ತ್ಯಾಜ್ಯ ಸಾಗಿಸುವ ವಾಹನ ಚಾಲಕರನ್ನು ಖಾಯಂಗೊಳಿಸಲು ಒತ್ತಾಯ
ಬಳ್ಳಾರಿ ಮಾ 21: ನಗರದ ಮಹಾನಗರ ಪಾಲಿಕೆಯ ತ್ಯಾಜ್ಯ ಸಾಗಿಸುವ ವಾಹನ ಚಾಲಕರನ್ನು ನೇರಪಾವತಿಗೊಳಪಡಿಸಿ ಖಾಯಂಗೊಳಿಸಲು ಒತ್ತಾಯಿಸಿ ಪಾಲಿಕೆಯ ಕಚೇರಿ ಆವರಣದಲ್ಲಿ ಮಂಗಳವಾರ ಕರ್ಣಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವಾ ವಾಹನ ಚಾಲಕರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಕಾರ್ಯದರ್ಶಿ ಕೇಶವ ನಾಯಕ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನಿರ್ವಹಣಿಯ ಕೆಲಸವನ್ನು ಕಾನೂನು ಪ್ರಕಾರ ಕಡ್ಡಾಯವಾಗಿ ಮಾಡಲೇ ಬೇಕಾಗಿರುತ್ತದೆ ಮತ್ತು ಇದು ನಿರಂತರ ಸ್ವರೂಪದ ಕೆಲಸವಾಗಿರುತ್ತದೆ. ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನವನ್ನು ಸಹವರಿಗೆ ನಗರ ಸ್ಥಳೀಯ ಸಂಸ್ಥೆಗಳು ನೀಡುತ್ತಿಲ್ಲ. ನೀಡುವ ಅಲ್ಪ ವೇತನವನ್ನು ಸಹ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ. ಅತಿಯಾದ ಅನೈರ್ಮಲೀಕರಣದಿಂದ ಕೂಡಿರುವ ಕಸವನ್ನು ಸಂಗ್ರಹಿಸಿ ಸಾಗಿಸುವ ಈ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಇದರಿಂದ ಉಂಟಾಗುವ ಹಲವಾರು ರೋಗರುಜಿನಗಳಗೆ ಈ ಕಾರ್ಮಿಕರು ತಮ್ಮನ್ನು ನಂಬಿರುವ ಕುಟುಂಬಗಳನ್ನು ಬೀದಿಪಾಲು ಮಾಡಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಇವರಿಗೆ ಕಾನೂನು ಬದ್ಧವಾಗಿ ಕೊಡಬೇಕಾದ ಸಾಮಾಜಿಕ ಭದ್ರತೆಯ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯಗಳನ್ನು ನೀಡಬೇಕು. ಹಾಗೂ ಗುತ್ತಿಗೆ ಪದ್ಧತಿ ರದ್ದುಪಡಿಸಿ, ನೇರವೇತನ ಪಾವತಿಯಡಿ ತಂದು, ಖಾಯಂಗೊಳಿಸಬೇಕು ಎಂದು ಹೇಳಿದರು.
ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವಾ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಹನುಮೇಶ ಕೆ., ಬಸಪ್ಪ, ವೀರೇಶ, ಗುರುಸ್ವಾಮಿ, ಸೇರಿದಂತೆ ಇತರೆ ವಾಹನ ಚಾಲಕರು ಉಪಸ್ಥಿತರಿದ್ದರು.