ಮುಂಡಗೋಡದಲ್ಲಿ ಮೊದಲ ಬಾರಿಗೆ ‘’ಹಳ್ಳಿ ಹಬ್ಬದ’‘ ಸೊಬಗು
ಮುಂಡಗೋಡ 04: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಹಳ್ಳಿ ಹಬ್ಬ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಗ್ರಾಮೀಣ ಪ್ರದೇಶದ ಜೀವನ ಶೈಲಿಯನ್ನು ಮರುಜೀವ ಗೊಳಿಸುವ ಪ್ರಯತ್ನದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಹುಡುಗಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲಾ ಹೆಣ್ಣುಮಕ್ಕಳೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಣ್ಮುಚ್ಚಿ ಪರಸ್ಪರ ಮೇಕಪ್ ಮಾಡಿಕೊಳ್ಳುತ್ತಿರುವ ವನಿತೆಯರು, ಟಾರು ರೋಡಲ್ಲಿ ಬಂದು ಬಿದ್ದಿರುವ ಭತ್ತದ ತೆನೆಗಳು, ಕಾರು, ಬೈಕು ಓಡಾಡೋ ರಸ್ತೆಯಲ್ಲೇ ತೆರೆದುಕೊಂಡ ಗ್ರಾಮೀಣ ಜೀವನ ಶೈಲಿ. ಬೀದಿ ತುಂಬಿಕೊಂಡಿರುವ ಅಂಗಡಿಗಳಲ್ಲಿ ರಾರಾಜಿಸುತ್ತಿರುವ ಮಹಿಳಾ ಮಣಿಗಳು ಇದೇನಪ್ಪಾ ಇದು ಪ್ರಮೀಳಾ ರಾಜ್ಯ ಎನ್ನುತ್ತೀರ?!
ಬಯಲುಸೀಮೆ, ಮಲೆನಾಡು, ಕರಾವಳಿ ಭಾಗದ ಆಚರಣೆಗಳನ್ನು ಬಿಂಬಿಸುವ ಕಾರಹುಣ್ಣಿಮೆ, ಭೂಮಿ ಹುಣ್ಣಿಮೆ, ಬಲೀಂದ್ರ ಪೂಜೆ, ದಸರಾ ಹಬ್ಬಗಳ ಆಚರಣೆ ಹಾಗೆಯೇ ಮಜ್ಜಿಗೆ ಕಡಿಯುವುದು, ಭತ್ತ ಕುಟ್ಟುವುದು, ಶಾವಿಗೆ ಹೊಸೆಯುವುದು, ಧನ-ಧಾನ್ಯಗಳನ್ನು ಹಸನು ಮಾಡುವುದು ಸೇರಿದಂತೆ ಹಲವು ರೀತಿಯ ಆಚರಣೆಗಳು ಕಳೆಗಟ್ಟಿದವು. ಇದನ್ನು “ಫಿಯೋನಾ” ಆಯಿಲ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವೈಭವ ತಂಡದಿಂದ ಹಮ್ಮಿಕೊಳ್ಳಲಾಗಿತ್ತು. ಫಿಯೋನಾದ ದಕ್ಷಿಣ ಭಾರತ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.