ಶಾಲೆಯ ಸಮಗ್ರ ಅಭಿವೃದ್ಧಿ, ಗುಣಾತ್ಮಕ ಶಿಕ್ಷಣದತ್ತ ಗಮನಹರಿಸಿ
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಸಲಹೆ: ತಾಲೂಕಿನ ಗಡಿಭಾಗದ ವಿವಿಧ ಶಾಲೆಗಳಿಗೆ ಭೇಟಿ
ಕುಷ್ಟಗಿ 29; ಶಾಲೆಯ ಸಮಗ್ರ ಅಭಿವೃದ್ಧಿ ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಶಿಕ್ಷಕರಿಗೆ ಸಲಹೆ ನೀಡಿದರು.
ಸೋಮವಾರ ಬೆಳಿಗ್ಗೆ ಕುಷ್ಟಗಿ ತಾಲೂಕಿನ ಗಡಿಭಾಗದ ಶಾಲೆಗಳಾದ ಅಂಟರಠಾಣ, ಹುಚನೂರು ,ಬಂಡರಗಲ್ಲು, ಕಾಟಾಪುರ, ಹನುಮಸಾಗರ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು ಶಾಲೆಯ ಸಮಗ್ರ ಅಭಿವೃದ್ಧಿ ಮತ್ತು ಗುಣಾತ್ಮಕ ಶಿಕ್ಷಣದ ಅಗತ್ಯತೆಗಾಗಿ, ಶಾಲೆಯ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಶಾಲಾ ಅಭಿವೃದ್ಧಿ ಕೈಗೊಳ್ಳವುದು ಮತ್ತು ದಾಖಲಾತಿ, ಹಾಜರಾತಿ ಪ್ರಮಾಣ ಹೆಚ್ಚಿಸಲು ಸೂಚಿಸಿದರು.
2023- 24ನೇ ಸಾಲಿನ ಶೈಕ್ಷಣಿಕ ವರ್ಷ ಇಂದು ಆರಂಭವಾದರ ಪ್ರಯುಕ್ತವಾಗಿ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಸಿದ್ಧತೆಯನ್ನು ಪರಿಶೀಲಿಸಿದರು , ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ನೈರ್ಮಲ್ಯಕ್ಕಾಗಿ ಶಾಲಾ ಸ್ವಚ್ಛತೆ, ಶಿಕ್ಷಕರ ಸಭೆ, ಕಾರ್ಯ ಹಂಚಿಕೆ, ಶಾಲಾ ಅಭಿವೃದ್ಧಿ ಯೋಜನೆ ಮತ್ತು ಶಾಲಾ ಶೈಕ್ಷಣಿಕ ಯೋಜನೆ ತಯಾರಿಯ ಜೊತೆ ಜೊತೆಗೆ, ಪ್ರತಿ ಮಗುವಿಗೂ ಸಮವಸ್ತ್ರ ಪಠ್ಯಪುಸ್ತಕ ವಿತರಣೆ, ಶಾಲಾ ದಾಖಲಾತಿ ಆಂದೋಲನ, ನಲಿಕಲಿ ಬೋಧನಾ ವಿಧಾನದ ಸಫಲತೆ, ಶೈಕ್ಷಣಿಕ ಸವಾಲುಗಳು ಮತ್ತು ಅದರ ಪರಿಹಾರ ಕುರಿತಾದ ಕ್ರಿಯಾ ಸಂಶೋಧನೆ ಇನ್ನಿತರ ವಿಚಾರಗಳ ಕುರಿತು ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಯನ್ನು ಪರಿಶೀಲಿಸಿದರು.
ಕುಷ್ಟಗಿ ತಾಲೂಕಿನ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಎಲ್ಲಾ ಶಾಲೆಗಳು ಪುನರಾರಂಭಗೊಂಡಿದ್ದು ಎಲ್ಲಾ ಶಿಕ್ಷಕರು ಶಾಲೆಯಲ್ಲಿದ್ದು ಶಾಲಾ ಮೈದಾನ, ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸಿ ಶಾಲೆಗೆ ಆಗಮಿಸಿದ ಎಲ್ಲಾ ಮಕ್ಕಳಿಗೂ ಸಮವಸ್ತ್ರ ,ಪಠ್ಯಪುಸ್ತಕವನ್ನು ವಿತರಿಸಿ ಇಲಾಖೆಗೆ ಮಾಹಿತಿ ನೀಡಬೇಕೆಂದು ಶಾಲಾ ಮುಖ್ಯೋಪಾಧ್ಯರಿಗೆ ಮತ್ತು ಶಿಕ್ಷಕರಿಗೆ ಆದೇಶಿಸಿದರು.
ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಿ ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಿದರು.
ಕುಷ್ಟಗಿ ಬ್ಲಾಕಿನ 20 ಕ್ಲಸ್ಟರ್ ಗಳಲ್ಲಿ ವಿವಿಧ ಹಂತದ ಉಸ್ತುವಾರಿ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಮತ್ತು ಮಕ್ಕಳಿಗೆ ಪಠ್ಯಪುಸ್ತಕ ಸಮವಸ್ತ್ರವನ್ನು ಹಂಚುವ ಶೈಕ್ಷಣಿಕ ಕಾರ್ಯಗಳ ಸಿದ್ಧತೆಯ ಕಾರ್ಯಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡಿದರು