ಪುಕ್ಕಟೆ ಪಯಣ ಯಾರಿಗೆಲ್ಲಾ ಹೈರಾಣ - ಬನ್ನಿ.. ನೋಡೋಣ
ಸರಕಾರ ಜಾರಿಗೆ ತರುವ ಯೋಜನೆಗಳು ಜನಪರವಾಗಿಯೇ. ಜನ ಕಲ್ಯಾಣಕ್ಕಾಗಿಯೇ ಇರುತ್ತವೆ. ಆದರೆ ಇವುಗಳನ್ನು ಅನುಸ್ಥಾನಗೊಳಿಸುವಾಗ ಕೆಲವು ಸಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಎಡವುತ್ತಾರೆ. ಇಲ್ಲವೆ ಅವುಗಳ ಲಾಭ ಪಡೆದುಕೊಳ್ಳುವಾಗ ಜನಗಳು ದಾರಿ ತಪ್ಪಿ ಬಿಡುತ್ತಾರೆ.
ಜನ ಕಲ್ಯಾಣಕ್ಕಾಗಿ ಇರುವ ಸೌಲಭ್ಯಗಳನ್ನು ವಿವೇಕದಿಂದ ಬಳಸಿಕೊಳ್ಳುವವನೇ ನಿಜವಾದ ಫಲಾನುಭವಿ. ಅದು ಬಿಟ್ಟು ಅವುಗಳ ಕುರಿತು ಸರಕಾರದ ಕುರಿತು ಕ್ಷುಲ್ಲಕವಾಗಿ ಮಾತನಾಡುವುದು ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವು ಸಮಾಜಮುಖಿ ಕಾಳಜಿಯುಳ್ಳ ನಾಗರಿಕನ ಲಕ್ಷಣವಲ್ಲ. ಅಂತಹದ್ದೇ ವಿಷಯದ ಕುರಿತು ನಾನಿಂದು ನಿಮ್ಮ ಮುಂದೆ ಅರುಹಲಿದ್ದೇನೆ.
ಅಂದು ರವಿವಾರ. ಮಧ್ಯಾಹ್ನ ಸಮಯದ ಒಂದು ಗಂಟೆಯಿಂದಲೇ ಸರಕಾರಿ ಬಸ್ಸುಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ತುಂಬಿದ್ದರು ಮತ್ತು ಯಾವುದೇ ಸರಕಾರಿ ಬಸ್ಸುಗಳನ್ನು ನೋಡಿದರೂ ಕಿಕ್ಕಿರಿದು ತುಂಬಿದ ಜನ ಸಂದಣಿ. ಅದರಲ್ಲೂ ಪ್ರವಾಸ ಮಾಡುವ ಹೆಣ್ಣು ಮಕ್ಕಳ ಸಂಖ್ಯೆ ಅಧಿಕವಾಗಿತ್ತು. ಮನೆ ಕೆಲಸಕ್ಕೆ ಹೋಗುವವರು. ಗಾರ್ಮೆಂಟ್ಗೆ ಹೋಗುವವರು. ಆಸ್ಪತ್ರೆಗೆ ಹೋಗುವವರು. ಸರಕಾರಿ ಇಲಾಖೆಗೆ ಹೋಗುವವರು. ಸಣ್ಣ ಸಣ್ಣ ವ್ಯಾಪಾರಕ್ಕೆ ಹೋಗುವವರು ತುಂಬಿಕೊಂಡಿದ್ದರು. ನನ್ನಂತೆ ಸಾಹಿತ್ಯ ಸಾಂಸ್ಕೃತಿಕ ಸಮಾಜ ಸೇವೆ ಕೆಲಸಕ್ಕೆ ಹೋಗುವವರೂ ಬಸ್ಸಿನಲ್ಲಿದ್ದರು. ಆದರೆ ಎಂದಿನಂತೆಗಿಂತಲೂ ವಿಪರೀತ ಜನ ಸಂದಣಿ ಇದ್ದದ್ದಂತೂ ನಿಜ. ಕಾರಣವೆಂದರೆ ಸರಕಾರವು ಅಂದಿನ ಮಧ್ಯಾಹ್ನದಿಂದಲೇ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಎಂದು ಘೋಷಿಸಿತ್ತು. ನಾಡಿನ ಎಲ್ಲಾ ಹೆಣ್ಣು ಮಕ್ಕಳಿಗೂ ನಾಡಿನಾದ್ಯಾಂತ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೆ ತಂದಿತ್ತು.
ಎಲ್ವಾ ಹೆಣ್ಣು ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ಕೆಲವರಂತೂ ಹೊಸದೊಂದು ಸುವರ್ಣಾವಕಾಶ ದೊರೆಯಿತು ಎಂಬ ಪರಮಾನಂದದಲ್ಲಿ ಅನಾರೋಗ್ಯದ ತಂದೆ, ಗಂಡ, ಮಕ್ಕಳನ್ನು ಕರೆದುಕೊಂಡು ದವಾಖಾನೆಗೆ ಹೊರಟು ಆಪ್ತ ಜೀವಗಳನ್ನು ಉಳಿಸಿಕೊಳ್ಳುವ ದಾವಂತದಲ್ಲಿದ್ದರು. ಆದರೆ ಕೆಲವು ಗಂಡಸರು ನಮಗೆ ಕುಳಿತುಕೊಳ್ಳಲು ಜಾಗವೇ ಇಲ್ಲ. ಎಲ್ಲಾ ಹೆಣ್ಣು ಮಕ್ಕಳೇ ಬಸ್ಸಿನಲ್ಲಿ. ಅಯೋಗ್ಯರು ಅಧಿಕಾರದ ಆಸೆಗಾಗಿ ಬೇಡವಾದ ಯೋಜನೆಗಳನ್ನೆಲ್ಲಾ ಜಾರಿಗೆ ತರ್ತಾರೆ. ಯಾರು ಕೇಳಿದ್ದರು ಈ ಬಿಟ್ಟಿ ಯೋಜನೆಗಳನ್ನು. ರಾಜ್ಯ ಹಾಳು ಮಾಡಲು ಹೊರಟಿದ್ದಾರೆ. ನಮ್ಮ ತೆರಿಗೆಯ ಹಣದಿಂದಲೇ ಬಿಟ್ಟಿ ಯೋಜನೆಗಳನ್ನು ಜಾರಿಗೆ ತಂದು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಎಂದೆಲ್ಲಾ ಗೊಣಗುತ್ತಿದ್ದರು. ಇಷ್ಟೊತ್ತಿಗಾಗಲೆ ನಾನು ಹೊರಟಿದ್ದ ಕೆಲಸದ ಸ್ಥಳ ಬಂತು ಇಳಿದು ಹೊರಟು ಹೋದೆ. ಕೆಲಸ ಮುಗಿಸಿ ಮರಳಿ ವಸ್ತಿ ಸ್ಥಳಕ್ಕೆ ವಾಪಾಸಾಗುವ ಸಂಜೆಯ ಸಮಯದಲ್ಲೂ ಕೆಲವರು ನಿಟ್ಟುಸಿರು ಬಿಟ್ಟು ದೇವರು ಇವತ್ತು ನೂರು ರೂಪಾಯಿ ಉಳಿಯಿತು. ದುಡಿಯುವ ತಿಂಗಳ ಸಂಬಳದ ಮೂರು ಸಾವಿರ ರೂಪಾಯಿಯಲ್ಲಿ ಒಂದೂವರೆ ಸಾವಿರ ಬಸ್ಸಿನ ಪ್ರಯಾಣಕ್ಕೆ ಮೀಸಲಿಡಬೇಕಿತ್ತು ಎಂದು ಉಳಿದ ನೂರರಲ್ಲಿ ಐವತ್ತು ರೂಪಾಯಿಯಲ್ಲಿ ಮಕ್ಕಳಿಗೆ ದಿನಸಿಯನ್ನು ತೆಗೆದುಕೊಂಡು ನಗುಮುಖದಿಂದಲೇ ಮನೆ ಸೇರುತ್ತಿದ್ದರು. ಅಮ್ಮ ಪರಮಾನಂದದ ಮಂದಹಾಸದ ನಗುವನ್ನು ಕಂಡ ಮಕ್ಕಳ ಮನದಲ್ಲಿ ಆನಂದವೋ ಆನಂದ. ಏನೋ ಪರಮಾನಂದವನ್ನು ಅನುಭವಿಸಿದ ಭಾವ. ಉಳಿದಂತೆ ಗಂಡಸರು ಬೆಳಿಗಿನಂತೆ ಗೊಣಗುತ್ತಲೇ ಮನೆ ಸೇರಿದರು. ನಾನೂ ಆ ದಿನ ಈ ಸನ್ನಿವೇಷವನ್ನು ಕಂಡು ಮರಳಿ ಮನೆ ಸೇರಿದೆ. ಕೈ ಕಾಲು ಮುಖ ತೊಳೆದು ದಿನದ ಕೆಲಸಗಳನ್ನು ಮೆಲುಕು ಹಾಕುತ್ತಾ ಊಟ ಮಾಡಿದ ಮೇಲೆ. ನಾಳಿನ ಕೆಲಸದ ಯೋಜನೆಯ ಕುರಿತು ಯೋಚಿಸುತ್ತಾ ಕುಳಿತೆ. ಪುಸ್ತಕ ಓದುತ್ತಾ ಬೆಂಚ್ಗೆ ಒರಗಿದ್ದ ನನಗೆ ಅದು ಹೇಗೆ ನಿದ್ದೆ ಆವರಿಸಿತೋ ಅರಿಯೇ. ಬೆಳಿಗ್ಗೆ ಎದ್ದಾಗ ಐದೂ ಮುವ್ವತ್ತು ಗಂಟೆ ಆಗಿತ್ತು. ಎಂದಿನಂತೆ ನಿತ್ಯ ಕರ್ಮಗಳನ್ನು ಮುಗಿಸಿ ಊರಿಗೆ ಹೊರಟು ನಿಂತೆ. ಅಂತೂ ಇಂತು ಅದೇ ಕಾಲಿಡಲು ಜಾಗವಿಲ್ಲದ ಬಸ್ ಹತ್ತಿ ಮೆಜೆಸ್ಟಿಕ್ಗೆ ಬಂದು ಹುಬ್ಬಳ್ಳಿ ಬಸ್ ಹತ್ತಿ ಮರಳಿ ಊರಿನ ಕಡೆ ಮುಖ ಮಾಡಿದೆ. ಈ ಬಸ್ಸಿನಲ್ಲೂ ಹೆಣ್ಣು ಮಕ್ಕಳದೇ ದರ್ಬಾರು.
ಹೆಗಲಿಗೊಂದು ದಿಮಾಕಿನ ಚೀಲ ಹಾಕಿಕೊಂಡು ಹೆಣ್ನು ಮಕ್ಕಳನ್ನೇ ಕರೆದುಕೊಂಡು ಬಸ್ಸಿನಲ್ಲಿ ಸೀಟು ಹಿಡಿದು ಕುಳಿತಿದ್ದರು. ಆಧಾರ ಕಾರ್ಡ್ ವೋಟರ್ ಕಾರ್ಡ್ ತೋರಿಸಿ ನಯಾಪೈಸೆ ಕೊಡದೆ ಬಲು ಜಬರ್ದಸ್ತಿನಲ್ಲಿಯೇ ಕುಳಿತಿದ್ದರು. ಇದನ್ನೆಲ್ಲಾ ನೋಡಿದ ಕೆಲವೂ ಗಂಡಸರು (ನಾನೂ ಸೇರಿ) ಗರಿಗರಿ ನೋಟನ್ನು ಸುಖ ಸುಮ್ಮನೆ ಕೊಡಬೇಕಲ್ಲ ಎಂದುಕೊಂಡು ವಿಧಿಯಿಲ್ಲದೆ ದುಡ್ಡು ಕೊಟ್ಟು ಟಿಕೇಟ್ ಪಡೆದು. ಸುಮ್ಮನೆ ಕೂತರು. ಹಿಗೆ ಬಸ್ಸು ಸಾಗಿತ್ತು ಮುಂದಿನ ಸೀಟಿನಲ್ಲಿದ್ದ ಮೂರು ಜನ ಹೆಂಗಸರು ಬಲು ಖುಷಿಯಲ್ಲಿಯೇ ಪ್ರಯಾಣ ಬೆಳೆಸಿದ್ದರು. ಕಿಲಕಿಲ ನಗುವುದೇನು. ಒಬ್ಬರಿಗೊಬ್ಬರು ತಮಾಷೆ ಮಾಡುವುದೇನು? ಒಂದು ರಿತಿಯ ಮೋಜಿನಲ್ಲಿದ್ದರು. ನಿರ್ವಾಹಕರು ಬಂದು ಎಲ್ಲಿಗೆ ಟಿಕೇಟ್ ಕೊಡಲಿ ಎಂದಾಗ. ಈ ಬಸ್ ಎಲ್ಲಿಯವರೆಗೆ ಹೋಗುತ್ತೆ ಎಂದು ಕೇಳಿದರು. ಇವರ ಈ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಿರ್ವಾಹಕರು ಮನದಲ್ಲೊಮ್ಮೆ ಸರಕಾರವನ್ನು ಬೈದು. ಹುಬ್ಬಳ್ಳಿಗೆ ಎಂದು ಉತ್ತರಿಸಿದರು.
ಈಗಾಗಲೆ ಪ್ರಯಾಣದ ಕೊನೆಯ ನಿಲ್ದಾಣಕ್ಕೆ ಇಳಿಯಲು ನಿರ್ಧರಿಸಿದ್ದ ಲಲನಾ ಮಣಿಯರು ಅಲ್ಲಿಗೇ ಕೊಡಿ ಎಂದರು. ಸರಿ ಆಧಾರ ಖಕಾರ್ಡ್ ಕೊಡಿ ಎಂದು ಕೇಳಿ ಪಡೆದು ನೋಡಿ ಸರಿ ತಗೊಳ್ಳಿ ಎಂದು ಟಿಕೇಟ್ ಹಾಗೂ ಆಧಾರ್ ಕಾರ್ಡ್ ಕೊಟ್ಟರು. ಹೀಗೆ ಪಯಣ ಸಾಗಿತ್ತು. ಇವರ ಮೋಜು ಮತ್ತೂ ಹೆಚ್ಚಾಗಿ ಮುಂದುವರಿದಿತ್ತು. ಪುಕ್ಕಟೆ ಪ್ರಯಾಣ ನಯಾಕೆ ಚಿಂತೆ ಮಾಡಬೇಕೆ? ಒಂದು ವಾರ ಹೀಗೆ ಮಜಾ ಮಾಡಿದರಾಯ್ತು. ನಡೆ ಹೋಗೋಣ. ತಿರುಗಿ ಬರೋಣ ಎಂಬ ದಧಾಟಿಯಲ್ಲಿಯೇ ಮಾತು ಮುಂದುವರಿದಿದ್ದವು. ಕೆಲವೇ ನಿಮಿಷಗಳಲ್ಲಿ ಮತ್ತೊಂದು ನಿಲ್ದಾಣ ಬಂದದ್ದರಿಂದ ಅಲ್ಲಿಯೂ ಜನ ಭಸ್ ಹತ್ತಲು ತಯಾರಾಗಿದ್ದರು. ಬಸ್ಸಿನಲ್ಲಿ ಕುಳಿತುಕೊಳ್ಳಲು ಖಾಲಿ ಸಿಟ್ ಇಲ್ಲದ ಕಾರಣ ನೋಡಿ! ಕುಳಿತುಕೊಳ್ಳಲು ಸಿಟ್ ಇಲ್ಲ ನಿಂತೇ ಬರಬೇಕು ಎಂದು ನಿರ್ವಾಹಕರು ಕೂಗಿ ಹೇಳಿದರು. ಗರ್ಭಿಣಿ ಹೆಂಗಸೊಬ್ಬರು ಅಣ್ಣ ನನ್ನ ಅಪ್ಪನಿಗೆ ತುಂಬಾ ಹುಷಾರಿಲ್ಲ ಅವರನ್ನು ತುರ್ತಾಗಿ ಕಾಣಲು ಹೋಗಬೇಕು ಹೇಗಾದರು ಮಾಡಿ ಸೀಟು ಕೊಡಿಸಿ ಪುಣ್ಣೆ ಬರುತ್ತೆ ಎಂದು ಗೋಗರೆದಳು. ನಿಸ್ಸಹಾಯಕರಾದ ನಿರ್ವಾಹಕರು ನಾನೇನು ಮಾಡಲಮ್ಮ. ಯಾರಿಂದ ಕೊಡಿಸಲಿ ಮತ್ತೊಂದು ಬಸ್ಸಿಗೆ ಬನ್ನಿ ಎಂದು ಹೇಳಿದರು. ಇದನ್ನು ಕೇಳಿಸಿಕೊಂಡ ಆಕೆ ಕಣ್ಣು ತುಂಬಾ ನೀರು ತುಂಬಿಕೊಂಡು ಅಳಲಾರದೆ ದುಃಖ ಬಿಗಿ ಹಿಡಿದು ನಿಂತಳು. ಇದನ್ನು ಕೇಳಿಸಿಕೊಂಡ ಬಸ್ಸಿನಲ್ಲಿದ್ದ ವಯೋವೃದ್ದರೊಬ್ಬರು ಅಮ್ಮ ತಾಯಿ ಬಾ ಹತ್ತು ನಾನು ಸೀಟು ಕೊಡುತ್ತೇನೆ ಬಾ ಎಂದು ಕರೆದು ತಾನು ಕುಳಿತಿದ್ದ ಸೀಟ್ನ್ನು ಬಿಟ್ಟು ಆಕೆಯನ್ನು ಕುಳ್ಳರಿಸಿದ್ದನು. ಇದನ್ನು ನೋಡಿದ ನನಗೆ ಯಾಕೊ ಒಂದು ತರಹದ ಕೀಳಿರಿಮೆ ಉಂಟಾಗಿ ನಾಚಿಕೆಯಾಯಿತು. ನಾವೆಷ್ಟು ಸ್ವಾರ್ಥಿಗಳು, ಎಷ್ಟು ಬೇಜವಾಬ್ದಾರಿ ತನದವರು ಎಂದೆನಿಸಿ ನಾನು ಕುಳಿತಿದ್ದ ಸೀಟನ್ನು ಆ ವಯೋವೃದ್ದರಿಗೆ ಬಿಟ್ಟುಕೊಟ್ಟೆ. ಇದನ್ನೆಲ್ಲಾ ನೋಡಿದ್ದ ಮುಂದಿನ ಸೀಟಿನಲ್ಲಿದ್ದ ಲಲನಾಮಣಿಯರು ಯಾಕೋ ಏನೋ ತಮ್ಮ ಮೋಜು ಮಸ್ತಿಯನ್ನು ಕಡಿಮೆ ಮಾಡಿ ಅದೇನು ಗುಸುಗುಸು ಮಾತಾಡುತ್ತಿದ್ದರು.
ಅಷ್ಟರಲ್ಲೇ ಆ ಗರ್ಭಿಣಿ ಹೆಂಗಸು ಇಳಿಯಬೇಕಿದ್ದರು ಊರು ಬಂದಿತು. ಇಳಿದರು. ಅವರ ಜೊಜೆಗೆ ದೂರದೂರಿಗೆ ಹೊರಟಿದ್ದ ಈ ಹೆಂಗಸರೂ ಇಳಿಯಲಾರಂಭಿಸಿದರು. ಇದನ್ನು ಗಮನಿಸಿದ ಬಸ್ಸಿನ ನಿರ್ವಾಹಕರು. ಅಯ್ಯೋ! ನನೀವ್ಯಾಕೆ ಇಳಿಯುತ್ತಿದ್ದೀರಿ? ಕೊನೆಯ ಸ್ಟಾಪ್ (ಹುಬ್ಬಳ್ಳಿ)ಗೆ ಇಳಿಯಬೇಕಾದವರಲ್ಲ ನೀವು ಕುಳಿತುಕೊಳ್ಳಿ ಎಂದರು. ಉತ್ತರ ನೀಡಲಾಗದ ಹೆಂಗಸರು ಇಲ್ಲಾ ನಾವು ಇಲ್ಲೇ ಇಳಿಯುತ್ತೇವೆ ಅಲ್ಲಿಗೆ ಬರೋದಿಲ್ಲ. ನಮ್ಮನ್ನು ಕ್ಷಮಿಸಿ ಬಿಡಿ. ಸುಖ ಸುಮ್ಮನೆ ಉಚಿತ ಪ್ರಯಾಣವೆಂದು ತಿರುಗಿದರೆ ನಿಜವಾದ ಉದ್ದೇಶಕ್ಕಾಗಿ ಪ್ರಯಾಣ ಮಾಡಬೇಕಿದ್ದ ಇಂತವರಿಗೆ ತೊಂದರೆಯಾಗುತ್ತೆ ಅಕ್ಕ ಕ್ಷಮಿಸಿ ನಮ್ಮನ್ನು ಎಂದು ಗರ್ಭಿಣಿ ಹೆಂಗಸಿನ ಕೈ ಹಿಡಿದರು. ಪರವಾಗಿಲ್ಲ ಬಿಡಿ. ನೋಡಿ ಯಾವುದೇ ಅವಕಾಶವನ್ನು ಸದುಪಯೋಗಕ್ಕೆ ಬಳಸಬೇಕು. ಇಲ್ಲದಿದ್ದರೆ ಅಗತ್ಯವಿದ್ದವರಿಗೆ ತೊಂದರೆಯಾಗುತ್ತದೆ ಎಂದು ನಮಸ್ಕರಿಸಿ ತುರ್ತಾಗಿ ಹೊರಟು ಹೋದಳು. ಇತ್ತ ಮೋಜು ಮಸ್ತಿಗಾಗಿ ಗೊತ್ತು ಗುರಿ ಇಲ್ಲದ ಊರಿಗೆ ಪುಕ್ಕಟೆ ಪ್ರಯಾಣ ಮಾಡುತ್ತಿದ್ದ ಮೂರು ಜನ ಹೆಂಗಸರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ಮರಳಿ ಬೆಂಗಳೂರಿಗೆ ಹೊರಟು ಹೋದರು.
- ವೆಂಕಟೇಶ ಈಡಿಗರ
ರಾಣೇಬೆನ್ನೂರು
- * * * -