ಲೇಖನಗಳು

ಸ್ವಾತಂತ್ರ್ಯ ಹೋರಾಟ... ಗಾಂಧಿ... ಗೋಡ್ಸೆ, ಇತ್ಯಾದಿ

ಸ್ವಾತಂತ್ರ್ಯ ಹೋರಾಟ... ಗಾಂಧಿ... ಗೋಡ್ಸೆ, ಇತ್ಯಾದಿ

ಗಾಂಧೀಜಿಯವರ ಬಗ್ಗೆ ಅಪಾರ ಭಕ್ತಿ ನಂಬಿಕೆ ಇಟ್ಟುಕೊಂಡಿರುವವರು ಒಂದು ಕಡೆ. ಒಳ್ಳೆಯ ಭಾವನೆ ಇಲ್ಲದವರು ಒಂದು ಕಡೆ. ಈಚಿನ ಒಂದು ದಶಕದಲ್ಲಿ ಈ ಎರಡು ಪ್ರತ್ಯೇಕ ಗುಂಪುಗಳ ನಡುವಿನ ಸಂಘರ್ಷವನ್ನು ಗಮನಿಸುತ್ತಿದ್ದೇನೆ. ಕೆಲವರು ಗಾಂಧಿ ಮೇಲಿನ ಅಸಮಾಧಾನಕ್ಕಾಗಿ ಗೋಡ್ಸೆಯನ್ನು ವೈಭವೀಕರಿಸುತ್ತಿರುವದನ್ನೂ, ಗೋಡ್ಸೆಯ ಕೃತ್ಯ ಸಮರ್ಥಿಸಿಕೊಳ್ಳುವದನ್ನೂ ನೋಡುತ್ತಿದ್ದೇನೆ. ಈಚೆಗೆ ಗಾಂಧೀಜಿಯನ್ನು ಸಮರ್ಥಿಸುವಂತಹ ಒಂದು ಪುಸ್ತಕವನ್ನೂ ಒಬ್ಬರು ಹೊರತಂದಿದ್ದಾರೆ. ಗೋಡ್ಸೆಯನ್ನು ಸಮರ್ಥಿಸುವ ಪುಸ್ತಕವೂ ಮುಂದೆ ಹೊರಬರಬಹುದು.   

ಪ್ರತಿಯೊಬ್ಬರಿಗೂ ಅವರವರ ನಂಬಿಕೆ ಮುಖ್ಯ. ಅವರವರ ತೃಪ್ತಿಗೆ ಅಗತ್ಯವಾದುದನ್ನು ಅವರವರು ಬರೆದುಕೊಳ್ಳಬಹುದೇ ಹೊರತು ನಾವು ಹೇಳುತ್ತೇವೆಂದು ಬೇರೆಯವರು ಬದಲಾಗುವದು/  ನಂಬುವದು ಕಷ್ಟ. ಈ ನಡುವೆ ಸ್ವಾತಂತ್ರ್ಯ ಹೋರಾಟದ ಕತೆಯೂ ಹೊರಬರುತ್ತಿದೆ. ಸ್ವಾತಂತ್ರ್ಯ ನಿಜವಾಗಿ ಯಾರಿಂದ ದೊರಕಿತು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇದು ಕೇಳುವ ಪ್ರಶ್ನೆ ಅಲ್ಲ. ಕೇವಲ ಗಾಂಧಿ ಟಿಳಕರಿಂದಲೆ ಸ್ವಾತಂತ್ರ್ಯ ಸಿಕ್ಕಿತು ಎನ್ನುವದನ್ನು ಕೆಲವರು ಒಪ್ಪುವದಿಲ್ಲ. ಅವರಿಗೂ ಹಿಂದೆ ಹಲವು ಕ್ರಾಂತಿಕಾರಿಗಳು ಹೋರಾಡಿ ಪ್ರಾಣ ತೆತ್ತಿದ್ದಾರೆ. ಅವರ ತ್ಯಾಗ ಬಲಿದಾನಗಳಿಗೂ ಮಹತ್ವ ಇದೆ. ಆ ಹೋರಾಟದ ಮುಂದಿನ ಭಾಗ ಟಿಳಕರಿಂದ ಆರಂಭವಾಗಿ ಗಾಂಧೀಜಿಯವರೊಂದಿಗೆ ಕೊನೆಗೊಂಡಿದೆ. ಸಂಗಡ ಲಕ್ಷಾಂತರ ಜನ ಹೋರಾಟದಲ್ಲಿ ಭಾಗವಹಿಸಿ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಆದ್ದರಿಂದ ಆ ಕ್ರಾಂತಿಕಾರಿಗಳಿಂದ ಗಾಂಧಿ ಹೋರಾಟದ ಹಂತದ ತನಕವೂ ಎಲ್ಲರನ್ನೂ ನಾವು ಗೌರವಿಸಲೇಬೇಕಾಗುತ್ತದೆ. ಅವೆಲ್ಲ ಹೋರಾಟದ ವಿವಿಧ ಹಂತಗಳು. 1905 ರ ನಂತರ ಹೋರಾಟದ ಸ್ವರೂಪ ಬದಲಾಯಿತು ಅಷ್ಟೇ. (ಸಂಸ್ಥಾನಿಕರ ಹೋರಾಟ ಅವರ ಸಂಸ್ಥಾನವನ್ನು ಉಳಿಸಿಕೊಳ್ಳುವದಕ್ಕಾಗಿ ನಡೆದದ್ದು ಎನ್ನುವುದೂ ಬಹಳ ಮಟ್ಟಿಗೆ ನಿಜ.) ಟಿಳಕರ ಮತ್ತು ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಹೋರಾಟಗಳಲ್ಲೂ ವ್ಯತ್ಯಾಸವಿತ್ತು. ಟಿಳಕರು ಉಗ್ರವಾದಿ. ಗಾಂಧಿ ಸೌಮ್ಯವಾದಿ. ಯಾವುದೇ ಹೋರಾಟಕ್ಕೂ ಲೀಡರಶಿಪ್ ಎನ್ನುವದು ಬೇಕೇಬೇಕಾಗುತ್ತದೆ. ಅನಾಯಕತ್ವದಿಂದ ಅರಾಜಕತೆ ಉಂಟಾಗುತ್ತದೆ. ಕ್ವಿಟ್ ಇಂಡಿಯಾ ಚಳವಳಿ ಕಾಲಕ್ಕೆ ನಾಯಕರಿಲ್ಲದೆ ಹೋರಾಟ ದಿಕ್ಕು ತಪ್ಪಿದ್ದನ್ನೂ ಗಮನಿಸಬೇಕಾಗುತ್ತದೆ. ಗಾಂಧಿ ತಮಗೆ ಸರಿಯೆನಿಸಿದ ದಾರಿ ಹಿಡಿದರು. ಅದರ ಅರ್ಥ ಅಹಿಂಸೆ/ ಸತ್ಯಾಗ್ರಹಗಳಿಂದಲೇ ಸ್ವಾತಂತ್ರ್ಯ ದೊರಕಿತು ಎಂದಲ್ಲ. ಅದೂ ಹೋರಾಟದ ಒಂದು ಭಾಗ. ಯಾವುದೇ ದೇಶವನ್ನೂ ದಬ್ಬಾಳಿಕೆಯಿಂದಲೇ ಬಹಳ ಕಾಲ ಹಿಡಿದಿಟ್ಟುಕೊಳ್ಳಲು ಆಗುವದಿಲ್ಲ. ಹಂತಹಂತವಾಗಿ ಬ್ರಿಟಿಷರ ಹಿಡಿತ ಸಡಿಲಾಗುತ್ತಲೇ ಬಂದಿತ್ತು. ಭಾರತಕ್ಕೆ ಸ್ವಾತಂತ್ರ್ಯ ಕೊಡಲೇಬೇಕಾದಂತಹ ವಾತಾವರಣ ನಿರ್ಮಾಣವಾಗಿತ್ತು. ಕೊಟ್ಟರು. ಆದರೆ ಜಿನ್ನಾನ ಹಟದಿಂದ ವಿಭಜನೆಯ ಬಹುದೊಡ್ಡ ಅನಾಹುತ ನಡೆಯಿತು. ಗಾಂದೀಜಿಯೂ ವಿಭಜನೆಗೆ ಮೊದಲು ವಿರೋಧವಾಗಿದ್ದರು. ನಂತರ ಎಲ್ಲರೂ ಅಸಹಾಯಕರಾಗಿ ವಿಭಜನೆಗೆ ಒಪ್ಪಿಗೆ ನೀಡಿದರೆಂದು ಇತಿಹಾಸ ಹೇಳುತ್ತದೆ.  

ಅದೇನೇ ಇದ್ದರೂ ಕ್ರಾಂತಿಕಾರಿಗಳಿಂದ ಹಿಡಿದು ಟಿಳಕ ಗಾಂಧೀಜಿವರೆಗೆ ಎಲ್ಲರಿಂದ ನಮಗೆ ಸ್ವಾತಂತ್ರ್ಯ ಬಂತು ಮತ್ತು ಎಲ್ಲರಿಗೂ ನಾವು ಅದರ ಸಮಾನ ಗೌರವ ನೀಡಬೇಕು. ಈ ವಿಷಯದಲ್ಲಿ ಜಗಳ ಮಾಡುವ ಅಗತ್ಯವಿಲ್ಲ. ಸಂದರ್ಭಾನುಸಾರ ಗಾಂಧೀಜಿಯಿಂದಲೂ ಕೆಲವು ತಪ್ಪುಗಳು ತಿಳಿದೋ ತಿಳಿಯದೆಯೋ ಆಗಿರಬಹುದು. ಯಾರನ್ನೇ ಆದರೂ ನಾವು ಕುರುಡಾಗಿ ಆರಾಧಿಸಲು ಹೋದರೆ ನಮಗೆ ಅವರ ತಪ್ಪುಗಳು ಕಂಡುಬರುವದಿಲ್ಲ ಅಥವಾ ಒಪ್ಪಲು ಮನಸ್ಸು ಸಿದ್ಧವಿರುವದಿಲ್ಲ. ಸ್ವಾತಂತ್ರ್ಯ ದೊರಕಿ ಆಗಲೇ ಮುಕ್ಕಾಲು ಶತಮಾನ ಕಳೆದುಹೋಗಿದೆ. ಈಗ ನಾವು ಅದರ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂದು ಬಡಿದಾಡುವದು ಸರಿಯಲ್ಲ, ಅದರ ಅಗತ್ಯವೂ ಇಲ್ಲ. ಗಾಂಧೀಜಿಯ ಮಹತ್ವ ಗಾಂಧೀಜಿಗೆ ಇದ್ದೇಇದೆ. ಇರಲೂಬೇಕು. ಹಾಗೆಂದಾಕ್ಷಣ ಇತರರ ಮಹತ್ವ ಕಡಿಮೆ ಎಂದಲ್ಲ. ಕ್ರಾಂತಿಕಾರಿಗಳು, ಸುಭಾಸಚಂದ್ರ ಬೋಸರಂಥವರು, ಜನಸಾಮಾನ್ಯರು ಸಹ ಸ್ಮರಣೀಯರೇ.   

ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಒಂದು ಭಾವನಾತ್ಮಕ ಕ್ಷಣದಲ್ಲಿ. ಅದಕ್ಕೂ ಅವನದೇ ಅದ ಕಾರಣಗಳಿವೆ. ಗಾಂಧಿಯನ್ನು ಕೊಂದ ಎಂದಾಕ್ಷಣ  ಅವನು ದೇಶಪ್ರೇಮಿಯಲ್ಲವೆಂದೇನಲ್ಲ. ಹಿಂದೂಗಳ ಕರಾಳ ಕಗ್ಗೊಲೆ ಅತ್ಯಾಚಾರಗಳಿಂದ ಆಕ್ರೋಶಗೊಂಡ ಮನಸ್ಸು ಅವನಿಂದ ಆ ಕೃತ್ಯ ಮಾಡಿಸಿತು. ಅದೊಂದು ಅಂತಹ ಸಂದರ್ಭ ನಿರ್ಮಾಣವಾಗಿತ್ತು. ಗಾಂಧೀಜಿ ಅತಿಯಾದ ಮುಸ್ಲಿಂ ಒಲವು  ಹೊಂದಿದ್ದರೆಂಬುದೂ ಅದಕ್ಕೊಂದು ಕಾರಣ. ನಾವು ಈಗ ನಮನಮಗೆ ತೋಚಿದಂತೆ ಹೇಳಿಕೊಳ್ಳಲು ಸ್ವತಂತ್ರರಿದ್ದೇವೆ. ಆದರೆ ಆಗಿನ ಸಮಯಸಂದರ್ಭ ಸನ್ನಿವೇಶಗಳೇ ಬೇರೆ. ಅದನ್ನು ನಾವು ಲಕ್ಷ್ಯದಲ್ಲಿಡಬೇಕಾಗುತ್ತದೆ. ಭಾವಾವೇಶಕ್ಕೊಳಗಾಗಿ ಮಾತಾಡುವದೋ ಬರೆಯುವದೋ ಬುದ್ದಿವಂತಿಕೆಯೇನಲ್ಲ. ಅಂದಿನ ಕಾಲ ಪರಿಸ್ಥಿತಿಗಳು ಹೇಗಿದ್ದವು ಎಂದೂ ಯೋಚಿಸಬೇಕಾಗುತ್ತದೆ. ಅಷ್ಟಕ್ಕೂ ಈಗ ನಡೆದಿರುವ ಚರ್ಚೆಯೇ ಅಪ್ರಸ್ತುತ. ನಾವು ದೇಶದ ಮುಂದಿನ ದಿನಗಳ ಬಗ್ಗೆ ಯೋಚಿಸಬೇಕಾಗಿದೆ ಹೊರತು ಹಿಂದೆ ಆಗಿಹೋದದ್ದರ ಬಗ್ಗೆ ಅಲ್ಲ. ಕೆಲಸಕ್ಕೆ ಬಾರದ ಚರ್ಚೆಗೆ ಸಮಯ ಹಾಳು ಮಾಡದೆ ಭವಿಷ್ಯದ ಪೀಳಿಗೆಯನ್ನು ಸದೃಢವಾಗಿಸಲು ಪ್ರಯತ್ನಿಸೋಣ. 

- * * * - 


  


ಸುದ್ದಿ ಓದಿ