ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಸ್ವಾತಂತ್ರ್ಯೊತ್ಸವ ಸಂಭ್ರಮ
ಹೊಸಪೇಟೆ(ವಿಜಯನಗರ) 16: ಕರ್ನಾಟಕ ರಾಜ್ಯದ 31ನೇ ನೂತನ ಜಿಲ್ಲೆಯಾಗಿ ಹೊರಹೊಮ್ಮಿದ ವಿಜಯನಗರ ಜಿಲ್ಲೆಯಲ್ಲಿ ಮೊದಲ ಮತ್ತು 75ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಪರಿಸರ,ಜೀವಿಶಾಸ್ತ್ರ,ಪ್ರವಾಸೋದ್ಯಮ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಮನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾನುವಾರ ನೆರವೇರಿಸಿದರು.
ಫಥಸಂಚಲನ ವೀಕ್ಷಿಸಿ ಗೌರವ ಸ್ವೀಕರಿಸಿ ನಂತರ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಸಚಿವ ಆನಂದಸಿಂಗ್ ಅವರು ನೂತನ ಜಿಲ್ಲೆಯ ಮೊದಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ‘ಆನಂದ’ದಿಂದ ಮಾಡುತ್ತಿದ್ದೇನೆ. ಇದು ನನ್ನ ಸೌಭಾಗ್ಯವೇ ಸರಿ ಅದಕ್ಕೆ ಕಾರಣ ನೀವುಗಳು, ತಾವೆಲ್ಲರೂ ತೋರಿಸಿದ ಪ್ರೀತಿ, ವಿಶ್ವಾಸ, ಬೆಂಬಲ-ಸಹಕಾರಗಳೇ ಈ ಜಿಲ್ಲೆಯಾಗಲು ಸಾಧ್ಯವಾಗಿಸಿತು. ಹಮ್ ಸಾಥ್ ಸಾಥ್ ಚಲೇಂಗೆ; ಸಾಥ್ ಸಾಥ್ ಜೀಯೆಂಗೇ! ಎಂದರು. ಸ್ವಾತಂತ್ರೋತ್ಸವದ ‘ಅಜಾದಿ ಕಾ ಅಮೃತ ಮಹೋತ್ಸವ ’ದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಹಾಗೂ ಅದು ನಮ್ಮ ಆದ್ಯ ಕರ್ತವ್ಯವೂ ಆಗಿದೆ ಎಂದರು.
ದೇಶದ ಸ್ವಾತಂತ್ರ್ಯ ಹೊರಾಟದಲ್ಲಿ ವಿಜಯನಗರ ಕೊಡುಗೆಯೂ ಅಪಾರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಜಯನಗರ ಜಿಲ್ಲೆಯ ಕೊಡುಗೆಯೂ ಅಪಾರವಾಗಿದೆ ಎಂದು ಹೇಳಿದ ಸಚಿವ ಸಿಂಗ್ ಅವರು ಈ ಭಾಗದ ನಮ್ಮ ಇಂದಿನ ವಿಜಯನಗರದ ಅಂದಿನ ಹೊಸಪೇಟೆಯಿಂದಲೂ ಭಾಗವಹಿಸಿದ ಮಹಾಚೇತನಗಳಾದ ಬೆಲ್ಲದ ಚೆನ್ನಪ್ಪ, ಡಾ.ಆರ್.ನಾಗನಗೌಡ, ಪತ್ತಿಕೊಂಡ ಗುರುನಾಥಪ್ಪ, ಸೀರೆಗಣಪತಿ, ಅಸುಂಡಿ ತಿರುಮಲರಾವ್, ವೈ.ಡಿ.ಕೃಷ್ಣಮೂರ್ತಿ, ಸಜ್ಜದ ವೀರಣ್ಣ,ಹಲ್ದಾಳ ಕೊಟ್ರ್ಪ, ಹೆಚ್.ವಿ.ದೇಸಾಯಿ, ಎನ್.ಪಿ.ರಾಘವೇಂದ್ರರಾವ್, ಹೆಚ್.ಎಂ.ಬಸಯ್ಯ, ವರ್ಧಮಾನಜೈನ್,ಜಿ.ನಾರಾಯಣಸ್ವಾಮಿ, ಕೆ.ಸೀತಾರಾಮ್ರಾವ, ಎ.ಕೇಶವಚಾರ್, ಹಿಂಡಿಸಿದ್ದಪ್ಪ, ವಡಿಗೇರಿ ಲಿಂಗಣ್ಣ, ಶಿವ ದೇಸಾಯಿ, ಕೋರಿಶೆಟ್ಟಿ ಜಂಬಣ್ಣ, ಅನಂತಾಚಾರ್.ಬಿ., ತಟ್ಟಿ ಶ್ರೀನಿವಾಸಾಚಾರ್, ಪಿ.ವೆಂಕೋಬಶೆಟ್ಟಿ ಇನ್ನೀತರರನ್ನು ನಾವಿಂದು ನೆನೆಯಬೇಕಾಗಿದೆ ಎಂದರು.
ವಿಜಯನಗರ ಜಿಲ್ಲೆಯ ಹೋರಾಟ ನೆನೆದ ಸಚಿವ ಸಿಂಗ್: ವಿಜಯನಗರ ಜಿಲ್ಲೆಗಾಗಿ ಇದುವರೆಗೆ ನಡೆಸಿದ ಹೋರಾಟ ಮತ್ತು ಹೋರಾಟಗಾರರು ಮತ್ತು ನಡೆಸಿದ ಪ್ರಯತ್ನಗಳನ್ನು ಸಚಿವ ಸಿಂಗ್ ಅವರು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡರು.
ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡಬೇಕೆಂಬ ಹೋರಾಟದ ಪಯಣ ಪ್ರಥಮ ಬಾರಿಗೆ ಆರಂಭವಾಗಿದ್ದು ಹೊಸಪೇಟೆಯ ರಾಮ ಟಾಕೀಸ್ ಬಳಿಯ ಗಂಗಾಮತ ಸಮುದಾಯ ಭವನದಿಂದ 2005ರಲ್ಲಿ ಅಂದಿನ ಶಾಸಕ ರತನ್ ಸಿಂಗ್ ಅವರು ಇದೇ ಭವನದಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಗೆ ಚಾಲನೆ ಕೊಟ್ಟಿದ್ದರು. ನಂತರ ಅದು ಹೋರಾಟದ ರೂಪುರೇಷೆ, ಸಭೆ, ಸಮಾಲೋಚನೆಗಳ ಶಕ್ತಿ ಕೇಂದ್ರವಾಗಿ ಬದಲಾಯಿತು. ಜಿಲ್ಲಾ ರಚನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಮನವಿ ಪತ್ರ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಿತ್ತು.
ಇದರ ಫಲವಾಗಿ ಎಲ್ಲಾ ನಾಯಕರುಗಳ ಸತತ ಪರಿಶ್ರಮದಿಂದ ರಾಜ್ಯ ಸರ್ಕಾರ 2020ರ ಡಿಸೆಂಬರ್ 14ರಂದು ನೂತನ ವಿಜಯನಗರ ಜಿಲ್ಲಾ ಉದಯಕ್ಕೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಯಿತು. ಬಂದಿರುವ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣಿಸಿ, 2021ರ ಫೆಬ್ರವರಿ 8ರಂದು ನೂತನ ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರಡಿಸಿ, ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ಈ ನಮ್ಮ ವಿಜಯನಗರ ಜಿಲ್ಲೆಯು ಉದಯಗೊಂಡಿತು. ಇದಕ್ಕೆ ನಾನು ಬಿ.ಎಸ್. ಯಡಿಯೂರ್ಪರವರಿಗೆ ತುಂಬುಹೃದಯದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರ್ಪ, ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ತಹಸೀಲ್ದಾರ್ ವಿಶ್ವನಾಥ, ತಾಪಂ ಇಒ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.