ಕುರುಬರ ಸಂಘದ ರಾಜ್ಯ ನಿರ್ದೇಶಕರಾಗಿ ಗಾದಿಲಿಂಗನಗೌಡ ಆಯ್ಕೆ
ಬಳ್ಳಾರಿ 15: ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ರಾಜ್ಯ ನಿರ್ದೇಶಕರಾಗಿ ಬಳ್ಳಾರಿಯ ಬಿ.ಕೆ ಗಾದಿಲಿಂಗನಗೌಡ ಆಯ್ಕೆಯಾಗಿದ್ದಾರೆ. ಕಳೆದ ನವೆಂಬರ್ ತಿಂಗಳ 19ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು 2019-24ನೇ ಸಾಲಿನ ಅವಧಿಗೆ ನಾಮ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಾಂತ ಗಡಿ ಪ್ರದೇಶದಿಂದ ರಾಜ್ಯ ಸಂಘಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ನಾಮನಿರ್ದೇಶಿತರ ಆಯ್ಕೆ ಕೂಡಾ ವಿಳಂಬವಾಗಿತ್ತು. ಇದೀಗ ನೇಮಕಾತಿ ಅಂತಿಮಗೊಂಡಿದ್ದು ಸಂಘದ ಬೈಲಾ ಪ್ರಕಾರ ಸಮಾಜದ ಅಭಿವೃದ್ಧಿ ಮತ್ತು ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಂತೆ ಸಂಘದ ಪ್ರಭಾರ ಅಧ್ಯಕ್ಷ ಬಿ. ಸುಬ್ರಮಣ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ ಸೂಚಿಸಿದ್ದಾರೆ. ಗಾದಿಲಿಂಗನಗೌಡ ಅವರ ಆಯ್ಕೆಗೆ ಅವರ ಸ್ನೇಹಿತರು ಹಾಗೂ ಬಂಧುಗಳು ಅಭಿನಂದಿಸಿದ್ದಾರೆ. ಈ ಕುರಿತು ಬಿಕೆ. ಗಾದಿಲಿಂಗನಗೌಡ ಪ್ರತಿಕ್ರಿಯಿಸಿ ರಾಜ್ಯ ಸಂಘದ ಮುಖಂಡರ ನೀರೀಕ್ಷೆಯಂತೆ ಸೇವೆ ಮಾಡುವೆ. ಮೊದಲಿನಿಂದಲೂ ಸಮಾಜದ ಕಾರ್ಯಗಳಲ್ಲಿ ಕಾರ್ಯಪ್ರವೃತ್ತರಾಗಿದ್ದು ಮುಂದೆಯೂ ಕೂಡಾ ಸಮಾಜಕ್ಕೆ ದುಡಿಯುವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಆಯ್ಕೆಗೆ ಕಾರಣೀಭೂತರಾದ ಹಾಗೂ ಬೆಂಬಲವಿತ್ತ ಜಿಲ್ಲೆ ಹಾಗೂ ರಾಜ್ಯ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ.