ಬಳ್ಳಾರಿ

ಮುಖ್ಯಮಂತ್ರಿ ಬಾಲಸೇವಾ ಯೋಜನಾ ಅಡಿ 6ಮಕ್ಕಳಿಗೆ ಸಹಾಯಧನ: ಅಪರ ಜಿಲ್ಲಾಧಿಕಾರಿ ಮಂಜುನಾಥ

ಮುಖ್ಯಮಂತ್ರಿ ಬಾಲಸೇವಾ ಯೋಜನಾ ಅಡಿ 6ಮಕ್ಕಳಿಗೆ ಸಹಾಯಧನ: ಅಪರ ಜಿಲ್ಲಾಧಿಕಾರಿ ಮಂಜುನಾಥ

ಬಳ್ಳಾರಿ 26: ಕೋವಿಡ್ ಸಮಯದಲ್ಲಿ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಜಿಲ್ಲೆಯಲ್ಲಿ 3ಜನ ಮಕ್ಕಳಿಗೆ ಈಗಾಗಲೇ ಮಾಸಿಕ 3500ರಂತೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಉಳಿದಂತೆ ಇನ್ನೂ 3 ಜನ ಮಕ್ಕಳನ್ನು ಗುರುತಿಸಿದ್ದು,ಅವರಿಗೆ ದಾಖಲಗೆಳನ್ನು ನೀಡುವಂತೆ ಸೂಚಿಸಲಾಗಿದ್ದು, ಜಿಲ್ಲೆಯ 6 ಜನ ಮಕ್ಕಳು ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಅವರು ಹೇಳಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಕ್ಕಳ ಸಹಾಯವಾಣಿ 1098 ರ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.  

ಕೋವಿಡ್ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಪಡೆಯಿರಿ. ಈಗಾಗಲೇ ಜಿಲ್ಲೆಯಲ್ಲಿ 6 ಜನ ಮಕ್ಕಳನ್ನು ಗುರುತಿಸಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯ ನೀಡುವಲ್ಲಿ ನೆರವಾಗಿ. ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಗಮನಕ್ಕೆ ಬಂದರೆ ಅಂತಹ ಮಾಹಿತಿಯನ್ನು ಜಿಲ್ಲಾಡಳಿತ ಇಲ್ಲವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತಿಳಿಸಿ ಎಂದರು. 

9ಎಫ್‌ಐಆರ್ ದಾಖಲು: 2021ರ ಏಪ್ರಿಲ್‌ನಿಂದ ಜುಲೈ ಅಂತ್ಯದ ವೇಳೆಗೆ 153 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. ಇದರಲ್ಲಿ 33 ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, 120 ಪ್ರಕರಣಗಳ ವರದಿಯನ್ನು ಸಮಿತಿಗೆ ನೀಡಲಾಗಿದೆ. 9 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಕ್ಕಳ ಸಹಾಯವಾಣಿ ಸಂಯೋಜಕರಾದ ಚಿದಾನಂದ ಅವರು ಮಾಹಿತಿ ನೀಡಿದರು.  

ಕೊರೊನಾ ಬಾಧಿತ ಕುಟುಂಬದ 33 ಮಕ್ಕಳಿಗೆ ಮಕ್ಕಳ ಸಹಾಯವಾಣಿ ಕೇಂದ್ರದ ಮೂಲಕ ಆಪ್ತ ಸಮಾಲೋಚನೆ ಮಾಡಿ, ಹತ್ತಿರದ ಪಡಿತರ ವಿತರಣಾ ಕೇಂದ್ರದಿಂದ ರೇಷನ್ ಪಡೆದುಕೊಳ್ಳುವಂತೆ ಮಾಹಿತಿ ನೀಡಲಾಗಿದೆ.  ಏಪ್ರಿಲ್ ನಿಂದ ಜುಲೈ ಅಂತ್ಯದವರೆಗೆ 13 ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಿದ್ದು, 4 ಜನ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ. 9 ಮಕ್ಕಳ ವರದಿಯನ್ನು ಸಮಿತಿಗೆ ನೀಡಲಾಗಿದೆ.1 ಪ್ರಕರಣದಲ್ಲಿ ಮಾಲಿಕನಿಗೆ 20 ಸಾವಿರ ದಂಡ ವಿಧಿಸಲಾಗಿದೆ. ಎಲ್ಲಾ ರೀತಿಯ ಪ್ರಕರಣಗಳು ಸೇರಿದಂತೆ ಒಟ್ಟು 344 ಪ್ರಕರಣಗಳು ದಾಖಲಾಗಿವೆ ಎಂದು ಅವರು ವಿವರಿಸಿದರು. 

ಬಾಲ ಸ್ವರಾಜ್ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸಮಯದಲ್ಲಿ ಒಬ್ಬ ಪೋಷಕರನ್ನು ಕಳೆದುಕೊಂಡ 189 ಮಕ್ಕಳ ಪೈಕಿ ಬಿಪಿಎಲ್ ಕುಟುಂಬದ 107 ಜನ ಮಕ್ಕಳಿಗೆ ವಿಶೇಷ ಪ್ರಾಯೋಜಕತ್ವದಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ವರೆಗೆ ಪ್ರತಿ ತಿಂಗಳು 1 ಸಾವಿರ ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಕಚೇರಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. 2021-22 ನೇ ಸಾಲಿನಲ್ಲಿ 32 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ನೊಂದ 32 ಜನ ಬಾಲಕಿಯರಿಗೆ 1.60 ಲಕ್ಷ ಪರಿಹಾರ ನೀಡಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಆರ್‌.ನಾಗರಾಜ ಮಾತನಾಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು ಮತ್ತು ಸಮಾಲೋಚನೆ ಒಳಗೊಂಡಂತೆ ಸಮಗ್ರ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಸಲುವಾಗಿ ಸಖಿ ಒನ್ ಸ್ಟಾಪ್ ಯೋಜನೆಯಡಿ ಸಖಿ ಒನ್ ಸ್ಟಾಪ್ ಕೇಂದ್ರವನ್ನು ವಿಮ್ಸ್‌ ಗ್ರೌಂಡ್ ಎದುರುಗಡೆಯ ಶಾಂತಿಧಾಮ ಆವರಣದ ಹೊಸ ಕಟ್ಟಡದಲ್ಲಿ ಈಗಾಗಲೇ ಈ ಕಾರ್ಯ ಶುರು ಮಾಡಲಾಗಿದೆ ಎಂದು ತಿಳಿಸಿದರು. 

ಸಿಡಿಪಿಒ ಉಷಾ ಅವರು ಮಾತನಾಡಿ ಸುಳ್ಳು ದಾಖಲೆ ನೀಡಿ, ಹೆಣ್ಣು ಮಕ್ಕಳ ವಯಸ್ಸಿನ ದೃಢೀಕರಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಅಮಾಯಕ ಹೆಣ್ಣು ಮಕ್ಕಳ ಬದುಕು ಕಳೆದುಹೋಗುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಇಂತಹ ಪ್ರಕರಣಗಳನ್ನು ತಡೆಯುವ ಕೆಲಸ ಮಾಡಬೇಕು ಎಂದರು. ಮಾತೃ ವಂದನಾ ಕಾರ್ಯಕ್ರಮದ ಫಲಾನುಭವಿಗಳ ವಿವರ, ಬಾಲ್ಯವಿವಾಹ ತಡೆಯುವ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ಗುರುತಿನಚೀಟಿ ನೀಡುವಿಕೆ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಕ್ಕಳ ಸಹಾಯವಾಣಿಯ ಪೋಸ್ಟರ್ ಬಳಕೆ ಕುರಿತಂತೆ ಹಲವಾರು ವಿಷಯಗಳ ಬಗ್ಗೆ ಈ ಸಮಯದಲ್ಲಿ ಚರ್ಚಿಸಲಾಯಿತು. 

ಮುಖ್ಯಮಂತ್ರಿ ಬಾಲಸೇವಾ ಯೋಜನೆ ಮತ್ತು ಪಿಎಂ ಕೇರ​‍್ಸ‌ ಫಾರ್ ಚೀಲ್ಡ್ರನ್ಸ್‌ಗೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಎಲ್ಲಾ ತಾಲೂಕುಗಳ ಸಿಡಿಪಿಒ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರರು ಇದ್ದರು. 


ಸುದ್ದಿ ಓದಿ