ವೃತ್ತಿ ಕಂಪನಿ ನಾಟಕ ಕಲಾವಿದರ ಪ್ರಥಮ ರಾಜ್ಯ ಸಮ್ಮೇಳನ
ಬಳ್ಳಾರಿ 22: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ನಿತ್ಯ ನಿರಂತರ ನಾಟಕಗಳ ಪ್ರದರ್ಶನ ನೀಡುತ್ತಿರುವ 25ಕ್ಕೂ ಹೆಚ್ಚು ವೃತ್ತಿ ಕಂಪನಿ ನಾಟಕಗಳ ಕಲಾವಿದರ ರಾಜ್ಯ ಮಟ್ಟದ ್ರ್ರಥಮ ಸಮ್ಮೇಳನ ಬಳ್ಳಾರಿಯಲ್ಲಿ ಇದೇ ಫೆಬ್ರವರಿ 25 ಮತ್ತು 26 ರಂದು ನಡೆಯಲಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಅವರು ಹೇಳಿದರು.
ದಿ.22ರಂದು ಬಳ್ಳಾರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ರಂಗಭೂಮಿಗೆ ಕಂಪನಿ ನಾಟಕಗಳೇ ಮೊದಲ ಹೆಜ್ಜೆಗಳು. ಅದ್ದೂರಿ ಸೆಟ್, ಆಕರ್ಷಕ ವೇಷ-ಭೂಷಣಗಳು, ನಟ-ನಟಿಯರ ಅದ್ಭುತ ಅಭಿನಯ, ಮೋಹಕ ಸಂಗೀತ, ತಂತ್ರಗಾರಿಕೆಯ ರಂಗ ಸಜ್ಜಿಕೆಯೇ ವೃತ್ತಿ ಕಂಪನಿ ನಾಟಕಗಳ ಸಂಪತ್ತು. ಪ್ರೇಕ್ಷಕ ಮಹಾಶಯರ ಮೆಚ್ಚುಗೆಯ ಚಪ್ಪಾಳೆ, ಉದಾರಮನದ ನೆರವುಗಳೇ ಇವರಿಗೆ ಪ್ರಶಸ್ತಿ-ಬಹುಮಾನಗಳು. ಇಂದಿನ ಸಿನಿಮಾ, ಟಿ.ವಿ, ಮೊಬೈಲುಗಳ ಮಾಧ್ಯಮಗಳ ಹಾವಳಿಯ ನಡುವೆಯೂ ಅಂದಿನ ರಂಗ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ನಿತ್ಯ ನಾಟಕಗಳೇ ಜೀವನಾಧಾರವಾಗಿರುವ ಕಂಪನಿ ಕಲಾವಿದರು ನಮ್ಮ ನಾಡಿನ ನಿಜವಾದ ಸಾಂಸ್ಕೃತಿಕ ವಾರಸುದಾರರು.
ಝಗಮಗಿಸುವ ಬಣ್ಣದ ಬೆಳಕಿನಲ್ಲಿ ಜನಮನ ರಂಜಿಸುವ ಈ ಕಲಾವಿದರ ಬದುಕು ಅತ್ಯಂತ ಕನಿಷ್ಟ. ಹತ್ತಿಪ್ಪತ್ತು ಕಲಾವಿದರ ಕುಟುಂಬಗಳನ್ನು ಸಾಕುತ್ತ ಕಂಪನಿ ಮುನ್ನಡೆಸುವ ಮಾಲಿಕರ ಬವಣೆಯೂ ಹೇಳತೀರದು. ಕಲೆಯೇ ಸರ್ವಸ್ವವೆಂದು ಬದುಕುತ್ತಿರುವ ಈ ಕಲಾವಿದರ, ಮಾಲಿಕರ ಬೆಂಬಲಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಗಳು ಸ್ಪಂದಿಸುತ್ತಿದ್ದರೂ ಇಬ್ಬರ ಬದುಕೂ ಸಂತಸಕರವಾಗಿಲ್ಲ. ಇದುವರೆವಿಗೂ ವೃತ್ತಿ ಕಂಪನಿ ನಾಟಕಗಳು ಕರ್ನಾಟಕ ನಾಟಕ ಅಕಾಡೆಮಿಯ ಪರಧಿಗೆ ಬಂದಿಲ್ಲದಿರುವುದನ್ನು ಮನಗಂಡು ಕರ್ನಾಟಕ ನಾಟಕ ಅಕಾಡೆಮಿ ಈ ವೃತ್ತಿ ಕಂಪನಿ ನಾಟಕಗಳ ಮಾಲೀಕರ, ಕಲಾವಿದರ, ನೇಪಥ್ಯದವರ ಒಂದು ಸಮ್ಮೇಳನವನ್ನು ಬಳ್ಳಾರಿಯಲ್ಲಿ ಇದೇ ಫೆಬ್ರವರಿ 25 ಮತ್ತು 26 ರಂದು ಸ್ಥಳೀಯರ ನೆರವಿನೊಂದಿಗೆ ಹಮ್ಮಿಕೊಂಡಿದೆ.
ಎರಡು ದಿನಗಳ ಈ ಸಮ್ಮೇಳನದಲ್ಲಿ ಕಂಪನಿ ನಾಟಕಗಳ ವೈಭವ ಪರಂಪರೆಯ ಕಿರುದರ್ಶನದ ಒಂದು ಪ್ರದರ್ಶಿನಿ, ಕಂಪನಿ ಕಲಾವಿದರು, ಮಾಲಿಕರು ಮತ್ತು ನೇಪಥ್ಯ ಕಲಾವಿದರ ವಿವಿಧ ಗೋಷ್ಠಿಗಳು, ಆಕರ್ಷಕ ರಂಗ ಶೋಭಾಯಾತ್ರೆ, ರಂಗ ತಜ್ಞರ ವಿಶೇಷ ಭಾಷಣ, ವಿವಿಧ ಕಂಪನಿ ಕಲಾವಿದರ ರಸಮಯ ರಂಗ ದೃಶ್ಯಾವಳಿಗಳು, ವಿವಿಧ ವಿನೋದಾವಳಿಯ ಹಂಬಲದ ರಂಗ ಬೆಳದಿಂಗಳು (ಕ್ಯಾಂಪ್ ಫೈರ್) ಹಾಗೂ ಪ್ರಥಮ ದಾಖಲೆ ಬರೆದಿರುವ ‘ಹೇಮರೆಡ್ಡಿ ಮಲ್ಲಮ್ಮ’ ನಾಟಕದ ವಿಶೇಷ ಪ್ರದರ್ಶನ ನಡೆಯಲಿವೆ.
ನಾಡಿನಾದ್ಯಂತ ಪ್ರಸಕ್ತ ಕ್ರಿಯಾಶೀಲವಾಗಿರುವ 25ಕ್ಕೂ ಹೆಚ್ಚು ವೃತ್ತಿ ಕಂಪನಿ ಮಾಲಿಕರು, ಮತ್ತವರ ಕಂಪನಿಗಳ ಕಲಾವಿದರು ಎರಡು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅಂದಾಜು 600ಕ್ಕೂ ಹೆಚ್ಚು ಪ್ರತಿನಿಧಿಗಳು ಎರಡು ದಿನಗಳ ತಮ್ಮ ಕಂಪನಿ ನಾಟಕ ಪ್ರದರ್ಶನಗಳನ್ನು ಬಂದ್ ಮಾಡಿಬರಲಿದ್ದು ಅವರಿಗೆ ಕಾರ್ಮಿಕ ಇಲಾಖೆಯ ಇ-ಶ್ರಮಕಾರ್ಡ್, ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿಗಾಗಿಯೂ ಪ್ರಯತ್ನ ನಡೆಸಲಾಗುತ್ತಿದೆ.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿಯೇ ಹೆಚ್ಚು ಪ್ರದರ್ಶನ ಕಾಣುತ್ತಿರುವ ಈ ವೃತ್ತಿ ಕಂಪನಿಗಳ ಗೇಟ್ಕೀಪರ್ನಿಂದ ಮೊದಲ್ಗೊಂಡು ಮಾಲಿಕರವರೆಗಿನ ಎಲ್ಲಾ ಕಲಾವಿದರ ್ರ್ರಥಮ ರಾಜ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲಿದ್ದು ನಗರದ ಸಹೃದಯಿ ಪ್ರೇಕ್ಷಕರು, ಹಿತೈಷಿಗಳು, ಅಭಿಮಾನಿಗಳು, ಸಾರ್ವಜನಿಕರು ವೃತ್ತಿ ಕಲಾವಿದರನ್ನು ಗೌರವಾದರಗಳಿಂದ ಸಂಪ್ರೀತಗೊಳಿಸಬೇಕೆಂದು ಪ್ರಭುದೇವ ಕಪ್ಪಗಲ್ಲು ಅವರು ವಿನಂತಿಸಿದರು.