ಸಮಾಜವನ್ನು ಅಭಿವೃದ್ಧಿಯತ್ತ ಕರೆದೊಯ್ಯುವ ಶಿಕ್ಷಣ ಪಡೆಯಿರಿ
ಎಸ್ಎಸ್ಎಲ್ಸಿ ಆಯ್ತು, ಮುಂದೇನು? ಎಂಬ ವಿಶೇಷ ಕಾರ್ಯಾಗಾರದಲ್ಲಿ ತಾಪಂ ಇಓ ಯಶವಂತಕುಮಾರ ಕರೆ
ಸವದತ್ತಿ 20: ಮಕ್ಕಳು ಸಮರ್ಕ ಮಾರ್ಗದರ್ಶನ ಮತ್ತು ತಿಳುವಳಿಕೆಯ ಕೊರತೆ ಕಾರಣದಿಂದ ಗೊಂದಲಕ್ಕೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳದಿರುವಂತೆ ಪಾಲಕರು ಎಚ್ಚರವಹಿಸಬೇಕುಎಂದು ತಾಪಂ ಇಓ ಯಶವಂತಕುಮಾರ ಹೇಳಿದರು.
ಇಲ್ಲಿನ ಬಸವಜ್ಯೋತಿ ಶಾಲಾ ಆವರಣದಲ್ಲಿ ಸೋಮವಾರ ಜರುಗಿದ ಎಸ್ಎಸ್ಎಲ್ಸಿ ಆಯ್ತು, ಮುಂದೇನು? ಎಂಬ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಸ್ವತಂತ್ರ್ಯ, ಸ್ವಾವಲಂಭಿ ಜೀವನ ನಡೆಸಲು ಶಿಕ್ಷಣ ಮಹತ್ವದ ಪಾತ್ರ ನಿರ್ವಹಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಪ್ರಮುಖ ಘಟ್ಟವಾಗಿದ್ದು, ಇದರ ನಂತರದಲ್ಲಿ ವಿದ್ಯಾರ್ಥಿಗಳ ಆಯ್ಕೆ ಅವರ ಜೀವನ ರೂಪಿಸುವ ಮಾರ್ಗ ತೋರಿಸುತ್ತದೆ.ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ರಂಗಗಳಲ್ಲಿಯೂ ಸ್ಪರ್ಧೆ ಹೆಚ್ಚಾಗಿದೆ. ನಿರಂತರ ಪರಿಶ್ರಮ, ಆತ್ಮ ವಿಶ್ವಾಸದಿಂದ ಜ್ಞಾನ ಸಂಪಾದನೆ ಮಾಡಿಬೇಕಿದೆ. ಉದ್ಯೋಗ ಅಥವಾ ಹಣ ಸಂಪಾದನೆಗಾಗಿ ಶಿಕ್ಷಣ ಪಡೆಯದಿರಿ. ನೀವು ಮತ್ತು ನಿಮ್ಮ ಸುತ್ತಲಿನ ಸಮಾಜದ ಅಭಿವೃದ್ಧಿಯತ್ತ ಕೊಂಡುಯ್ಯುವಂತ ಶಿಕ್ಷಣ ಪಡೆಯಿರಿ.
ಎಲ್ಲ ಮಕ್ಕಳಿಗೂ ಶಿಕ್ಷಣ ದೊರಬೇಕೆಂದು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿವೆ. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ವಸತಿ ನಿಲಯಗಳ ವ್ಯವಸ್ಥೆ ಸೇರಿ ಅನೇಕ ಸೌಲಭ್ಯಗಳು ಜಾರಿಯಲ್ಲಿವೆ. ಅದರೊಟ್ಟಿಗೆ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸುಸಜ್ಜಿತ ಆಟದ ಮೈದಾನ, ಶೌಚಾಲಯ, ಅಡುಗೆ ಮನೆ ಸೇರಿ ಅನೇಕ ಕಾಮಗಾರಿ ನಡೆಸಲಾಗಿದೆ ಎಂದರು.
ಹಂಚಿನಾಳದ ಐಟಿಐ ಕಾಲೇಜಿನ ಪ್ರಾಚಾರ್ಯ ಜೆ.ಎಸ್. ನರಗುಂದ ಮಾತನಾಡಿ, ಎಸ್ಎಸ್ಎಲ್ಸಿ ನಂತರದಲ್ಲಿ ವಿದ್ಯಾರ್ಥಿಗಳಿಗೆ ಪಿಯು ಶಿಕ್ಷಣ, ತಾಂತ್ರಿಕ ಶಿಕ್ಷಣ ಸೇರಿ ಬಹು ಆಯ್ಕೆಗಳಿವೆ. ಉತ್ತಮ ಗುರಿಯೊಂದಿಗೆ ಅನುಭವಿಗಳ ಮಾರ್ಗದರ್ಶನ ಪಡೆದು ಆಯಾ ವಿದ್ಯಾರ್ಥಿಗಳಿಗೆ ಆಸಕ್ತಿಯಿರುವ ಶಿಕ್ಷಣ ಪಡೆಯಬಹುದು ಎಂದರು.
ವಿವೇಕಾನಂದ ಪಿಯು ಕಾಲೇಜಿನ ಮುಖ್ಯಸ್ಥ ಮೌನೇಶ ಅರ್ಕಸಾಲಿ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿದೆ. ಇಂಗ್ಲೀಷ್ ಭಾಷೆಯ ಕುರಿತು ಹಿಂಜರಿಕೆ ಬೇಡ. ಉಜ್ವಲ ಭವಿಷ್ಯಕ್ಕಾಗಿ ಪರಿಣಿತರಿಂದ ನಿಮ್ಮ ಗುರಿ ಮತ್ತು ಅದಕ್ಕೆ ಹೊಂದುವ ಪದವಿ ಆಯ್ಕೆ ಕುರಿತು ಮಾಹಿತಿ ಸಂಗ್ರಹಿಸಿ. ಪೂರ್ವ ನಿಯೋಜಿತ ಆಯ್ಕೆ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.
ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಮಾರ್ಗದರ್ಶನ ನೀಡಿದ ಜೆ.ಎಸ್. ನರಗುಂದ ಮತ್ತು ಮೌನೇಶ ಅರ್ಕಸಾಲಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲಾಸಂಸ್ಥೆಯಿಂದ ಸನ್ಮಾನಿಸಲಾಯಿತು.
ಶೇಷಪ್ಪ ಕೊಪ್ಪದ, ಪಿಡಿಒ ರೇಣುಕಾ ನಾಡಗೌಡರ, ಬಸವರಾಜ ಬಾರ್ಕಿ, ಶರೀಪಸಾಬ ಬಾರಿಗಿಡದ, ಯಲ್ಲಪ್ಪಗೌಡ ಪೋಲೇಶಿ, ಡಿ.ಎಸ್. ಕೊಪ್ಪದ, ನಂದಕುಮಾರ ಚಂದರಗಿ, ಈರಯ್ಯ ಮಠಪತಿ, ಮಂಜುನಾಥ ಹಡಪದ, ಉಮೇಶ ವಗ್ಗರ, ಐ.ಪಿ. ಪಾಟೀಲ, ಗಂಗಮ್ಮ ಕೊಪ್ಪದ ಹಾಗೂ ಪ್ರಮುಖರು ಇದ್ದರು.