ಜಾನಪದ ಕಲಾವಿದ ಸಹದೇವಪ್ಪ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ
ಲೋಕದರ್ಶನ ವರದಿ
ಮುಂಡಗೋಡ:ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಇಂದೂರ ಗ್ರಾಮದ ಜಾನಪದ ಕಲಾವಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ನಡಿಗೇರ ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.
2020-21ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕಾಯಕ ಯೋಗಿ ಪ್ರಶಸ್ತಿ, ಕಲಾಸೇವಾ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳು ಸಹದೇವಪ್ಪ ಅವರಿಗೆ ಲಭಿಸಿವೆ. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ಸಾಹಿತ್ಯ ಪರಿಷತ್ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಈ ಹಿಂದೆ ಇವರು ವಹಿಸಿದ್ದರು. ಪ್ರಸ್ತುತ ಕಸಾಪ ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾನಪದ ಕಲಾವಿದ ಸಹದೇವಪ್ಪ ನಡಿಗೇರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದರಿಂದ ತಾಲೂಕಿನ ಕೀರ್ತಿ ಇಮ್ಮಡಿಗೊಂಡಿದೆ.
ಸಹದೇವಪ್ಪ ನಡಿಗೇರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ:ಸುಮಾರು 1974ನೇ ಇಸವಿಯಿಂದ ಚಿಕ್ಕವನಿರುವಾಗಲೆ ರಂಗಭೂಮಿ, ಜಾನಪದ ಹಾಡುಗಾರಿಕೆಯಲ್ಲಿ ಸೇರಿಕೊಂಡು ಇಲ್ಲಿಯವರೆಗೆ ಮಾಡಿದ ಸೇವೆಗೆ ಸರ್ಕಾರ ಹಿಂದುಳಿದ ತಾಲೂಕಿನ ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ತುಂಬಾ ಆನಂದ ತಂದಿದೆ. ನನಗೆ ದೊರೆತ ಪ್ರಶಸ್ತಿಯ ಗೌರವ ಇಡಿ ತಾಲೂಕಿಗೆ ಸಲ್ಲುತ್ತದೆ.
ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ಕುಮಾರ, ಸಂಸದ ತೇಜಸ್ವಿ ಸೂರ್ಯ ಹಾಗೂ ಮುಂತಾದವರು ಉಪಸ್ಥಿತರಿದ್ದರು.