ಸಿನೆಮೋತ್ಸವ; ಅವ್ಯವಸ್ಥೆ, ತಾರತಮ್ಯ ಖಂಡಿಸಿ ಪ್ರತಿಭಟನೆ
ಬೆಂಗಳುರು: ಮಾರ್ಚ್ 07: ನಗರದಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಅವ್ಯವಸ್ಥೆ, ತಾರತಮ್ಯದಿಂದ ಕೂಡಿದೆ ಎಂದು ಸಮಾನಮನಸ್ಕ ಯುವಕರ ಗುಂಪೊಂದು ಪ್ರತಿಭಟನೆ ನಡೆಸಿತು.
ಇಂದು ಚಿತ್ರೋತ್ಸವ ನಡೆಯುತ್ತಿರುವ ಒರಾಯನ್ ಮಾಲ್ ಚಿತ್ರಮಂದಿರಗಳ ಎದುರು ನಿಂತಿದ್ದ ಯುವಕರ ಗುಂಪು ಮಣಿಕಟ್ಟಿಗೆ, ತೋಳಿಗೆ, ಕುತ್ತಿಗೆಗೆ ಕಪ್ಪುಪಟ್ಟಿಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಯು.ಎನ್.ಐ. ಪ್ರತಿನಿಧಿ ಜೊತೆ ಮಾತನಾಡಿದ ಈ ಯುವಕರು ತಮ್ಮನ್ನು ಸಮಾನ ಮನಸ್ಕರು ಎಂದು ಪರಿಚಯಿಸಿಕೊಂಡರು.
ಇಂದಿಗೆ ಚಿತ್ರೋತ್ಸವ ಆರಂಭವಾಗಿ ಉದ್ಘಾಟನೆ ದಿನವೂ ಸೇರಿ ಐದು ದಿನವಾಗಿದೆ. ಇಷ್ಟು ದಿನವಾದರೂ ಸಿನೆಮಾಗಳ ಸಾರಾಂಶ ಇರುವ ಫೆಸ್ಟಿವಲ್ ಬುಕ್ ಇರುವ ಕಿಟ್ ವಿತರಣೆಯಾಗಿಲ್ಲ. ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆಯಾದ ನಂತರ ಅದು ಮರುದಿನವೇ ಹಣಕೊಟ್ಟು ಪಾಸು ಪಡೆದವರಿಗೆ ವಿತರಿಸುವ ಜವಾಬ್ದಾರಿ ಕರ್ನಾಟಕ ಚಲನಚಿತ್ರ ಅಕಾಡೆಮಿಯದ್ದಾಗಿತ್ತು. ಇದನ್ನು ಅಕಾಡೆಮಿ ಮರೆತಿದೆ ಎಂದು ನಾಗಭೂಷಣ್ ಆಕ್ರೋಶ ವ್ಯಕ್ತಪಡಿಸಿದರು.
ಮುರುಳಿ ಮನೋಹರ ಕಾಟಿ ಮಾತನಾಡಿ ಉದ್ಘಾಟನಾ ಸಮಾರಂಭದಂದು ಆಸಕ್ತರಿಗೆ ಫೆಸ್ಟಿವಲ್ ಪುಸ್ತಕ ದೊರೆಯದಿದ್ದರೂ ಮರುದಿನ ಸಿನೆಮೋತ್ಸವ ನಡೆಯುವ ಮುಖ್ಯ ಚಿತ್ರಮಂದಿರದಲ್ಲಿ ಫೆಸ್ಟಿವಲ್ ಕಿಟ್ ಲಭ್ಯವಾಗುತ್ತಿತ್ತು. ಈ ಬಾರಿ ಐದು ದಿನವಾದರೂ ದೊರೆತಿಲ್ಲ. ಬೆಂಗಳೂರಿನಂಥ ನಗರದಲ್ಲಿ ಕೆಲವೇ ತಾಸಿನಲ್ಲಿ ಸಾವಿರಾರು ಪ್ರತಿಗಳನ್ನು ಮುದ್ರಣ ಮಾಡಿ ಕೊಡುವ ಪ್ರೆಸ್ ಗಳಿವೆ. ಹೀಗಿರುವಾಗ ಐದು ದಿನವಾದರೂ ಪುಸ್ತಕ ಆಸಕ್ತರಿಗೆ ದೊರೆತಿಲ್ಲ ಅಂದರೆ ಏನರ್ಥ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನೋಡಿದಾಗ ಬೇರೆಬೇರೆ ವರ್ಷಗಳಲ್ಲಿ ಒಂದೇ ಹೆಸರು ಅಥವಾ ಅದೇ ಹೆಸರು ಹೋಲುವ ಬೇರೆಬೇರೆ ಸಿನೆಮಾಗಳು ಬಂದಿರುತ್ತವೆ. ಇಂಟರ್ ನೆಟ್ ನಲ್ಲಿ ಹುಡುಕುವುದು ಗೊಂದಲ ಮೂಡಿಸುತ್ತದೆ. ಕೈಯಲ್ಲಿ ಸಿನೆಮಾಗಳ ಸಾರಂಶ, ತಂತ್ರಕ್ಞರ ವಿವರ ಇರುವ ಪುಸ್ತಕ ದೊರೆತರೆ ಈ ಗೊಂದಲವಾಗುವುದಿಲ್ಲ. ಅದಕ್ಕಾಗಿಯೇ ಸಾಮಾನ್ಯ ಎಲ್ಲ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗಳಲ್ಲಿಯೂ ಫೆಸ್ಟಿವಲ್ ಪುಸ್ತಕ ನೀಡುವ ಕಾರ್ಯ ಮಾಡುತ್ತಾರೆ ಎಂದು ಅರುಣ್ ಹೇಳಿದರು. ಈ ಮಾತಿಗೆ ಪ್ರಸಾದ್, ಕೆಂಪೇಗೌಡ ದನಿಗೂಡಿಸಿದರು.
ಈ ಬಾರಿಯ 13ನೇ ಚಿತ್ರೋತ್ಸವ ನೋಡಿದರೆ ಸಿನೆಮಾಗಳ ಆಯ್ಕೆ ನಿಷ್ಪಕ್ಷಪಾತವಾಗಿ ನಡೆದಿಲ್ಲ. ಇದಕ್ಕೆ ಪೆದ್ರೋ, ನೀಲಿಹಕ್ಕಿ ಪ್ರಮುಖ ಉದಾಹರಣೆಗಳು. ಇವೆರಡು ಸಿನೆಮಾಗಳು ಭಾರತದ ಇತರೆಡೆ ನಡೆಯುವ ಅಂತರಾಷ್ಟ್ರೀಯ ಸಿನೆಮೋತ್ಸವಗಳಿಗೆ ಆಯ್ಕೆಯಾಗಿವೆ. ಇಲ್ಲಿ ಆಯ್ಕೆಯಾಗದಿರುವುದು ಅನೇಕ ಪ್ರಶ‍್ನೆಗಳನ್ನು ಮೂಡಿಸಿದೆ ಎಂದು ಅರುಣ್ ಹೇಳಿದರು.
ಚಿತ್ರೋತ್ಸವ ಮುಕ್ತಾಯವಾಗುವ ತನಕ ನಾವು ಸಿನೆಮಾ ನೋಡಲು ಬಂದಾಗಲೆಲ್ಲ ಕಪ್ಪುಪಟ್ಟಿ ಧರಿಸಿಯೇ ಬರುತ್ತೇವೆ ಎಂಬುದು ಈ ಯುವಕರ ಒಕ್ಕೂರಲಿನ ಮಾತು.