ಹೂವಿನ ಹಡಗಲಿ

ಸೇವಾ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ

ಸೇವಾ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ


ಹೂವಿನಹಡಗಲಿ, ಸೆ.25: ಅಂಗನವಾಡಿ ಕಾರ್ಯಕರ್ತೆಯರು ತಾವು ಪಡೆಯುವ ಗೌರವಧನಕ್ಕಿಂತ ಮಿಗಿಲಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆಯಿಂದ ಮಕ್ಕಳು ಸಂಸ್ಕಾರ ಮತ್ತು ಶಿಸ್ತನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಅಂಗನವಾಡಿ ಮೇಲ್ವಿಚಾರಕಿ ಡಿ. ಹನುಮಕ್ಕ ಅಭಿಪ್ರಾಯಪಟ್ಟರು.  

ತಾಲೂಕಿನ ನಾಗತಿಬಸಾಪುರ ಗ್ರಾಮದ ಅಂಗನವಾಡಿಯಲ್ಲಿ ಗುರುವಾರ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ಎಚ್‌.ಬಿ. ಶಾಂತ ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.  

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಬಿ. ಜಯಲಕ್ಷ್ಮೀ ಮಾತನಾಡಿ, ಮಕ್ಕಳ ಹಿತಕ್ಕಾಗಿ ಎಚ್‌.ಬಿ. ಶಾಂತ ಅವರು ಹಲವು ವರ್ಷಗಳಿಂದ ತೋರಿದ ಕಾಳಜಿ ಹಾಗೂ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.  

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎಚ್‌.ಬಿ. ಶಾಂತ ಮಾತನಾಡಿ, 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನಕ್ಕೆ ಕಾಲಿಡುತ್ತಿದ್ದೇನೆ. ತಮ್ಮೆಲ್ಲರ ಪ್ರೀತಿ, ವಿಶ್ವಾಸ ಸದಾಕಾಲ ಹೀಗೆಯೇ ಇರಲಿ ಎಂದು ಹೇಳಿದರು.  

ಈ ಸಂದರ್ಭದಲ್ಲಿ ನಿವೃತ್ತ ಕಾರ್ಯಕರ್ತೆ ಶಾಂತ ಅವರನ್ನು ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ