ಸಂಭಾವ್ಯ 3ನೇ ಅಲೆಗೆ ಸಕಲ ಸಿದ್ಧತೆ ಕೈಗೊಳ್ಳಿ: ಡಾ. ಅಜಯ್ ನಾಗಭೂಷಣ್
ಬಳ್ಳಾರಿ 13: ಸಂಭಾವ್ಯ 3ನೇ ಬಳ್ಳಾರಿ ಜಿಲ್ಲೆಗೆ ಯಾವುದೇ ಸಮಯದಲ್ಲಾದರೂ ಅಪ್ಪಳಿಸುವ ಸಾಧ್ಯತೆ ಇದ್ದು, ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಾಸಿಗೆಗಳು, ಆಕ್ಸಿಜನ್, ವೆಂಟಿಲೇಟರ್, ಓಷಧಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಅಜಯ್ ನಾಗಭೂಷಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತಿಯ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುವ ಹಾಗೂ ನಿಗದಿತ ಅವಧಿಯಲ್ಲಿ ಟೆಸ್ಟಿಂಗ್ ರಿಸಲ್ಟ್ ಹಾಗೂ ಚಿಕಿತ್ಸೆ ನೀಡುವ ಕಡೆ ವಿಶೇಷ ಗಮನಹರಿಸುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದರು.
ಮಕ್ಕಳ ಚಿಕಿತ್ಸೆಗಾಗಿ 50 ವೆಂಟಿಲೇಟರ್ ಹಾಸಿಗೆಗಳ ಮೀಸಲು: ಸಂಭಾವ್ಯ 3ನೇ ಅಲೆ ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡುತ್ತದೆ ಎಂದು ತಜ್ಞರು ಅಂದಾಜಿಸಿದ ಹಿನ್ನಲೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ 50ವೆಂಟಿಲೇಟರ್ ಗಳ ಹಾಸಿಗೆಯನ್ನು ಮೀಸಲಿಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದರು.
ನಮ್ಮಲ್ಲಿ 154ವೆಂಟಿಲೇಟರ್ ಗಳಿದ್ದು,ಸರಕಾರದಿಂದ ಕೆಲ ವೆಂಟಿಲೇಟರ್ ಗಳು ಬರುತ್ತಿದ್ದು, ಎನ್ಎಂಡಿಸಿ ನೀಡಿದ ದೇಣಿಗೆ ಹಣದಿಂದಲೂ ವೆಂಟಿಲೇಟರ್ ಗಳು ಖರೀದಿಸಲು ಉದ್ದೇಶಿಸಿದ್ದು,ಜಿಲ್ಲೆಯಲ್ಲಿ 154ರಿಂದ 200ಕ್ಕೆ ವೆಂಟಿಲೇಟರ್ ಗಳ ಹಾಸಿಗೆಗಳು ಹೆಚ್ಚಾಗಲಿವೆ ಎಂದರು.
ಜಿಲ್ಲೆಯಲ್ಲಿ 46ಕೆ ಅಕ್ಸಿಜನ್ ಸಂಗ್ರಹ ಸಾಮರ್ಥ್ಯ ನಮ್ಮಲ್ಲಿದೆ. ವಿಮ್ಸ್,ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದ ಡಿಸಿ ಮಾಲಪಾಟಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆ ಇದುವರೆಗೆ ಉದ್ಭವಿಸಿಲ್ಲ ಎಂದರು.
3ನೇ ಅಲೆಗೆ ಸಂಬಂಧಿಸಿದಂತೆ ಮಾಸ್ಕ್, ಗ್ಲೌಸ್, ಅಗತ್ಯ ಓಷಧಿಗಳನ್ನು, ಮಕ್ಕಳ ಹೋಂ ಐಸೋಲೇಶನ್ ಓಷಧಿಗಳು ಮತ್ತು ಪರಿಕರಗಳನ್ನು ಈಗಾಗಲೇ ಸಂಗ್ರಹ ಮಾಡಿಕೊಳ್ಳಲಾಗಿರುವುದನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ ಅವರ ಗಮನಕ್ಕೆ ತಂದರು.
*ತಾಲೂಕು ಆಸ್ಪತ್ರೆಗಳಿಗೆ ತಲಾ 25 ಆಮ್ಲಜನಕ ಸಾಂದ್ರಕಗಳ ವಿತರಣೆ: ಜಿಲ್ಲೆಯಲ್ಲಿರುವ ತಾಲೂಕು ಆಸ್ಪತ್ರೆಗಳಿಗೆ ತಲಾ 25ರಿಂದ 27, ಸಮುದಾಯ ಆರೋಗ್ಯ ಕೇಂದ್ರಗಳಿಗೆ 04, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 2ರಂತೆ ಆಕ್ಸಿಜನ್ ಕಾನ್ಸಂಟ್ರೆಟರ್ ಗಳನ್ನು ವಿತರಿಸಲಾಗಿದೆ ಎಂದು ಡಿಎಚ್ಒ ಡಾ.ಜನಾರ್ಧನ್ ಅವರು ತಿಳಿಸಿದರು. ಯಾವಯದೆ ರೀತಿಯ ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ಕೊರತೆ ಇಲ್ಲ ಎಂದರು.
ಜಿಲ್ಲಾಡಳಿತದ ವತಿಯಿಂದ 3800 ಪಲ್ಸ್ ಆಕ್ಸಿಮಿಟರ್ ಗಳನ್ನು ಆಸ್ಪತ್ರೆಗಳಿಗೆ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ವಿತರಿಸಲಾಗಿದ್ದು,ಇನ್ನೂ ಸಮರ್ಕ ಸಂಗ್ರಹ ನಮ್ಮಲ್ಲಿದೆ ಎಂದು ತಿಳಿಸಿದರು. ಬಳ್ಳಾರಿ ಜಿಪಂ ವತಿಯಿಂದ ನರೇಗಾ ಅನುದಾನದ ಅಡಿ 2300 ಪಲ್ಸ್ ಆಕ್ಸಿಮಿಟರ್ ಗಳನ್ನು ಖರೀದಿಸಿ ವಿತರಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದರು.
ಆಸ್ಪತ್ರೆಗಳಲ್ಲಿ ದಾಖಲಾದ 24 ಗಂಟೆಗಳಲ್ಲಿ 485 ಜನರ ಸಾವು!: ಕೋವಿಡ್ ಬಾಧೀತರಾಗಿ ಆಸ್ಪತ್ರೆಗೆ ದಾಖಲಾದ 24ಗಂಟೆಯೊಳಗೆ ಮೊದಲ ಅಲೆ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ 485ಜನರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಎಚ್ಒ ಡಾ.ಜನಾರ್ಧನ್ ಅವರು ವಿವರಿಸಿದರು.
48ಗಂಟೆಯೊಳಗೆ 200,72ಗಂಟೆಯೊಳಗೆ 187, 72ಗಂಟೆಯ ನಂತರ 765, ಹೋಂ ಐಸೋಲೇಶನ್ನಲ್ಲಿ 48ಜನರು ಸೇರಿದಂತೆ ಒಟ್ಟು 1685ಜನರು ಸಾವನ್ನಪ್ಪಿದ್ದಾರೆ ಎಂದು ಅವರು ವಿವರಿಸಿದರು.
97507 ಜನರು ಇದುವರೆಗೆ ಕೊರೊನಾ ಸೊಂಕಿತರಾಗಿದ್ದರು;ಅದರಲ್ಲಿ 95616 ಜನರು ಗುಣಮುಖರಾಗಿದ್ದರೇ 1685 ಜನರು ಸಾವನ್ನಪ್ಪಿದ್ದಾರೆ,ಸದ್ಯ 206 ಸಕ್ರಿಯ ಪ್ರಕರಣಗಳಿವೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ 292 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು,ಶೇ.50.13ರಷ್ಟು ಕೊರೊನಾ ಲಸಿಕಾ ಪ್ರಗತಿ ಸಾಧಿಸಲಾಗಿದ್ದು,ಉಳಿದ ಗುರಿಯನ್ನು ಶೀಘ್ರ ಸಾಧಿಸಲಾಗುವುದು ಎಂದು ವಿವರಿಸಿದ ಡಿಎಚ್ಒ ಡಾ.ಜನಾರ್ಧನ್ ಅವರು ಸದ್ಯ 4 ಸಾವಿರ ಕೋವಿಶಿಲ್ಡ್, 6 ಸಾವಿರ ಕೋವ್ಯಾಕ್ಸಿನ್ ಸಂಗ್ರಹವಿದೆ;ಇಂದು ರಾತ್ರಿಯ ವೇಳೆಗೆ ಕೋವಿಶಿಲ್ಡ್ 25 ಸಾವಿರ ಮತ್ತು 5 ಸಾವಿರ ಕೋವ್ಯಾಕ್ಸಿನ್ ಬರಲಿದ್ದು ನಮಲ್ಲಿ ಸಂಗ್ರಹವಿರುವ 30 ಸಾವಿರ ಲಸಿಕೆಗಳನ್ನು 3 ದಿನದಲ್ಲಿ ಜನರಿಗೆ ಹಾಕಲಾಗುವುದು ಎಂದರು.
*6188 ಹಾಸಿಗೆಗಳ ಸಾಮರ್ಥ್ಯ;ಸದ್ಯ 37 ರೋಗಿಗಳು ಚಿಕಿತ್ಸೆಯಲ್ಲಿ: ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಆಸ್ಪತ್ರೆಗಳಲ್ಲಿ ಒಟ್ಟು 6188 ಹಾಸಿಗೆಗಳು ನಮ್ಮಲ್ಲಿ ಲಭ್ಯವಿವೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.
ಸೊಂಕು ನಿಯಂತ್ರಣ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೈಕ್ ರಾ್ಯಲಿ, ಸಭೆಗಳು, ಜಾಗೃತಿ ಜಾಥಾ ಸೇರಿದಂತೆ ವಿವಿಧ ರೀತಿಯ ಮತ್ತು ವಿಭಿನ್ನ ಕಾರ್ಯಕ್ರಮಗಳು ಆಯೋಜಿಸಿರುವುದನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಜಿಪಂ ಉಪಕಾರ್ಯದರ್ಶಿ ಜಾನಕಿರಾಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.