ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬೇಕಿದೆ ಗ್ಯಾರಂಟಿ ಮೂಲದ ಹಣಕಾಸಿನ ಬೆಂಬಲ
ಕಾಂಗ್ರೇಸ್ ಪಕ್ಷ ಇತ್ತೀಚಿನ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ, ಮತ್ತು ನಾರಿ ಶಕ್ತಿ ಎಂಬ ಐದು ಖಾತರಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಅನುಷ್ಠಗೋಳಿಸುತ್ತಿರುವ ಕ್ರಮವು ವ್ಯಾಪಕವಾದ ಚರ್ಚೆಗೆ ಕಾರಣವಾಗಿದೆ. ಈ ಯೋಜನೆಗಳ ಫಲಾನುಭವಿಗಳನ್ನು ಹೇಗೆ ಗುರುತಿಸುವುದು, ಇದಕ್ಕೆ ತಗಲುವ ಅಂದಾಜು ವೆಚ್ಚ ರೂ. 50 ಸಾವಿರ ಕೋಠಿ ಎಲ್ಲಿಂದ ಸಂಗ್ರಹಣೆ ಮಾಡುವುದು ಮತ್ತು ಇದರಿಂದ ರಾಜ್ಯದ ಹಣಕಾಸಿನ ಸ್ಥಿತಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಮುಂತಾದ ವಿಷಯಗಳ ಕುರಿತಾಗಿ ಚರ್ಚಿಸಲಾಗುತ್ತಿದೆ.
ನೂತನ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ತನ್ನ ಜನತಗೆ ವಿಷೇಶವಾಗಿ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸಲು ಐದು ಖಾತರಿ ಯೋಜನೆಗಳನ್ನು ಜಾರಿಗೆ ತಂದಿರುವುದ ರಾಜಕೀಯವಾಗಿ ಉತ್ತಮ ಕ್ರಮವಾದರೂ, ಅವುಗಳಿಗೆ ಸೂಕ್ತವಾದ ಹಣಕಾಸಿನ ನೆರವು ಮತ್ತು ಬೇಕಾದ ಸಂಪನ್ಮೂಲಗಳನ್ನು ಸಂಗ್ರಹಿಸುವ ಕ್ರಮ ಮತ್ತು ಇವು ದೀರ್ಘಾವಧಿಯಲ್ಲಿ ಜನರ ದುಡಿಯುವ ಇಚ್ಚಾಶಕ್ತಿಯ ಮೇಲಾಗು ದುಸ್ಪಪರಿಣಾಮಗಳ ಕುರಿತು ವ್ಯಾಪಕವಾದ ತಜರ ಚರ್ಚೆಯಾಗದೇ ತ್ವರಿತವಾಗಿ ಜಾರಿಮಾಡಿರುವುದು ಅನೇಕ ಜನರ ಅತೃಪ್ತಿಗೆ ಕಾರಣವಾಗಿದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ಈ ಯೋಜನೆಗಳು ಹೆಚ್ಚಾಗಿ ಮಹಿಳಾಪರವಾಗಿದ್ದು, ಅವರ ಶಿಕ್ಷಣ, ಆರ್ಥಿಕ ಸಬಲೀಕರ, ಸಾಮಾಜಿಕ ಯೋಗಕ್ಷೇಮ ಸೇರಿದಂತೆ ಜನರ ಜೀವನದ ವಿವಿಧ ಆಯಾಮಗಳನ್ನು ಉತ್ತಮ ಪಡಿಸುವ ಗುರಿಯನ್ನು ಹೊಂದಿವೆ. ಆದರೆ ಇವು ಆಡಳಿತಾತ್ಮಕ ಮತ್ತು ಹಣಕಾಸಿಗೆ ಸಂಬಂಧಿಸಿದ ಸಮಸ್ಯಗಳಿಂದ ಮುಕ್ತವಾಗಿಲ್ಲ.
ಗೃಹ ಜ್ಯೋತಿ: ಈ ಯೋಜನೆಯಡಿಯಲ್ಲಿ ಒಂದು ಕುಟುಂಬವು ಒಂದು ವರ್ಷದವಧಿಯಲ್ಲಿ ತಾನು ಬಳಸಿದ ಸರಾಸರಿ ವಿದ್ಯುತಿನ ಪ್ರಮಾಣದ ಮೇಲೆ ಮತ್ತೆ ಅದರ ಶೇ. 10ರಷ್ಟು ಹೆಚ್ಚುವರಿಯಾಗಿ ಪ್ರತಿ ಮನೆಗೆ ಗರಿಷ್ಠ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸಲು ಘೋಷಣೆಮಾಡಲಾಗಿದೆ. ಈ ಯೋಜನೆಯು ಕುಟುಂಬದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ ಅವರ ಜೀವನದ ಗುಣಮಟ್ಟ ಸುಧಾರಿಸಲ್ಪಡುತ್ತದೆ.
ಕುಟುಂಬಗಳು ದಿನನಿತ್ಯ ಬಳಸುವ ವಿದ್ಯುತ್ ಉಚಿತವಾಗಿ ಲಭ್ಯವಾಗುವುದರಿಂದ ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಯ ಮೇಲೆ ಧನಾತ್ಮಕವಾದ ಪರಿಣಾಮ ಬೀರಬಹುದು. ಉಚಿತವಾಗಿ ವಿದ್ಯುತ್ ಒದಗಿಸುವದರ ಮೂಲಕ ಕಡಿಮೆ ಆದಾಯದ ಕುಟುಂಬಗಳು ತಮ್ಮ ಮಾಸಿಕ ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಇತರೆ ಅಗತ್ಯತೆಗಳಿಗಾಗಿ ಹೆಚ್ಚಿನ ಹಣವನ್ನು ನಿಯೋಜಿಸಲು ಈ ಯೋಜನೆಯು ಸಹಾಯ ಮಾಡುತ್ತದೆ. ಇದರಿಂದ ಈ ಕುಟುಂಬಗಳ ಒಟ್ಟು ಬೇಡಿಕೆಯ ವೆಚ್ಚ ಅಧಿಕಗೊಂಡು ರಾಜ್ಯದ ಒಟ್ಟು ಸ್ವದೇಶಿ ಉತ್ಪನ್ನ ಅಧಿಕವಾಗುವ ಸಾದ್ಯತೆ ಇದೆ. ಆದರೆ ಈ ಯೋಜನೆಗಳ ಅನುಷ್ಠಾನದಿಂದ ಸರ್ಕಾರವು ಕೆಲವೊಂದು ಆರ್ಥಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಸರ್ಕಾರದ ಮೇಲೆ ಆರ್ಥಿಕ ಹೊರೆ: ಗೃಹ ಜ್ಯೋತಿ ಯೋಜನೆಯನ್ನು ಕಾರ್ಯಗತಗೊಳಿಸುವುದರಿಂದ ಸರ್ಕಾರಕ್ಕೆ ಗಮನಾರ್ಹವಾದ ಹಣಕಾಸಿನ ಹೊರೆಯಾಗುತ್ತದೆ. ಇದರಿಂದಾಗಿ ಅತೀ ಅವಶ್ಯಕ ಉತ್ಪಾದಕ ವೆಚ್ಚದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಬಹುದು. ಅಲ್ಲದೇ ಹಣದ ಸಮರ್ಥನೀಯ ಬಳಕೆಯ ವಿಷಯದಲ್ಲಿಯೂ ಅನೇಕ ಸವಾಲುಗಳಿಗೆ ಎಡೆಮಾಡಿಕೊಡುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಉತ್ಪಾದನೆಯ ಮೇಲೆ ದುಸ್ಪರಿಣಾಮ ಬೀರಬಹುದು.
ದುರ್ಬಳಕೆ ಮತ್ತು ಮಿತಿಮೀರಿದ ಬಳಕೆ: ಉಚಿತವಾಗಿ ಪೂರೈಕೆಯಾಗುವ ವಿದ್ಯುಚ್ಛಕ್ತಿಯ ಮೇಲೆ ಸರಿಯಾದ ಮೇಲ್ವಿಚಾರಣಾ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳು ಇಲ್ಲದಿದ್ದರೆ ಇದರ ದುರುಪಯೋಗ ಅಥವಾ ಮಿತಿಮೀರಿದ ಬಳಕೆಗೆ ಅವಕಾಶಮಾಡಿಕೊಡುತ್ತದೆ. ಅಲ್ಲದೇ ವಿದ್ಯುಚ್ಛಕ್ತಿಯ ಬಳಕೆಯನ್ನು ಮಿತವ್ಯಯಗೊಳಿಸಲು ಯಾವುದೇ ಉತ್ತೇಜನ ಕ್ರಮಗಳು ಇಲ್ಲದಂತಾಗುತ್ತವೆ. ಹೀಗಾಗಿ ಬಹಳಷ್ಟು ವಿದ್ಯುಚ್ಛಕ್ತಿಯು ನಾಶವಾಗುವ ಸಾದ್ಯತೆ ಇದೆ.
ಗೃಹ ಲಕ್ಷ್ಮಿ: ಈ ಯೋಜನೆಯಡಿಯಲ್ಲಿ ಕುಟುಂಬದ ಪ್ರತಿ ಮಹಿಳೆಗೆ ಪ್ರತಿ ತಿಂಗಳ ರೂ.2000 ನೇರ ಆರ್ಥಿಕ ನೆರವು ನೀಡುವುದರಿಂದ ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಸಾಧಿಸುವುದರ ಜೊತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಾದ್ಯವಾಗಬಹುದು. ಈ ಅನುದಾನವು ಅವರ ಬಡತನ ನಿರ್ಮೂಲನೆಯ ಜೊತೆಗೆ ಮಹಿಳಾ ನೇತೃತ್ವದ ಕುಟುಂಬಗಳ ಆರ್ಥಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಅವರ ಮೂಲಭೂತ ಅಗತ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಯೋಗಕ್ಷೇಮದ ಚಟುವಟಿಕೆಗಳ ಮೇಲೆ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಈ ಯೋಜನೆಯಿಂದ ಆರ್ಥಿಕ ಪರಿಸ್ಥಿತಿ ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು.
ಸರ್ಕಾರದ ಅವಲಂಬನೆ: ಈ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ಶಾಶ್ವತ ಪರಿಹಾರಗಳ ಮೇಲೆ ಕೇಂದ್ರೀಕರಿಸುವ ಬದಲು ಸರ್ಕಾರದ ಹಣಕಾಸಿನ ನೆರವಿನ ಮೇಲೆ ಅನಿವಾರ್ಯದ ಅವಲಂಬನೆಗೆ ಎಡೆಮಾಡಿಕೊಡುತ್ತದೆ.
ಆಯ್ಕೆಯ ಮಾನದಂಡಗಳು ಮತ್ತು ಅನುಷ್ಠಾನದ ಸವಾಲುಗಳು: ಮಹಿಳಾ ಕುಟುಂಬದ ಮುಖ್ಯಸ್ಥರನ್ನು ಗುರುತಿಸಲು ನ್ಯಾಯೋಚಿತ ಮತ್ತು ಪಾರದರ್ಶಕ ಆಯ್ಕೆಯ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವುದು ಮತ್ತು ಹಣಕಾಸಿನ ಸಮರ್ಥ ವಿತರಣೆಯನ್ನು ಖಾತ್ರಿಪಡಿಸುವಲ್ಲಿ ಅನೇಕ ಆಡಳಿತಾತ್ಮಕ ಸಮಸ್ಯಗಳಿಗೆ ಹುಟ್ಟುಹಾಕುತ್ತದೆ. ಇದರ ಬದಲಾಗಿ ಬಡ ಮಹಿಳಾ ಕೌಶಲ್ಯವನ್ನು ವೃದ್ಧಿಸಿ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೆ ಬಡ ಮಹಿಳೆಯರ ಆರ್ಥಿಕ ಸಬಲೀಕರಣ ಶಾಶ್ವತಗೊಳ್ಳುತ್ತಿತ್ತು.
ಅನ್ನ ಭಾಗ್ಯ: ಈ ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಣೆಮಾಡುವುದಾಗಿದೆ. ಬಡತನ ರೇಖೆಗಿಂತ ಕೆಳಗಿರುವ (ಃಕಐ) ಕುಟುಂಬಗಳ ಹಸಿವು ಪರಿಹರಿಸಿ ಆಹಾರ ಭದ್ರತೆಯನ್ನು ಒದಗಿಸಲು ಇದು ತುಂಬಾ ಸಹಾಯಕಾರಿಯಾಗಿದೆ. ಇದು ಪ್ರತಿ ತಿಂಗಳ ಅಕ್ಕಿಯನ್ನು ಪೂರೈಸುವುದರ ಮೂಲಕ ಅವರ ಅವಶ್ಯಕ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಆಹಾರದ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಈ ಯೋಜನೆಯು ಃಕಐ ಕಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಇತರೆ ಅಗತ್ಯತೆಗಳಿಗಾಗಿ ಹಣವನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯಿಂದ ಕೆಲವು ಆಹಾರ ಮತ್ತು ಪೌಷ್ಟಿಕಾಂಶದ ಸಮಸ್ಯೆಗಳು ಪರಿಹಾರವಾದರೆ, ಇದು ಇನ್ನು ಕೆಲವು ಸಮಸ್ಯಗಳ ಉಗಮಕ್ಕೆ ನಾಂದಿಯಾಗಬಹುದು.
ಸೀಮಿತ ಪೌಷ್ಟಿಕಾಂಶದ ಪೂರೈಕೆ: ಇದು ಕೇವಲ ಅಕ್ಕಿ ವಿತರಣೆಯ ಮೇಲೆ ಕೇಂದ್ರೀಕರಿಸುವುದರಿಂದ ಸಮತೋಲಿತ ಆಹಾರದ ಅಗತ್ಯವನ್ನು ಪರಿಹರಿಸಲಾಗುವುದಿಲ್ಲ್ಲ. ಈ ಯೋಜನೆಯಡಿಯಲ್ಲಿ ವೈವಿಧ್ಯಮಯ ಪೌಷ್ಠಿಕಾಂಶದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡದ ಕಾರಣ ಆರೋಗ್ಯಕರ ಮಾನವ ಅಭಿವೃದ್ಧಿಯನ್ನು ಸಾಧಿಸಲು ಅಸಾಧ್ಯ. ಅನೇಕ ಬಡ ಕುಟುಂಬದ ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಬಳಲುವಂತಾಗಬಹುದು. ಅಲ್ಲದೇ, ಈ ಆಹಾರ ಧಾನ್ಯಗಳ ಪೂರೈಕೆಯಲ್ಲಿನ ಸೋರಿಕೆಯನ್ನು ತಪ್ಪಿಸಲು ಮತ್ತು ಉದ್ದೇಶಿತ ಫಲಾನುಭವಿಗಳಿಗೆ ಮಂಜೂರು ಮಾಡಿದ ಅಕ್ಕಿಯನ್ನು ಖಚಿತವಾಗಿ ಪಡೆಯುವಲ್ಲಿ ಸಮರ್ಥ ವಿತರಣೆ ಮತ್ತು ಮೇಲ್ವೀಚಾರಣಾ ಕಾರ್ಯವಿಧಾನಗಳು ಅನುಷ್ಠಾನದಲ್ಲಿರಬೇಕು. ಇಲ್ಲವಾದಲ್ಲಿ ನಿಜವಾದ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರಕದು.
ಕರ್ನಾಟಕ ಯುವ ನಿಧಿ ಯೋಜನೆ: ಈ ಯೋಜನೆಯ ಪ್ರಾಥಮಿಕ ಉದ್ದೇಶವು ರಾಜ್ಯದ ಅನೇಕ ವಿದ್ಯಾವಂತ ಯುವಕರಿಗೆ ನಿರುದ್ಯೋಗ ಭತೈಯನ್ನು ಒದಗಿಸುವುದಾಗಿದೆ. ಈ ಉಪಕ್ರಮವು ನಿರುದ್ಯೋಗಿ ಯುವಕರು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ತಾತ್ಕಾಲಿವಾಗಿ ಹೋಗಲಾಡಿಸಲು ಮತ್ತು ಅವರು ಉದ್ಯೋಗವನ್ನು ಭದ್ರಪಡಿಸುವವರೆಗೆ ಆರ್ಥಿಕವಾಗಿ ಅವರನ್ನು ಬೆಂಬಲಿಸುವ ಗುರಿಯನ್ನು ಇದು ಹೊಂದಿದೆ. ಇದು ಹಣಕಾಸಿನ ಹೊರೆಯನ್ನು ನಿವಾರಿಸಲು ಮತ್ತು ನಿರುದ್ಯೋಗಿಗಳಿಗೆ ಸುರಕ್ಷತಾ ಜಾಲವನ್ನು ಒದಗಿಸಲು ಸಹಾಯ ಮಾಡುತ್ತದೆ.
ಕೌಶಲ್ಯ ಅಭಿವೃದ್ಧಿ: ಈ ಯೋಜನೆಯು ನಿರುದ್ಯೋಗಿ ಯುವಕರನ್ನು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಅಥವಾ ವೃತ್ತಿಪರ ತರಬೇತಿ ಕೋರ್ಸಗಳನ್ನು ಪಡೆದು ತಮ್ಮ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಪ್ರೋತ್ಸಾಹಿಸುತ್ತದೆ. ಇದು ಹಣಕಾಸಿನ ನೆರವು ನೀಡುವುದರ ಮೂಲಕ ಯುವಕರನ್ನು ತಮ್ಮ ವೃತ್ತಿಪರ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದರಿಂದ ಅವರ ಕೌಶಲ್ಯ ಅಭಿವೃದ್ಧಿಯಾಗಿ ಅವರಿಗೆ ಸೂಕ್ತವಾದ ಉದ್ಯೋಗ ಹುಡುಕುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಆರ್ಥಿಕ ಬೆಂಬಲ: ಈ ಯೋಜನೆಯು ಕರ್ನಾಟಕದ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಅವರು ಉದ್ಯೋಗಕ್ಕಾಗಿ ಹುಡುಕುತ್ತಿರುವಾಗ ಅವರ ಮೂಲಭೂತ ಅಗತ್ಯಗಳಾದ ವಸತಿ, ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ಆತಂಕವನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸುತ್ತದೆ ಮತ್ತು ಫಲಾನುಭವಿಗಳಲ್ಲಿ ಭದ್ರತೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಮೂಡಿಸುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಅನೇಕ ನಕರಾತ್ಮಕ ಪರಿಣಾಮಗಳಿಗೆ ಎಡೆಮಾಡಿಕೊತ್ತದೆ.
ಸೀಮಿತ ವ್ಯಾಪ್ತಿ: ವಿದ್ಯಾವಂತ ಯುವಕರಿಗೆ ನಿರುದ್ಯೋಗ ಭತ್ಯಯನ್ನು ಒದಗಿಸುವ ಈ ಯೋಜನೆಯ ಉದ್ದೇಶವು “ವಿದ್ಯಾವಂತ” ಎಂದು ವರ್ಗೀಕರಿಸದ ನಿರುದ್ಯೋಗಿ ಜನಸಂಖ್ಯೆಯ ಗಮನಾರ್ಹ ಭಾಗ ಹೊರಗಿಟ್ಟಂತಾಗಿದೆ. ಈ ಕಿರಿದಾದ ಅರ್ಹತೆಯ ಮಾನದಂಡವು ಹಣಕಾಸಿನ ನೆರವಿನ ಅಗತ್ಯವಿರುವ ನಿರುದ್ಯೋಗಿ ವ್ಯಕ್ತಿಗಳನ್ನು ಗುರುತಿಸುವಲ್ಲಿ ಎಡವಿದಂತೆ ಕಾಣಿಸುತ್ತದೆ.
ಕೌಶಲ್ಯ ವರ್ಧನೆಗೆ ನಿರ್ಲಕ್ಷ್ಯ: ಈ ಯೋಜನೆಯು ನಿರುದ್ಯೋಗಿ ಯುವಕರನ್ನು ಬೆಂಬಲಿಸುವ ಗುರಿಯನ್ನು ಹೊಂದಿದ್ದರೂ, ಇದು ಕೌಶಲ್ಯ ವರ್ಧನೆ ಅಥವಾ ಉದ್ಯೋಗ ತರಬೇತಿ ಕಾರ್ಯಕ್ರಮಗಳಿಗೆ ಸಾಕಷ್ಟು ಒತ್ತು ನೀಡದಿರಬಹುದು. ನಿರುದ್ಯೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಕೇವಲ ಹಣಕಾಸಿನ ನೆರವು ನೀಡಿದರೆ ಸಾಕಾಗುವುದಿಲ್ಲ. ಇದರ ಬದಲಾಗಿ ಉದ್ದೇಶಿತ ಫಲಾನುಭವಿಗಳ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿಗೆ ಸಹಾಯ ಮಾಡುವ ನೂತನ ಕ್ರಮಗಳನ್ನು ಘೋಷಣೆ ಮಾಡಿದ್ದರೆ ಈ ಯೋಜನೆಯು ಹೆಚ್ಚು ಪ್ರಭಾವಶಾಲಿಯಾಗಬಹುದಿತ್ತು. ಅಲ್ಲದೇ ಇದು ದೀರ್ಘಾವಧಿಯಲ್ಲಿ ನಿರುದ್ಯೋಗವನ್ನು ಇನ್ನಷ್ಠು ಪೋಷಣೆ ಮಾಡಬಹುದು, ಅಲ್ಲದೇ ಉದ್ಯೋಗ ಹುಡುಕುವ ಅನಿವಾರ್ಯತೆ ಕಡಿಮೆಗೊಳಿಸಬಹುದು.
ನಾರಿ ಶಕ್ತಿ: ಈ ಯೋಜನೆಯು ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಮೂಲಕ ಮಹಿಳಾ ಸಬಲೀಕರಣಗೊಳಿಸುವ ಸಕಾರಾತ್ಮಕ ಹೆಜ್ಜೆಯಾಗಿದೆ. ಇದು ಮಹಿಳೆಯರ ಚಲನಶೀಲತೆ, ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಇತರೆ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆರ್ಥಿಕ ಪರಿಹಾರ: ತಮ್ಮ ದೈನಂದಿನ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಅನೇಕ ಮಹಿಳೆಯರ ಮೇಲಿನ ಆರ್ಥಿಕ ಹೊರೆಯನ್ನು ಇದು ಕಡಿಮೆ ಮಾಡುತ್ತದೆ. ಗ್ರಾಮೀಣದಿಂದ ನಗರ ಪ್ರದೇಶಗಳಿಗೆ ಮತ್ತು ನಗರ ಪ್ರದೇಶಗಳಲ್ಲಿ ದಿನನಿತ್ಯ ಕೂಲಿ ಕೆಲಸಕ್ಕಾಗಿ ಅಲೆದಾಡುವ ಅನೇಕ ಬಡ ಮಹಿಳೆಯರಿಗೆ ಇದು ಉಪಯುಕ್ತವಾಗಲಿದೆ. ಇತರೆ ಪ್ರಮುಖ ವೆಚ್ಚಗಳಿಗಾಗಿ ಹಣವನ್ನು ಉಳಿಸಲು ಇದು ಅನುವು ಮಾಡಿಕೊಡುವುದರ ಮೂಲಕ ಅವರ ಆರ್ಥಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ.
ಸುರಕ್ಷತೆ ಮತ್ತು ಭದ್ರತೆ: ಈ ಯೋಜನೆಯು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹೆಚ್ಚಿನ ಮಹಿಳೆಯರನ್ನು ಪ್ರೋತ್ಸಾಹಿಸುವುದರ ಮೂಲಕ ಸುರಕ್ಷಿತ ಪ್ರಯಾಣದ ವಾತಾವರಣ ನಿರ್ಮಿಸುತ್ತದೆ. ಇದು ಮಹಿಳಾ ಪ್ರಯಾಣಿಕರ ಕಿರುಕುಳದ ನಿದರ್ಶನಳನ್ನು ತೀವೃವಾಗಿ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಸುವಾಗ ಮಹುಳೆಯರು ಹೆಚ್ಚು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.
ಸಾಮಾಜಿಕ ಸೇರೆ್ಡ: ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವುದರ ಮೂಲಕ ನಾರಿ ಶಕ್ತಿ ಉಪಕ್ರಮವು ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಮಾನತೆಯನ್ನು ಸಾಧಿಸಲು ಅನುಕೂಲವಾಗುತ್ತದೆ. ಇದು ಎಲ್ಲಾ ವರ್ಗದ ಮಹಿಳೆಯರಿಗೆ ಅವರ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಪಡೆಯಲು ಮತ್ತು ಸಮಾಜ ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯಿಂದ ಅನೇಕ ಬಡ ಮಹಿಳೆಯರಿಗೆ ಉಪಯೋಗವಾದರೂ ಇದು ಇತರೆ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯಗಳಿಗೆ ಎಡೆಮಾಡಿಕೊಡುತ್ತದೆ.
ಲಿಂಗ-ಆಧಾರಿತ ತಾರತಮ್ಯ: ಮಹಿಳೆಯರಿಗೆ ಪ್ರತ್ಯೇಕವಾಗಿ ಉಚಿತ ಪ್ರಯಾಣವನ್ನು ಒದಗಿಸುವುದು ಲಿಂಗ ಆಧಾರಿತ ತಾರತಮ್ಯದ ಒಂದು ರೂಪವೆಂದು ಅನೇಕ ವಿಮರ್ಶಕರ ಅಭಿಪ್ರಾಯವಾಗಿದೆ. ಇದು ಲಿಂಗ ಸ್ಟೀರಿಯೊಟೈಪ್ಗಳನ್ನು ಬಲಪಡಿಸುತ್ತದೆ ಮತ್ತು ಎಲ್ಲರಿಗೂ ಸಾರ್ವಜನಿಕ ಸಾರಿಗೆಗೆ ಸಮಾನ ಪ್ರವೇಶದ ಹಕ್ಕಿನ ಸಮಸ್ಯೆಯನ್ನು ಪರಿಹರಿಸಲು ವಿಪಲವಾಗಿದೆ ಎಂದು ಕೆಲವರ ಅಭಿಪ್ರಾಯವಾಗಿದೆೆ.
ಪ್ರಯಾಣ ದುರುಪಯೋಗ: ಉಚಿತ ಬಸ್ ಪ್ರಯಾಣ ಯೋಜನೆಯು ದುರುಪಯೋಗವಾಗುವ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಮಹಿಳೆಯರು ನಿಜವಾದ ಅಗತ್ಯವಿಲ್ಲ್ಲದೆಯೇ ಉಚಿತ ಬಸ್ ಪ್ರಯಾಣದ ಲಾಭವನ್ನು ಪಡೆದುಕೊಳ್ಳಬಹುದು. ಇದು ಬಸ್ ಪ್ರಯಾಣದಲ್ಲಿ ವಿನಕಾರಣ ಜನದಟ್ಟಣೆಗೆ ಕಾರಣವಾಗುತ್ತದೆ. ಇದರಿಂದ ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ ತನ್ನ ದಿನನಿತ್ಯದ ಕಾರ್ಯಾಚರಣೆಯ ವೆಚ್ಚ ವ್ಯಾಪಕವಾಗಿ ಹೆಚ್ಚಾಗಲಿದೆ.
ಒಟ್ಟಾರೆಯಾಗಿ, ಸಿದ್ದರಾಮಯ್ಯನವರ ಆಡಳಿತದಲ್ಲಿ ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಈ ಖಾತರಿ ಯೋಜನೆಗಳು ಸಮಾಜದ ದುರ್ಬಲ ವರ್ಗಗದವರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವು ನೀಡುವ ಗುರಿಗಳನ್ನು ಹೊಂದಿವೆ. ಇವು ಮುಖ್ಯವಾಗಿ ಮಹಿಳಾ ಸಬಲೀಕರಣ ಮತ್ತು ಕರ್ನಾಟಕ ಯುವ ನಿಧಿ ಯೋಜನೆಯ ಜೊತೆಗೆ ಉದ್ಯೋಗವಕಾಶಗಳನ್ನು ಸೃಷ್ಠಿಸುವುದರ ಮೂಲಕ ಆರ್ಥಿಕ ಬೆಂಬಲ, ಮಹಿಳಾ ಉದ್ಯಮಶೀಲತೆ, ಸ್ವಾವಲಂಬನೆ ಮತ್ತು ಬಡ ಕುಟುಂಬಗಳ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಉದ್ದೇಶವನ್ನು ಹೊಂದಿವೆ.
ಆದರೆ ಈ ಖಾತರಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಆದಾಯ ಖಾತೆ ವೆಚ್ಚ ಇನ್ನಷ್ಟು ಅಧಿಕಗೊಂಡು ರಾಜ್ಯದ ಹಣಕಾಸಿನ ಸ್ಥಿತಿ ಕ್ರಮೇಣವಾಗಿ ಕ್ಷೀಣಿಸಬಹುದು. ಪ್ರಸ್ತುತ ಹಣಕಾಸಿನ ವರ್ಷದಲ್ಲಿ ರೂ.402 ಕೋಠಿಯಷ್ಟು ‘ಆದಾಯ ಮಿಗುತೆ’ ಆಗಲಿದೆ ಎಂದು ರಾಜ್ಯ ಮುಂಗಡ ಪತ್ರ ಅಂದಾಜಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಗ್ಯಾರಂಟಿ ಯೋಜೆಗಳ ಅನುಷ್ಠಾನದಿಂದ ಆದಾಯ ಕೊರತೆಯ ಸಮಸ್ಯ ಅಷ್ಟೋಂದು ಉಲ್ಬಣಗೊಳ್ಳದಿರಬಹುದು. ಆದರೆ ಇವುಗಳಿಗೆ ತಗಲುವ ವೆಚ್ಚವನ್ನು ಭರಿಸಲಿಕ್ಕೆ ಮುಂಬರುವ ದಿನಿಮಾನಗಳಲ್ಲಿ ಸರ್ಕಾರವು ತೆರಿಗೆ ದರ ಅಥವಾ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ. ಅಥವಾ ಸರ್ಕಾರ ಪೂರೈಕೆ ಮಾಡುವ ಮೂಲ ಸೇವೆಗಳ ಮೇಲಿನ ಶುಲ್ಕಗಳನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಸಾಮನ್ಯ ಮತ್ತು ಮಧ್ಯಮ ವರ್ಗದ ಜನರ ಜೀವನ ಮಟ್ಟ ಕುಸಿಯಬಹುದು. ಅಥವಾ ಸರ್ಕಾರವು ಹೆಚ್ಚಿನ ಬಡ್ದಿ ದರದಲ್ಲಿ ಸಾರ್ವಜನಿಕ ಸಾಲ ತರಬೇಕಾಗುತ್ತದೆ. ಇದರಿಂದಾಗಿ ಇಗಿರುವ ವಿತ್ತೀಯ ಕೊರತೆಯು ಶೇ.2.60ಕ್ಕಿಂತ ಇನ್ನಷ್ಟು ಅಧಿಕಗೊಂಡು ದೀರ್ಘಾವಧಿಯಲ್ಲಿ ಖಾಸಗಿ ಬಂಡವಾಳದ ಹೂಡಿಕೆಯ ಮೇಲೆ ದುಸ್ಪರಿಣಾಮ ಬೀರಿ ರಾಜ್ಯದ ಸ್ವದೇಶಿ ಉತ್ಪನ್ನ ಕಡಿಮೆಯಾಗುವ ಸಾದ್ಯತೆ ಇದೆ. ಆದ್ದರಿಂದ ಈ ಗ್ಯಾರಂಟಿ ಯೋಜನೆಗಳು ದಕ್ಷ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೇಕಿದ ಗ್ಯಾರಂಟಿ ಮೂಲದ ಹಣಕಾಸಿನ ಬೆಂಬಲ. ಆದ್ದರಿಂದ, ಈ ಉದ್ದೇಶಕ್ಕಾಗಿಯೇ ಪ್ರತ್ಯೇಕವಾಗಿ ಒಂದು ‘ಕಾರ್ಪಸ ಫಂಡ್’ ಸೃಷ್ಠಿಸಿ ಅದರಿಂದ ಬರುವ ಬಡ್ಡಿ ಆದಾಯದಿಂದ ಈ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳಿಸುವುದು ಉತ್ತಮ.
- ಡಾ. ಪಾರ್ವತಿ ಕಲಮಡಿ
ಅಥಣಿ
- * * * -