಿ ತೋರಿಸಿ ಕೊಡುವಂತೆ, ಒಂದು ರೀತಿಯಲ್ಲಿ ನಮ್ಮ ಭಾರತದ ಸಂಸ್ಕೃತಿಕ ಮೂಲವನ್ನೇ ಅಲ್ಲಾಡಿಸುತ್ತಿದೆಯೋ ಏನೋ ಎಂದು ಪ್ರಶ್ನಿಸುತ್ತಾ ತಮ್ಮ ವಿವರಣೆ ನೀಡಿದ್ದಾರೆ.
ಅಪ್ಪಣ್ಣ ಭವನದ ಮಸಾಲೆ ದೋಸೆ ಲೇಖನದಲ್ಲಿ ಎಂ. ಎಸ್. ನರಸಿಂಹಮೂರ್ತಿರವರು ದೋಸೆಯ ವಿಷಯವೇ ಪ್ರಧಾನವಾದರೂ ಪ್ರಸ್ತುತ ಸಮಾಜದಲ್ಲಿ ನಡೆಯುವ ಪಾಪ ಪುಣ್ಯಗಳನ್ನು ನಾವು ಸ್ವರ್ಗದಲ್ಲಿ ಹೋದರೂ ಅಲ್ಲಿಯೂ ಅವುಗಳ ಲೆಕ್ಕವನ್ನು ಒಪ್ಪಿಸಲೇ ಬೇಕು. ನಾವು ಮಾಡಿದ ಒಳ್ಳೆಯ ಕರ್ಮಗಳಿಗೆ ಒಳ್ಳೆಯದೇ ಆಗುವುದೆಂದು ಹೇಳಿದ್ದಾರೆ. ಆಹಾರ ತಯಾರಿಸುವಾಗ ಹೋಟೆಲುಗಳ ನೈಜ ಸ್ಥಿತಿ, ಕಲಬೆರಕೆ, ಆಹಾರದ ಕುರಿತು, ಅವ್ಯವಹಾರಗಳ ಕುರಿತು ಸಂಭಾಷಣೆಯ ರೂಪದಲ್ಲಿ ಬರೆದು, ಇಂತಹ ಕೆಲಸ ಮಾಡುವವರಿಗೆ ಛಾಟಿ ಏಟನ್ನು ನೀಡಿದ್ದಾರೆ.
ಡಾ. ಸಿ. ಸೀತಾರಾಮ್ರವರು ಬರೆದ ಮೋಟಾರ್ ದೋಸೆ ಲೇಖನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದಲ್ಲಿ ಆಳುತ್ತಿದ್ದ ಸಂದರ್ಭ ಪಾಕಶಾಸ್ತ್ರ ಪಂಡಿತರ ಕುರಿತಾಗಿ ತಿಳಿಸಿದ್ದಾರೆ. ರಾಮಕೃಷ್ಣರು ಒಂದು ದಿನ ದೋಸೆ ಮಾಡಿ ಮಹಾರಾಜರಿಗೆ ಬಡಿಸಿದಾಗ ಇಂಥ ದೋಸೆ ಹಿಂದೆ ಮಾಡುವವರೇ ಇರಲಿಲ್ಲ ಎಂದು ಏಕೆ ಎಂದು ಪ್ರಶ್ನಿಸಿದ್ದರು. ದೋಸೆಯ ಹೆಸರನ್ನು ಕೇಳಿದಾಗ ಆ ದೋಸೆಯ ಹಿಟ್ಟು ಕಾವಲಿನ ಮೇಲೆ ಓಡಾಡುತ್ತಿರುವುದನ್ನು ಕಂಡು ‘ಮೋಟಾರ್ ದೋಸೆ’ ಎಂದು ಹೇಳಿದರು. ಅದರಿಂದ ಮೋಟಾರ ದೋಸೆ ಶಾಸ್ತ್ರಿ ಎಂದೇ ಕರೆಯಲು ಪ್ರಾರಂಭಿಸಿದರು.
ಹೀಗೆ ಕೆ.ಎಸ್. ನರಸಿಂಹಸ್ವಾಮಿ ಒಳ್ಳೆಯ ಪದ್ಯ, ಬೆಣ್ಣೆ ದೋಸೆ, ಅಪ್ಪಾವಕ್ರ ಮಸಾಲೆ ಶಾಸ್ತ್ರ, ಪ್ರೋ. ಜಿ. ಎಚ್. ಹನ್ನೆರಡು ಮಠ ದ್ವಾಸಿ ಊಟಲ್ಲಾ ದಾಸರ ಆಟಲ್ಲಾ, ಕೆ.ಎನ್.ಭಗವಾನ್ ಮಸಾಲೆ ದೋಸೆಗೆ ಮಣೆ, ಪ್ರೋ. ಕೆ.ಎಸ್. ನಿಸಾರ ಅಹಮ್ಮದ್ ಕೂಡದು ನೀವು ಕೊಡಬಾರದು ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ದೋಸೆಯನ್ನು ಕುರಿತು ಹೀಗೆ ಅನೇಕರು ಕೇವಲ ದೋಸೆಯ ಕುರಿತಾಗಿ ತಮ್ಮ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಇಂತಹ ಒಂದೇ ವಿಷಯದ ಮೇಲೆ ಅನೇಕ ಅಭಿಪ್ರಾಯಗಳನ್ನೊಳಗೊಂಡ ಲೇಖನಗಳನ್ನು ಸಂಗ್ರಹಿಸಿದ ಪುಸ್ತಕವನ್ನು ವೈ. ಎನ್. ಗುಂಡೂರಾವ್ರವರು ಹೊರತಂದಿದ್ದು ಅಭಿನಂದನಾರ್ಹ ಸಂಗತಿಯಾಗಿದೆ. ಮುಂದೆಯೂ ಕೂಡ ಹೀಗೆ ಒಳ್ಳೆಯ ಪುಸ್ತಕಗಳನ್ನು ಸಾರಸ್ವತ ಲೋಕಕ್ಕೆ ವೈ. ಎನ್. ಗುಂಡೂರಾವ್ರವರು ನೀಡಲೇಂದು ಶುಭ ಕೋರುವೆ.
- ಶ್ರೀಮತಿ ಶಬಾನಾ ಅಣ್ಣಿಗೇರಿ
ಖಾನಾಪುರ
9008687369
- * * * -