ಹೂವಿನ ಹಡಗಲಿ

ವಿದ್ಯಾರ್ಥಿನಿಯರೇ ಅಭ್ಯರ್ಥಿಗಳು, ಮತದಾರರು: ಯುವ ಸಂಸತ್ ಚುನಾವಣೆ

ವಿದ್ಯಾರ್ಥಿನಿಯರೇ ಅಭ್ಯರ್ಥಿಗಳು, ಮತದಾರರು: ಯುವ ಸಂಸತ್ ಚುನಾವಣೆ


ಹೂವಿನಹಡಗಲಿ     23: ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ‘ಯುವ ಸಂಸತ್ ಚುನಾವಣೆ’ ಆಯೋಜಿಸಲಾಯಿತು.  

 ಒಟ್ಟು 30 ವಿದ್ಯಾರ್ಥಿನಿಯರು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, 600 ವಿದ್ಯಾರ್ಥಿನಿಯರು ಮತದಾರರಾಗಿ ನೋಂದಾಯಿಸಿಕೊಂಡಿದ್ದರು. ಶೇ.85ರಷ್ಟು ವಿದ್ಯಾರ್ಥಿನಿಯರು ಮತ ಚಲಾಯಿಸಿದರು. ನೈಜ ಚುನಾವಣಾ ವ್ಯವಸ್ಥೆಯನ್ನು ಹೋಲುವಂತೆ ಮತದಾರರ ಪಟ್ಟಿ, ಮತಪತ್ರ, ಮತಗಟ್ಟೆ ಹಾಗೂ ಮತದಾನ ಪ್ರಕ್ರಿಯೆಯನ್ನು ಸಿದ್ಧಪಡಿಸಲಾಗಿತ್ತು.  

 ಚುನಾವಣೆಗೆ ಮುನ್ನ ಅಭ್ಯರ್ಥಿಗಳು ಮತ್ತು ಮತದಾರರ ನಡುವೆ ಸಂವಾದ ಕಾರ್ಯಕ್ರಮ ಏರಿ​‍್ಡಸಲಾಗಿತ್ತು. ಅಭ್ಯರ್ಥಿಗಳು ತಮ್ಮ ವಿಚಾರಗಳು ಹಾಗೂ ಆದ್ಯತೆಗಳನ್ನು ಮಂಡಿಸಿದರೆ, ಮತದಾರರು ಪ್ರಶ್ನೆಗಳನ್ನು ಕೇಳಿ ತಮ್ಮ ನಿರ್ಧಾರ ಕೈಗೊಳ್ಳಲು ಅವಕಾಶ ಪಡೆದರು.  

 ವಿದ್ಯಾರ್ಥಿನಿಯರೇ ಅಭ್ಯರ್ಥಿಗಳು, ಮತದಾರರು ಹಾಗೂ ಚುನಾವಣಾ ಸಿಬ್ಬಂದಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಮತದಾರರ ಪಟ್ಟಿ ಸಿದ್ಧತೆ, ಮತದಾನ, ಮತಗಟ್ಟೆ ಶಿಸ್ತು ಮತ್ತು ಭದ್ರತಾ ವ್ಯವಸ್ಥೆಯಲ್ಲೂ ಭಾಗವಹಿಸಿದರು.  

 ಕಾರ್ಯಕ್ರಮದ ಮೂಲಕ ಮತದಾನದ ಹಕ್ಕು, ಚುನಾವಣಾ ನಿಯಮಗಳು, ಮತದಾರರ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಅರಿವು ಮೂಡಿಸಲಾಯಿತು.  

 ಕಾಲೇಜಿನ ಪ್ರಾಚಾರ್ಯ ಕೋಟ್ರಗೌಡ್ರ ಅಯ್ಯನಗೌಡ್ರ ಮಾತನಾಡಿ, “ಚುನಾವಣೆ ಎಂದರೆ ಕೇವಲ ಮತ ಚಲಾಯಿಸುವ ಪ್ರಕ್ರಿಯೆಯಲ್ಲ; ಅದು ಜವಾಬ್ದಾರಿಯುತ ನಾಗರಿಕತೆಯ ಅಭ್ಯಾಸ. ಅಭ್ಯರ್ಥಿಗಳು ಮತ್ತು ಮತದಾರರ ನಡುವಿನ ಸಂವಾದವು ಪ್ರಶ್ನಿಸುವ ಹಾಗೂ ವಿಚಾರಗಳನ್ನು ಚರ್ಚಿಸುವ ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಬೆಳೆಸುತ್ತದೆ” ಎಂದರು.  

 ಹಾಲೇಶ ಮತ್ತು ದುಷ್ಯಂತ್ ಅವರ ನಿರ್ವಹಣೆಯಲ್ಲಿ ಚುನಾವಣೆ ನಡೆಯಿತು. ಬಸೆಟ್ಟಿ ಪ್ರಕಾಶ್, ಶಿವಕುಮಾರ್, ನಟರಾಜ್ ಪಾಟೀಲ್, ಶ್ರೀಕಾಂತ್ ಬಂಡಿಹಾಳ್, ವೀರೇಶ್, ಆರತಿ, ಮಂಜುನಾಥ್, ಉಮಾ, ಪರಂಜ್ಯೋತಿ, ರಶ್ಮಿ, ಶಂಕರ್, ಹರ್ಷಿತ್ ಹಾಗೂ ಪರಶುರಾಮ ನಾಗೋಜಿ ವಿವಿಧ ಹಂತಗಳ ಉಸ್ತುವಾರಿ ವಹಿಸಿದ್ದರು.  

 ವಿದ್ಯಾರ್ಥಿನಿಯರೇ ಚುನಾವಣಾ ಪ್ರಕ್ರಿಯೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಈ ಯುವ ಸಂಸತ್ ಚುನಾವಣೆ, ಚುನಾವಣಾ ಸಾಕ್ಷರತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಭವದ ಮೂಲಕ ಕಲಿಸುವ ಶೈಕ್ಷಣಿಕ ಪ್ರಯತ್ನವಾಗಿ ಗಮನ ಸೆಳೆಯಿತು. 


ಸುದ್ದಿ ಓದಿ