ಸಂಚಾರಿ ನಿಯಮ ಪಾಲಿಸಿ ಪ್ರಾಣ ಉಳಿಸಿಕೊಳ್ಳಿ; ಕ್ರೈಂ ಪಿಎಸ್ಐ ಪಾಟೀಲ
ಸಿಂದಗಿ 28: ಇತ್ತೀಚಿನ ದಿನಗಳಲ್ಲಿ ಯುವಕರು ಸಂಚಾರಿ ನಿಯಮ ಪಾಲಿಸದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಕಾನೂನು ನಿಯಮಗಳನ್ನು ಪಾಲಿಸುವುದರ ಜೊತೆಗೆ ಮಾದಕ ವಸ್ತುಗಳಿಂದ ದೂರವಿದ್ದು ಪ್ರಾಣ ಉಳಿಸಿಕೊಳ್ಳಿ ಎಂದು ಅಪರಾಧ ವಿಭಾಗದ ಪಿಎಸ್ಐ ಮಂಜುನಾಥ ಪಾಟೀಲ್ ಸಲಹೆ ನೀಡಿದರು.
ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಸಿಂದಗಿ ಪೊಲೀಸ್ ಠಾಣಾ ವತಿಯಿಂದ ಹಮ್ಮಿಕೊಂಡ ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಕುರಿತು ಜಾಗ್ರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೆಲ್ಮೆಟ್ ಇಲ್ಲದೆ ಫ್ಯಾಶನ್ ಮಾಡುವ ಹುರುಪಿಲ್ಲಿ ದ್ವಿಚಕ್ರ ವಾಹನ ಮನ ಬಂದಂತೆ ಓಡಿಸುತ್ತಾರೆ ಹಳಿ ತಪ್ಪಿದರೆ ಪ್ರಾಣ ಹೋಗುವುದು ಕಟ್ಟಿಟ್ಟ ಬುತ್ತಿ ಎಲ್ಲರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಅಪಘಾತದಲ್ಲಿ ವಾಹನ ಛಿದ್ರವಾದರೆ ಮತ್ತೊಂದು ವಾಹನ ಖರೀದಿಸಬಹುದು ಒಂದು ಪ್ರಾಣ ಖರೀದಿಸಲು ಸಾಧ್ಯವಿಲ್ಲ ಎಂದರು.
ದುಶ್ಚಟಗಳಿಂದ ದೊರವಿರಿ, ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಈ ಹುಟ್ಟು ಸಾವಿನ ಮದ್ಯದಲ್ಲಿ ತಾವು ಮಾಡಿದ ಸಾಧನೆ ಶಾಶ್ವತ. ತಮ್ಮ ಪಾಲಕರು ತಮ್ಮ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟು ನನ್ನ ಮಗ ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುವುದು ಬೇಡ ನಾವು ಕೂಲಿ ಮಾಡಿ ಶಿಕ್ಷಣ ಕೊಡಿಸಬೇಕು ನನ್ನ ಮಕ್ಕಳು ಸರ್ಕಾರದ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಕನಸನ್ನು ಕಟ್ಟಿರುತ್ತಾರೆ ಗಾಂಜಾ, ಚರಸ್, ಸಾರಾಯಿ, ಜೂಜಾಟ ಚಟಕ್ಕೆ ಅಂಟಿಕೊಂಡು ಪಾಲಕರ ಕನಸಿಗೆ ಮಸಿ ಎರೆಚುವ ಕೆಲಸ ಮಾಡಬೇಡಿ ಎಂದು ಹೇಳಿದ ಅವರು ಅಹಿತಕರ ಘಟನೆಗಳು, ಗುಂಪು ಗರ್ಷಣೆ, ಹೊಡೆದಾಟ ಬಾಲ್ಯ ವಿವಾಹ ಕಂಡು ಬಂದಲ್ಲಿ ತಕ್ಷಣ ನಮ್ಮ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಎಂದರು.
ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಪ್ರಾಚಾರ್ಯ ಎ ಬಿ ಸಿಂದಗಿ, ಎಸ್ ಬಿ ಬಿರಾದಾರ, ಪೊಲೀಸ್ ಹೊರಠಾಣೆ ಎಐ ಎಲ್ ಯು ನದಾಫ್, ಪೇದೆಗಳಾದ ಭೀಮು ಲಮಾಣಿ, ನಿಂಗಣ್ಣ ಪೂಜಾರಿ, ಸೇರಿದಂತೆ ಕಲ್ಪವೃಕ್ಷ ಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳು ಇದ್ದರು.