ಸಾಮಾಜಿಕ ಸಂರಚನೆ ಬದಲಾವಣೆಯಿಂದ ಮಾತ್ರ ಲಿಂಗ ಸಮಾನತೆ ಸಾಧ್ಯ : ಗಾಯತ್ರಿ
ಬಳ್ಳಾರಿ 08: ವಿಶೇಷ ಆರ್ಥಿಕ ಮತ್ತು ರಾಜಕೀಯ ಸವಲತ್ತುಗಳನ್ನು ಸ್ರ್ತೀಯರಿಗೆ ನೀಡಿದರೂ, ಅವರ ಬದುಕಿನ ಬಹುತೇಕ ಭಾಗಗಳಲ್ಲಿ ಅಪೇಕ್ಷಿತ ಸುಧಾರಣೆ ಸಾಧ್ಯವಾಗದೇ ಇರುವುದಕ್ಕೆ ನಮ್ಮ ಸಾಮಾಜಿಕ ಸಂರಚನೆ ಹೆಚ್ಚು ಕಡಿಮೆ ಯಥಾವತ್ತಾಗಿ ಮುಂದುವರೆಯುತ್ತಿರುವುದೇ ಕಾರಣವೆಂದು ವೃತ್ತ ಆರಕ್ಷಕ ನಿರೀಕ್ಷಕಿ ಆರ್.ಗಾಯತ್ರಿ ಅಭಿಪ್ರಾಯ ಪಟ್ಟರು.ವೀರಶೈವ ಮಹಾವಿದ್ಯಾಲಯದ ರ್ಯಾಂಗಿಂಗ್ ವಿರೋಧಿ ಕೋಶ, ಲೈಂಗಿಕ ಕಿರುಕುಳ ತಡೆಗಟ್ಟುವ ಕೋಶ ಹಾಗೂ ಮಹಿಳಾ ಸಬಲೀಕರಣ ಕೋಶ ಸಂಯುಕ್ತವಾಗಿ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದ ವಿವಿಧ ಕ್ಷೇತ್ರಗಳಲ್ಲಿಯೇ ಅವಕಾಶಗಳನ್ನು ಬಳಸಿಕೊಳ್ಳಲು ಸಾಮಾಜಿಕ ಅಡಚಣೆಗಳು ಬಿಡುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು. ಕುಟುಂಬದ ಒಳಗೆ ಮತ್ತು ಹೊರಗೆ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಮತ್ತು ಹಿಂಸೆಗಳು ನಿಲ್ಲಬೇಕು. ಸುಮಾರು ಶತಮಾನಗಳಿಂದ ಮುಂದುವರೆದುಕೊಂಡು ಬಂದ ಪಿತೃಪ್ರಧಾನ ವ್ಯವಸ್ಥೆ ಬದಲಾಗಬೇಕು. ಲಿಂಗ ಪಡಿಯಚ್ಚುಗಳು ಮತ್ತು ಪೂರ್ವಾಗ್ರಹಗಳು, ಲಿಂಗ ಸ್ತರವಿನ್ಯಾಸ, ಲಿಂಗ ಶ್ರಮವಿಭಜನೆ ಇತ್ಯಾದಿಗಳನ್ನು ಅಳಿಸಲು ಕುಟುಂಬ ಮಟ್ಟದಿಂದ ಪ್ರಯತ್ನ ಆರಂಭವಾಗಬೇಕೆಂಬ ಆಶಯ ವ್ಯಕ್ತಪಡಿಸಿದರು. ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಪೂರ್ಣ ಪ್ರಮಾಣದಲ್ಲಿ ದೊರೆತಾಗ ಲಿಂಗ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಜಿ.ರಾಜಶೇಖರ ಮಹಿಳಾ ಸಮಸ್ಯೆಗಳ ವಿರುದ್ದ ಜನಾಭಿಪ್ರಾಯ ಮೂಡಿಸುತ್ತ್ತಾ, ಹೋರಾಟ ನಡೆಸುತ್ತಾ ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ಮಾತ್ರಕ್ಕೆ ಅವರ ಸ್ಥಿತಿಗತಿಗಳಲ್ಲಿ ಇದ್ದಕ್ಕಿದ್ದಂತೆ ಸುಧಾರಣೆ ಆಗುವುದಿಲ್ಲ ಎಂದರು. ಮಹಿಳೆಯರನ್ನು ಕಾಡುತ್ತಿರುವ ದೌರ್ಬಲ್ಯಗಳನ್ನು ಗುರುತಿಸುವ ಹಾಗೂ ಅವರನ್ನು ಪೀಡಿಸುತ್ತಿರುವ ಅಜ್ಞಾನ, ಅನಾರೋಗ್ಯ, ಮೌಢ್ಯ, ಬಡತನ, ಅನಕ್ಷರತೆ, ಆತ್ಮವಿಶ್ವಾಸ ಇಲ್ಲದಿರುವಿಕೆ, ಪರಾವಲಂಬನೆ, ಪುರುಷಾಧೀನತೆ, ಸಂಪ್ರದಾಯಶರಣತೆ ಮುಂತಾದ ಸಮಸ್ಯೆಗಳ ಕಡೆಗೆ ಸೂಕ್ತ ಗಮನಹರಿಸುವ ಅಗತ್ಯವನ್ನು ಕುರಿತು ಒತ್ತಿ ಹೇಳಿದರು. ಇಂತಹ ದೌರ್ಬಲ್ಯಗಳಿಂದ ಹಾಗೂ ಸಮಸ್ಯೆಗಳಿಂದ ಮಹಿಳೆ ಮುಕ್ತವಾದಾಗ ಮಾತ್ರ ಆಕೆಯ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಉಪನ್ಯಾಸಕಿಯರು ಮಹಿಳಾ ನಾಯಕಿಯರು ಎಂಬ ಕಿರುನಾಟಕವನ್ನು ಪ್ರದರ್ಶಿಸಿದರು. ರಾಜಶ್ರೀ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಶರ್ಲಿಜೋನ್ಸ್ ಪ್ರಾಸ್ತವಿಕ ಭಾಷಣ ಮಾಡಿದರು. ಡಾ. ಜಿ.ಗೌರಮ್ಮ ವಂದನಾರ್ಪಣೆ ಮಾಡಿದರು. ಡಾ. ಹೆಚ್.ಬಿ.ಜಲಜಾಕ್ಷಿ ಅತಿಥಿಗಳನ್ನು ಸ್ವಾಗತಿಸಿದರು.