ಲೇಖನಗಳು

ವಾಣಿ ಭಂಡಾರಿಯವರ ಮೌನಧ್ಯಾನಿ ಕವಿತೆಯಲ್ಲಿ ಸ್ತ್ರೀವಾದಿ ಧೋರಣೆ

ವಾಣಿ ಭಂಡಾರಿಯವರ ಮೌನಧ್ಯಾನಿ ಕವಿತೆಯಲ್ಲಿ ಸ್ತ್ರೀವಾದಿ ಧೋರಣೆ

ಮಲೆನಾಡಿನ ಸಸ್ಯಶ್ಯಾಮಲತೆಯಲ್ಲಿ ಬೆಳೆದಿರುವ ಸಮಕಾಲಿನ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಸಾಹಿತ್ಯದಲ್ಲಿ  ಧ್ಯಾನಸ್ಥರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಿವಮೊಗ್ಗದ ವಾಣಿ ಭಂಡಾರಿಯವರು ಗಜಲ್, ಕವಿತೆ, ವಚನ, ವಿಮರ್ಶೆ, ಕತೆ, ಅಂಕಣ ಬರಹ, ಹೀಗೆ ಅನೇಕ ರೀತಿಯ ಬರಹಗಳನ್ನು ಬರೆಯುತ್ತಿರುವ ಬಹುಮುಖ ಪ್ರತಿಭೆ. ಏಳುಬೀಳುಗಳ ನಡುವೆ ನಿರಂತರ ಸಾಹಿತ್ಯ ಕೃಷಿಗೈಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ... ಅವರ ಒಂದು ಹೊಸ ಕವಿತೆಯನ್ನು ನಿಮ್ಮ ಮುಂದೆ ತಂದಿರುವೆ.  

ಮಾತಿಲ್ಲದ ಮಹಿಳೆಯ ನೋವಿನ ಸ್ಥಿತಿಯನ್ನು ಅವುಡುಗಚ್ಚಿ ನುಂಗಿದ,ಅವಳ  ಧೈರ್ಯವನ್ನು, ಗಟ್ಟಿತನವನ್ನು ಈ ಕವಿತೆಯಲ್ಲಿ ಅಭಿವ್ಯಕ್ತಿಸಿದ್ದಾರೆ.  

ಗೆಳತಿಗೆ ಹೇಳುವಂತಿರುವ ಈ ಕವಿತೆ ಹೀಗೆ ಸಂಭೋದಿಸುವುದರಲ್ಲಿಯೂ ಒಂದು ಅರ್ಥವಿದೆ. ಇದು ನನ್ನ ನೋವಷ್ಟೆ ಅಲ್ಲ, ನಿಮ್ಮೆಲ್ಲರದೂ ಎನ್ನುವಂತಹ ಅರ್ಥ ಅಡಗಿದೆ. ಕವಿತೆಯ ಆರಂಭದ ಸಾಲುಗಳೇ ತಾನು ಹೆದರದೆ ತಾನಿರುವ ಸ್ಥಿತಿಯನ್ನು ಎದುರಿಸುತ್ತೇನೆ ಎಂಬ ಸ್ಥಿತಪ್ರಜ್ಞ ಭಾವವನ್ನು ವ್ಯಕ್ತಮಾಡುತ್ತವೆ.  

ಈ ಮೌನ ಎಷ್ಟು ಹಿತವಾಗಿದೆ ನೋಡು!. ಎಂದು ಉದ್ಗರಿಸುವ ಕವಯತ್ರಿ ಆ ನೋವನ್ನು ಎದೆಯೊಡ್ಡಿ ನಿಂತ ಗೊಮ್ಮಟನ ಶಾಶ್ವತ ನಿರಾಕಾರಕ್ಕೆ ಹೋಲಿಸುತ್ತಾರೆ. ಅಂದರೆ ಹೆಣ್ಣಿನ ಮೌನ, ನೋವು ಇಂದು ನಿನ್ನೆಯದಲ್ಲ,ಏನೇ ಬದಲಾದರೂ ಅದು ಹೆಣ್ಣನ್ನು ಬಿಡದು ಎನ್ನುತ್ತಾ ಗೊಮ್ಮಟ ನಿಂತ ಸ್ಥಿತಿಯನ್ನು ಅಲೆಯ ಹೊಡೆತಕ್ಕೆಲ್ಲ ಒಂದು ತಡೆಗೋಡೆಯಂತೆ ಹಲವು ಪದರಗಳ ತೆರೆದು  

ರಾಗ ದ್ವೇಷಗಳಾಚೆ ಶೂನ್ಯಕ್ಕೆ ಎದೆಯೊಡ್ಡಿ ನಿಂತ ಆ ಗೊಮ್ಮಟನಂತೆ ಅವಳ ಮೌನವಿದೆಯಂತೆ.ಅದು ಬಗೆದಷ್ಟೂ ಆಳಕ್ಕಿಳಿವ,ಹೀರಿದಷ್ಟು ತೇವ ನುಂಗುವ ಆಳ ಅದರದು. ಅದು ಉತ್ತರವೆ ಇಲ್ಲದ ಪ್ರಶ್ನೆ.ಹೆಣ್ಣು ಮೌನ ದರಿಸಿ ಎಷ್ಟೊ ಶತಮಾನಗಳಾಗಿದೆ. ಯಾರಾದರೂ ಆಕೆಗೆ ಮಾತಾಡಲು ಅವಕಾಶ ಕೊಟ್ಟಿದ್ದಾರೆಯೆ? ಎಂಬ ಪ್ರಶ್ನೆಗೆ ಉತ್ತರ ನಕಾರವೆ! ಈ ಮೌನದ ಸ್ಥಿತಿಯನ್ನು ಪ್ರಶ್ನಿಸದೆ ಸಹಿಸಬೇಕು ಎಂಬುದನ್ನು ಅವಳು ಕಲಿತಿದ್ದಾಳೆ.  

ಮತ್ತೆ ಮತ್ತೆ ಕೇಳಿದರೂ ಒಂದೇ ಉತ್ತರ  

"ಬಿಸಿಲು ಬೇಗೆ ಚಳಿ ಮಳೆ  

ತಡೆಯಬೇಕಲ್ಲವೆ ಜೀವ"  

ಹೀಗೆ ನಿಸರ್ಗದಲ್ಲಿ ಋತುಮಾನ ಬದಲಾಗಬಹುದು,  

ಅದರೆ ಆಕೆಯ ಮೌನದ ಸ್ಥಿತಿ ಬದಲಾಗದು.ಅಲ್ಲಿನ ಬದಲಾವಣೆಗಳನ್ನು ಕವಿತೆ ತಂಗಾಳಿ ಬಿರುಗಾಳಿ ಏಳುವದು ಸಹಜ ಎಂಬುದನ್ನು ಈ ರೀತಿಯಾಗಿ  

"ಒಮ್ಮೊಮ್ಮೆ ಒದ್ದೆ ನೆಲದ ಜೋಗುಳ   

ಮಗದೊಮ್ಮೆ ಮರುಭೂಮಿ ಬೇಗೆ ತಲ್ಲಣ"   

ಇವೆಲ್ಲ ಆಗುತ್ತಿರುವುದು ಬರೀ ನಿಸರ್ಗದಲ್ಲಿ ಮಾತ್ರವಲ್ಲ, ಹೆಣ್ಣು ಕೂಡ ಒಂದು ಪ್ರಕೃತಿಯೇ.  

ಆಕೆ ಮೌನವಾಗಿಯೆ ಈ ಎಲ್ಲ ತಂಗಾಳಿ, ಬಿರುಗಾಳಿ ತಲ್ಲಣಗಳನ್ನು ಸಹಿಸಿದ್ದಾಳೆ ಸಹಿಸುತ್ತಿದ್ದಾಳೆ.  

"ಎದೆಯ ತುಂಬ ಗಾಯ ಹೊದ್ದರೂ  

 ಕೆಂಪು ಹಡಗಿನಂತೆ ಎಲ್ಲ ಹೊತ್ತು  

ಒಂಟಿಯಾಗಿ ಸಾಗಲೇಬೇಕು"  

ಎನ್ನುವ ಕವಿಯತ್ರಿಯದು ಸ್ವಾಭಿಮಾನಿಯಾದ ಬದುಕು. ತನ್ನ ನಂತರದ ಕಿರಿಯರಾರೂ,  

ಸಮಕಾಲೀನರಾರೂ ಈ ನೋವಿಗೆ ಹೆದರಬಾರದು.ಮೌನದ ಅಸಹನೀಯತೆಯನ್ನು ಸಹಿಸಲೇಬೇಕೆಂದು ಸಾಂತ್ವನ ಪಡಿಸಲು ಇತಿಹಾಸ ಪುರಾಣಗಳ ಮೊರೆ ಹೋಗುತ್ತಾರೆ.   

ಈ ಮೌನ ಕುಂತಿ, ದ್ರೌಪದಿ, ಅಹಲ್ಯೆ,  

ಸೀತೆ, ಊರ್ಮಿಳೆ, ಶೂರ​‍್ನಖಿ ಇವರಿಗೆಲ್ಲ ಬೇರೆ ಬೇರೆ ರೂಪದಲ್ಲಿ ಬಂದು ನಲುಗಿಸಿತು. ನೋವಿನ ಹೆಸರಷ್ಟೇ ಬೇರೆ ಕೊಡುವ ನೋವು ಮಾತ್ರ ಅದೇ. ಬೆಂಕಿ ಯಾವ ಕಟ್ಟಿಗೆಯದಾದರೇನು? ಸುಡುವುದೆ ಅಲ್ಲವೇ. ಅಂತೆಯೆ ಕವಯತ್ರಿ ಹೀಗೆ ಹೇಳುತ್ತಾರೆ.   

"ಯಾರಿಗಿಲ್ಲ ಹೇಳು ನೋಡೋಣ  

ಕುಂತಿಯ ಕಂತೆ ಕಂತೆ ನೋವು ನೋವು  

ದ್ರೌಪದಿಯ ಒಡಲು ನುಂಗಿದ ಬೇವು  

ಅಹಲ್ಯೆಯ  ಹೊಯ್ದಾಟ  

ಸೀತೆಯ ಬೇಗುದಿ  ಪ್ರೀತಿಗೆ ಗಡಿಪಾರು  

ಊರ್ಮಿಳೆಯ ಕನವರಿಕೆ  

ಶೂರ​‍್ನಖಿಯ ಅವಮಾನ"  

ಈ ಎಲ್ಲ ಮಹಿಳೆಯರು ಒಂದಲ್ಲ ಒಂದು ರೀತಿ ಮೌನಕ್ಕೆ ಶರಣಾದವರೆ, ಮಾತು ಕಳೆದುಕೊಂಡವರೇ.  

ಒಂದೊಂದು ಸಾಲಿನ ಹಿಂದೆಯೂ ದೀರ್ಘ ಕಥೆಗಳೇ ಇವೆ. ಅದನ್ನೆಲ್ಲ ಒಂದೊಂದೇ ಸಾಲಿನಲ್ಲಿ ಹಿಡಿದಿಟ್ಟಿರುವ ಕವಯತ್ರಿಯ ಕಾವ್ಯ ಕೌಶಲ್ಯವೂ ದೊಡ್ಡದೇ. ಹದಿನಾಲ್ಕು ವರ್ಷ ಮೌನವಾಗಿದ್ದ ಊರ್ಮಿಳೆಯಂಥವರನ್ನು ಯಾರಾದರೂ  ಎಂದಾದರೂ ಕೇಳಿದ್ದಾರೆಯೆ? ಉತ್ತರ ಸಿಗದು.  

ಹಾಗಾದರೆ ಈ ಎಲ್ಲರೂ ಅನುಭವಿಸಿದ ನೋವು ಆಧುನಿಕ ಕಾಲದವರ ಮುಂದೆ ಮಿಗಿಲೇನಲ್ಲ ಎನ್ನುತ್ತಾರೆ ಕವಯಿತ್ರಿ. ಇದು ಕಲಿಗಾಲ ಎಲ್ಲವೂ ತುಸು ಹೆಚ್ಚೇ ಅಲ್ಲವೇ? ಅದಕ್ಕೆ ಕವಿತೆ  

"ಎಲ್ಲ ಇಲ್ಲವೆಂದು ಹೇಗೆ ಹೇಳಲಿ?  

ಅವಕ್ಕಿಂತ ತುಸು ಮಿಗಿಲೇ   

ಕಲಿಯುಗ ತಾನೇ!"  

ಕವಿತೆಯ ಧನಾತ್ಮಕ ಅಂಶವೆಂದರೆ ಇಲ್ಲಿ ಉಳಿದ   

ಸ್ತ್ರೀವಾದಿ ಕವಿತೆಯಂತೆ ಎಲ್ಲಿಯೂ ತನಗೆ ಈ ಸ್ಥಿತಿಯನ್ನು ತಂದೊದಗಿದ ವ್ಯವಸ್ಥೆಯನ್ನು ಪುರುಷ ವರ್ಗವನ್ನು ಕವಿತೆ ಎಲ್ಲಿಯೂ ದೂಷಿಸುವುದಿಲ್ಲ. ಇದು ನನ್ನ ಸ್ಥಿತಿ ಹೀಗಿದ್ದೇನೆ ಇರುತ್ತೇನೆ ಎಂಬ ವಾಸ್ತವದ ನಿರುದ್ವಿಗ್ನ ಶೈಲಿ ಅವರದು.ತನಗೂ ಒಂದು ದಿನ ಮಾತಾಡುವ ಸರದಿ ಬರಬಹುದೆಂದು ಅವಳು ಕಾಯುತ್ತಿದ್ದಾಳೆ.  

ಶಬರಿ ಎಂದೊಡನೆ ನಮಗೆ ರಾಮ ನೆನಪಾಗುತ್ತಾನೆ. ಆದರೆ ಈಕೆ ಕಾಯುವುದು ರಾಮನಿಗಾಗಿ ಅಲ್ಲ. ರಾಮ ಇವಳ ಗಮ್ಯವೂ ಅಲ್ಲ. ಇಲ್ಲಿ ನಮಗರಿಯದಂತೆ ಕವಿತೆಯಲ್ಲಿ ಆಕ್ರೋಶ ಅಡಗಿರುವುದು ವ್ಯಕ್ತವಾಗಿದೆ. ರಾಮನೆಂದರೆ ಆಕೆಗೆ ಅಂತಹ ಗೌರವವೇನೂ ಇರುವಂತೆ ಕಾಣುತ್ತಿಲ್ಲ. ಹಾಗಂತ ರಾಮನನ್ನು ಟೀಕಿಸಿಲ್ಲ.  

"ಕಾಯುತಿರುವೆ ಶಬರಿಯಂತೆ  

ರಾಮನಿಗಾಗಿ ಅಲ್ಲ,  

ಪುನೀತಳಾಗಲು ರಾಮನೇ ಬೇಕೆಂದಿಲ್ಲ".  

ಆಕೆಯದು ದೃಢ ನಿರ್ಧಾರ.  

"ಕಾಲದ ಪರಿವರ್ತನೆಗಾಗಿ  

ಕಲ್ಲಾಗಿ ನಾಳಿನ ಶಿಲೆಗೆ  

ಅವುಡುಗಚ್ಚಿ ಉಳಿಪೆಟ್ಟನೆಲ್ಲ  

ನುಂಗುತಿರುವೆ  

ಮೌನಧ್ಯಾನಿಯಂತೆ"  

ಮೌನಧ್ಯಾನಿ ಅವಳಿಗೆ ಅತ್ಯಂತ ಸೂಕ್ತಪದ. ಅವಳು ದುಃಖವನ್ನು ಯಾರ ಮುಂದೆಯೂ ವ್ಯಕ್ತ ಮಾಡಲಾರಳು.ಅದರ ಅವಶ್ಯಕತೆ ಅವಳಿಗೆ ಕಾಣದು ಯಾಕೆಂದರೆ ಅವಳು ಅಬಲೆಯಲ್ಲ ಆಕೆ ಸಬಲೆ. ಅದನ್ನು ನುಂಗುವ ಶಕ್ತಿ  ನನಗಿದೆ ನಾನು ಯಾರನ್ನು ಬೇಡುವದಿಲ್ಲ ಕಾಲ ಪರಿವರ್ತನೆಯಾಗುತ್ತದೆ. ಈ ಮೌನ, ಈ ದುಃಖ ಇನ್ನೂ ಹೆಚ್ಚಬಹುದು. ಆಗಲೂ ನಾನು "ಕಲ್ಲು ಉಳಿ ಪೆಟ್ಟು ತಿಂದು ನೋವು ನುಂಗುವಂತೆ" ಶಿಲೆಯಾಗಲು ನಾನು ನುಂಗುತ್ತೇನೆ ಎನ್ನುವುದೇ ಇಲ್ಲಿನ ಧೃಢ ನಿರ್ಧಾರವಾಗಿದೆ.  

"ಮೌನಧ್ಯಾನಿ" ಎನ್ನುವ ಪದವಂತೂ ಅವಳಿಗವಳೇ ಸರಿಸಾಟಿ ಎಂಬುದನ್ನು ಸಾರುತ್ತದೆ. ಸ್ತ್ರೀವಾದಿ ಕವಿತೆಯನ್ನ ಇಷ್ಟು ತಣ್ಣಗಿನ ದನಿಯಲ್ಲಿ ಅರ್ಥಪೂರ್ಣವಾಗಿ ವಿಚಾರವಂತಿಕೆಯಿಂದ ಅಭಿವ್ಯಕ್ತಿಸಿರುವುದು ಕವಿತೆಯ ತೂಕವನ್ನು ಹೆಚ್ಚಿಸಿದೆ. 


ಡಾ.ವೈ.ಎಂ.ಯಾಕೊಳ್ಳಿ 

           ಸವದತ್ತಿ   

ಮೊ. 9731970857 


- * * * - 


ಸುದ್ದಿ ಓದಿ