ಬಣ್ಣದ ಜಗತ್ತಿನಿಂದ ಸಾಮಾಜಿಕ ಕಾರ್ಯಗಳತ್ತ ಅನಿರುದ್ಧ ಜತಕರ 5 ವರ್ಷಗಳಲ್ಲಿ ಹಲವು ಯಶಸ್ವಿ ಪರಿಸರ-ಸ್ವಚ್ಚತಾ ಕಾರ್ಯಕ್ರಮ
ಲೋಕದರ್ಶನ ವರದಿ
ಅನಿರುದ್ಧ ಜತಕರ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ನಟ, ನಿರ್ದೇಶಕ, ಲೇಖಕ ಹಾಗೂ ಗಾಯಕ. ದಿವಂಗತ ಮೇರು ನಟ ಡಾ. ವಿಷ್ಣುವರ್ಧನ್ ಅವರ ಅಳಿಯರಾದ ಇವರು, ಹಲವು ಸಿನಿಮಾ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುತ್ತಾ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೆಲ, ಜಲ, ಭಾಷೆ, ಸಂಸ್ಕೃತಿ ಉಳಿವಿಗೆ ಶ್ರಮಿಸುತ್ತಿರುವ ಅನಿರುದ್ಧ್ ಅವರು ಹಲವಾರು ಜನಪರ ಕಾರ್ಯಗಳನ್ನು ಕಳೆದ 5 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅನಿರುದ್ಧ್ ಅವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಬೆಂಗಳೂರು ಶುಚಿತ್ವ ರಾಯಭಾರಿಯಾಗಿ ಆಯ್ಕೆ ಮಾಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ವತಿಯಿಂದ ಸ್ವಚ್ಛ ಸರ್ವೇಕ್ಷಣಾ 26ರ ರಾಯಭಾರಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಡಾ. ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ್ ಜತಕರ, ಇಂಡಿಯಾ ರೈಸಿಂಗ್ ಟ್ರಸ್ಟ್‌ನ ಮುಖ್ಯಸ್ಥರಾದ ಅರುಣ್ ಪೈ ಅವರನ್ನು ಆಯ್ಕೆ ಮಾಡಿಕೊಂಡಿದೆ. ತಮ್ಮ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಯಿಸುತ್ತಾ ಬರುತ್ತಿರುವ ಅನಿರುದ್ಧ್ 'ಸ್ವಚ್ಚತೆಗಾಗಿ ನಾನೂ ಸಹಭಾಗಿ' ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ನಿರ್ವಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಬೆಂಗಳೂರಿನ ಕಸದ ಸಮಸ್ಯೆಗಳಿಗೆ ಮುಕ್ತಿ ಹಾಡುತ್ತಿದ್ದಾರೆ ಅನಿರುದ್ಧ್. ಹೌದು ಅನಿರುದ್ಧ್ ಅವರು ಸ್ವಚ್ಚ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಸೇರಿ ಹಲವು ವಿಧಗಳಲ್ಲಿ ಶ್ರಮಿಸುತ್ತಿದ್ದಾರೆ.
ಇವರ ಈ ಸೇವೆಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ತುಂಬಾ ಸಹಕಾರ ನೀಡುತ್ತಿದ್ದಾರೆ. ಇತ್ತೀಚೆಗೆ ಅನಿರುದ್ಧ್ ಅವರು ಬೆಂಗಳೂರಿನ ಬನಶಂಕರಿ 2ನೇ ಹಂತದ ಕದಿರೇನಹಳ್ಳಿ ಪಾರ್ಕ್ ಹತ್ತಿರ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ರಸ್ತೆಯಲ್ಲಿರುವ ಕಸದ ರಾಶಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿ ಆದಷ್ಟು ಬೇಗ ಸ್ವಚ್ಚತಾ ಕಾರ್ಯ ನಿರ್ವಯಿಸಿದರು. ಹೀಗೆ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವ ಅನಿರುದ್ಧ್ ಡಾ. ವಿಷ್ಣುವರ್ಧನ್ ಅಳಿಯನಾಗಿ ವಿಷ್ಣುದಾದಾ ಅವರ ಹೆಸರನ್ನು ಇನಷ್ಟು ಮೇಲಕ್ಕೆ ಕೊಂಡೊಯ್ಯುತ್ತಿದ್ದಾರೆ.